Site icon Vistara News

Morocco Earthquake: ಮೊರಾಕೋದಲ್ಲಿ ಭಾರಿ ಭೂಕಂಪ, 296 ಜನ ಬಲಿ, ಮೋದಿ ಸಂತಾಪ

Morocco Earthquake

ರಬಾತ್:‌ ಉತ್ತರ ಆಪ್ರಿಕಾದ ದೇಶವಾದ ಮೊರಾಕೊದಲ್ಲಿ ಶುಕ್ರವಾರ ರಾತ್ರಿ 6.8 ತೀವ್ರತೆಯ ಪ್ರಬಲ ಭೂಕಂಪ (Morocco Earthquake) ಸಂಭವಿಸಿದ್ದು, ಕನಿಷ್ಠ 296 ಜನರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಅಂತರಿಕ ಸಚಿವಾಲಯ ತಿಳಿಸಿದೆ.

ಸದ್ಯದ ವರದಿಗಳ ಪ್ರಕಾರ ಮೊರಾಕೋದ ಅಲ್-ಹೌಜ್, ಮರ್ರಾಕೇಶ್, ಔರ್ಜಾಝೇಟ್, ಅಜಿಲಾಲ್, ಚಿಚೌವಾ ಮತ್ತು ತಾರೌಡಾಂಟ್ ಪ್ರಾಂತ್ಯಗಳಲ್ಲಿ ಭೂಮಿ ಕಂಪಿಸಿದ್ದು, 296 ಜನ ಸತ್ತಿದ್ದಾರೆ ಎಂದು ತಿಳಿಸಲಾಗಿದೆ. ನೂರಾರು ಜಡನರು ಗಾಯಗೊಂಡಿದ್ದಾರೆ ಮತ್ತು ಆಸ್ಪತ್ರೆಗೆ ದಾಖಲಾಗಿದ್ದಾರೆ.

ದೇಶದ ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾದ ಐತಿಹಾಸಿಕ ಮರ್ಕೆಚ್‌ನ ಹಳೆಯ ಕಟ್ಟಡಗಳು ನಾಶವಾಗಿರುವ, ಧ್ವಂಸಗೊಂಡಿರುವ, ಪ್ರಸಿದ್ಧ ಕೆಂಪು ಗೋಡೆ ಹಾನಿಗೊಳಗಾಗಿರುವುದನ್ನು ತೋರಿಸುವ ವೀಡಿಯೊಗಳನ್ನು ಸ್ಥಳೀಯ ನಿವಾಸಿಗಳು ಪೋಸ್ಟ್ ಮಾಡಿದ್ದಾರೆ. ಪ್ರವಾಸಿಗರು ಮತ್ತು ಇತರರು ಆತಂಕದಿಂದ ಬೊಬ್ಬಿಡುವ, ನಗರದ ರೆಸ್ಟೋರೆಂಟ್‌ಗಳಿಂದ ಜನ ಹೊರಗೋಡಿಬರುವ ವೀಡಿಯೊಗಳನ್ನೂ ಪೋಸ್ಟ್ ಮಾಡಿದ್ದಾರೆ.

ರಾತ್ರಿ 11:11 ಗಂಟೆಗೆ ಭೂಕಂಪ ಸಂಭವಿಸಿದಾಗ 6.8ರ ಪ್ರಾಥಮಿಕ ತೀವ್ರತೆಯನ್ನು ಹೊಂದಿದ್ದು, ಹಲವಾರು ಸೆಕೆಂಡುಗಳ ಕಾಲ ನಡುಗಿತು ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಹೇಳಿದೆ. ಮೊರಾಕೊದ ರಾಷ್ಟ್ರೀಯ ಭೂಕಂಪನ ಮಾನಿಟರಿಂಗ್ ಮತ್ತು ಅಲರ್ಟ್ ನೆಟ್‌ವರ್ಕ್ ಇದನ್ನು ರಿಕ್ಟರ್ ಮಾಪಕದಲ್ಲಿ 7 ಎಂದು ಅಳೆಯಿತು.

ಭೂಕಂಪನವು ಪ್ರಮುಖ ನಗರಗಳಲ್ಲಿನ ಕಟ್ಟಡಗಳನ್ನು ಹಾನಿಗೊಳಿಸಿದೆ. ರಾಜಧಾನಿ ರಬಾತ್‌, ಅತಿ ಹೆಚ್ಚು ಜನ ಭೇಟಿ ನೀಡುವ ಪ್ರವಾಸಿ ತಾಣವಾದ ಮರ್ರಾಕೆಚ್‌ ಮುಂತಾದೆಡೆ ಭಯಭೀತರಾದ ಜನ ಮನೆಗಳಿಂದ ಬೀದಿಗಳಿಗೆ ಬಂದರು.

ಶುಕ್ರವಾರದ ಕಂಪನದ ಕೇಂದ್ರಬಿಂದುವು ಅಟ್ಲಾಸ್ ಪರ್ವತಗಳಲ್ಲಿ ಮರ್ಕೆಚ್‌ನಿಂದ ಸುಮಾರು 70 ಕಿಲೋಮೀಟರ್‌ಗಳಷ್ಟು ದಕ್ಷಿಣದಲ್ಲಿದೆ. ಇದು ಉತ್ತರ ಆಫ್ರಿಕಾದ ಅತ್ಯುನ್ನತ ಶಿಖರವಾದ ಟೌಬ್ಕಲ್ ಬಳಿ ಮತ್ತು ಜನಪ್ರಿಯ ಮೊರೊಕನ್ ಸ್ಕೀ ರೆಸಾರ್ಟ್ ಔಕೈಮೆಡೆನ್ ಬಳಿಯೂ ಇತ್ತು. ಭೂಕಂಪನದ ಕೇಂದ್ರ ಭೂಮಿಯ ಮೇಲ್ಮೈಯಿಂದ 18 ಕಿಲೋಮೀಟರ್ ಕೆಳಗೆ ಇದೆ ಎಂದು USGS ಹೇಳಿದೆ. ಆದರೆ ಮೊರಾಕೊದ ಭೂಕಂಪನ ಸಂಸ್ಥೆ ಅದನ್ನು 8 ಕಿಲೋಮೀಟರ್ ಕೆಳಗೆ ಇರಿಸಿದೆ.

ಮೊರಾಕೋದ ದುರಂತಕ್ಕೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. “ಈ ದುರಂತದ ಸಮಯದಲ್ಲಿ, ನನ್ನ ಆಲೋಚನೆಗಳು ಮೊರಾಕೊದ ಜನರೊಂದಿಗೆ ಇವೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ. ಈ ಕಷ್ಟದ ಸಮಯದಲ್ಲಿ ಮೊರಾಕೊಗೆ ಸಾಧ್ಯವಿರುವ ಎಲ್ಲ ನೆರವು ನೀಡಲು ಭಾರತ ಸಿದ್ಧವಾಗಿದೆʼʼ ಎಂದು ಮೋದಿ ಎಕ್ಸ್ (ಔಪಚಾರಿಕವಾಗಿ ಟ್ವಿಟರ್) ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: Earthquake : ರಾಷ್ಟ್ರ ರಾಜಧಾನಿಯಲ್ಲಿ ಭೂಕಂಪ; ನಿಧಾನಕ್ಕೆ ಅಲುಗಾಡಿದ ಭೂಮಿ

Exit mobile version