ರಬಾತ್: ಶುಕ್ರವಾರ ರಾತ್ರಿ ಮೊರಾಕೊದಲ್ಲಿ ಸಂಭವಿಸಿದ ಭಾರೀ ಭೂಕಂಪದಲ್ಲಿ (Morocco Earthquake) ಇದುವರೆಗೆ ಕನಿಷ್ಠ 2,012 ಜನರು ಸಾವನ್ನಪ್ಪಿದ್ದಾರೆ ಮತ್ತು 2,000 ಜನರು ಗಾಯಗೊಂಡಿದ್ದಾರೆ ಎಂದು ಅಲ್ಲಿನ ಆಂತರಿಕ ಸಚಿವಾಲಯ ತಿಳಿಸಿದೆ. ಪ್ರವಾಸಿ ನಗರವಾದ ಮರಕೇಶ್‌ನಿಂದ ನೈಋತ್ಯಕ್ಕೆ 72 ಕಿಲೋಮೀಟರ್ ದೂರದಲ್ಲಿರುವ ಪರ್ವತ ಪ್ರದೇಶದಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿತ್ತು.
ಭೂಕಂಪದ ಕೇಂದ್ರಬಿಂದುವಾಗಿರುವ ಅಲ್-ಹೌಜ್ ಪ್ರಾಂತ್ಯದಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಎರಡನೇ ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶವಾದ ತಾರೌಡಾಂಟ್ ಪ್ರಾಂತ್ಯದಲ್ಲಿ 452 ಮಂದಿ ಸಾವನ್ನಪ್ಪಿದ್ದಾರೆ ಎಂದು ದಾಖಲಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಯನ್ನು ಹೆಚ್ಚಿಸಲು ಮತ್ತು ಗಾಯಾಳುಗಳನ್ನು ಸ್ಥಳಾಂತರಿಸಲು ಅಧಿಕಾರಿಗಳು ಇನ್ನೂ ಪ್ರಯತ್ನಿಸುತ್ತಿದ್ದಾರೆ.
ಇದು ಕಳೆದ ಹಲವು ದಶಕಗಳಲ್ಲಿ ದೇಶದಲ್ಲಿ ಸಂಭವಿಸಿದ ಅತ್ಯಂತ ಭೀಕರ ಭೂಕಂಪ. ದೇಶದಲ್ಲಿ ಮೂರು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಲಾಗಿದೆ. ದೂರದ ಪರ್ವತ ಹಳ್ಳಿಗಳನ್ನು ತಲುಪಲು ರಕ್ಷಣಾ ಪಡೆಗಳು ಹರಸಾಹಸ ಪಡುತ್ತಿದ್ದು, ಅಲ್ಲಿ ಇನ್ನಷ್ಟು ಸಾವು ನೋವು ಆಗಿರುವ ಶಂಕೆ ಇದೆ.
ಈ ಪ್ರಬಲ ಭೂಕಂಪವು ಈ ಉತ್ತರ ಆಫ್ರಿಕಾದ ದೇಶದಲ್ಲಿ 2,000ಕ್ಕೂ ಹೆಚ್ಚು ಜನರನ್ನು ಕೊಂದಿದೆಯಾದರೂ ಇದು ಅತ್ಯಂತ ಸಕ್ರಿಯವಾದ ಭೂಕಂಪನ ಪ್ರದೇಶವನ್ನೇನೂ ಸ್ಪರ್ಶಿಸಿಲ್ಲ. ಇನ್ನಷ್ಟು ಪಶ್ಚಾತ್ ಕಂಪನಗಳನ್ನೂ ನಿರೀಕ್ಷಿಸಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: Morocco Earthquake: ಮೊರಾಕೋದಲ್ಲಿ ಭಾರಿ ಭೂಕಂಪ, 296 ಜನ ಬಲಿ, ಮೋದಿ ಸಂತಾಪ