ವಿಶ್ವದಾದ್ಯಂತ ಆರ್ಥಿಕ ಬಿಕ್ಕಟ್ಟು (Economic Crisis) ಎದುರಾಗಿದೆ. ನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆಯಾಗಿದೆ. ಆ ದೇಶ..ಈ ದೇಶ ಎಂದಲ್ಲ ಹಲವು ದೇಶಗಳಲ್ಲಿ ಅನೇಕರು ತಮ್ಮ ಜೀವನ ಶೈಲಿ ಬದಲು ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲಿ ಕೆನಡಾದ ಒಬ್ಬಳು ಮಹಿಳೆ ತನ್ನ ಮಗುವಿನ ಆಹಾರಕ್ರಮದಲ್ಲಿ ಕೂಡ ಶಾಕಿಂಗ್ ಎನ್ನಿಸುವ ಬದಲಾವಣೆ ಮಾಡಿದ್ದಾರೆ. 18 ತಿಂಗಳ ಮಗುವಿಗೆ ಪೌಷ್ಟಿಕ ಆಹಾರವನ್ನು ಯಥೇಚ್ಛವಾಗಿ ಕೊಡಬೇಕು. ಎಲ್ಲದರ ಬೆಲೆಯೂ ಹೆಚ್ಚಿಗೆ ಆಗಿದ್ದರಿಂದ ಮಗುವಿನ ಪೌಷ್ಟಿಕ ಆಹಾರ, ಉಳಿದ ಕಾಳು-ಬೇಳೆ, ಮಾಂಸ, ತರಕಾರಿ ಮತ್ತು ಇನ್ನಿತರ ವಸ್ತುಗಳಿಗೆಲ್ಲ ಸೇರಿ ವಾರಕ್ಕೆ ಆಕೆಗೆ 300 ಡಾಲರ್ (25 ಸಾವಿರ ರೂ.)ಗಳಷ್ಟು ಖರ್ಚಾಗುತ್ತಿತ್ತು. ಇದರಿಂದ ಆರ್ಥಿಕವಾಗಿ ಸಮತೋಲನ ಮಾಡಿಕೊಳ್ಳುವುದು ಕಷ್ಟವಾಗುತ್ತಿತ್ತು. ಹೀಗಾಗಿ ಮಹಿಳೆ ಒಂದು ವಿಚಿತ್ರ ಪ್ರಯೋಗ ಮಾಡಿದ್ದಾರೆ. ‘ಮಗುವಿಗೆ ಸಿಗಬೇಕಾದ ಪೌಷ್ಟಿಕತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ, ವಾರದ ಖರ್ಚು ಕಡಿಮೆ ಮಾಡಿದ್ದಾರೆ. ಅಂದರೆ ಮಗುವಿನ ಆಹಾರ ಕ್ರಮದಲ್ಲಿ ಅವರು ಕೀಟಗಳನ್ನು ಅಳವಡಿಸಿದ್ದಾರೆ.
ಟೊರಂಟೊದ ಲೇಖಕಿಯಾಗಿರುವ ಟಿಫಾನಿ ಲೇಘ್ ಅವರು, ತಾವು ಹೀಗೆ ಬೆಲೆ ಏರಿಕೆ ಗುಮ್ಮನೊಂದಿಗೆ ಸೆಣೆಸಾಡಲು ಮಾಡಿದ್ದೇನು ಎಂಬ ಬಗ್ಗೆ ಇನ್ಸೈಡರ್ ಸುದ್ದಿ ಮಾಧ್ಯಮದೊಂದಿಗೆ ಹೇಳಿಕೊಂಡಿದ್ದಾರೆ. ಆಹಾರದ ಬಗ್ಗೆಯೇ ಬರೆಯುವ ಲೇಖಕಿಯಾಗಿರುವ ಟಿಫಾನಿ ಲೇಘ್ ‘ಆಹಾರದ ಬಗ್ಗೆ ನಾನು ತುಂಬ ಅಧ್ಯಯನ ಮಾಡಿದ್ದೇನೆ. ತಿನ್ನಲು ಬರುತ್ತದೆ ಎನ್ನುವಂಥದ್ದನ್ನು ಯಾವುದನ್ನೂ ಕೊಟ್ಟರೂ ನಾನು ಅದನ್ನು ತಿನ್ನುತ್ತೇನೆ. ಹಲವು ಬಗೆಯ ಕೀಟಗಳನ್ನು ನಾನು ತಿಂದು ರುಚಿ ನೋಡಿದ್ದೇನೆ. ಅವುಗಳ ಬಗ್ಗೆ ನನಗೆ ಗೊತ್ತು. ಜೇಡರ ಹುಳದ ಕಾಲಿನ ಫ್ರೈನಿಂದ ಹಿಡಿದು, ಚೇಳಿನವರೆಗೆ ಎಲ್ಲದರ ರುಚಿ ನೋಡಿದ್ದೇನೆ. ಥೈಲ್ಯಾಂಡ್ ಮತ್ತು ವಿಯೆಟ್ನಾಂನಂಥ ದೇಶಗಳಿಗೆ ಹೋದಾಗ ಇರುವೆ ಮತ್ತು ಎಲ್ಲ ಬಗೆಯ ಕೀಟಗಳನ್ನೂ ತಿಂದಿದ್ದೇನೆ. ನನಗೆ ಇಷ್ಟವಾಗಿದೆ’ ಎಂದು ಹೇಳಿದ್ದಾರೆ. ಹೀಗಾಗಿ ಮಗುವಿಗೆ ಧೈರ್ಯದಿಂದ ಅದನ್ನು ಕೊಡಲು ಪ್ರಾರಂಭಿಸಿದ್ದೇನೆ. ಮಗುವಿಗೆ ಅಗತ್ಯವಿರುವ ಪೋಶಕಾಂಶಗಳು ಕೀಟಗಳಲ್ಲಿ ಇರುತ್ತವೆ ಎಂದೂ ಲೇಘ್ ಹೇಳಿದ್ದಾರೆ.
ಈ ಮೊದಲು ಗೋಮಾಂಸ, ಚಿಕನ್, ಹಂದಿ ಮಾಂಸ ಪ್ರತಿನಿತ್ಯ ಬೇಕಾಗುತ್ತಿತ್ತು. ಆದರೆ ಸಿಕ್ಕಾಪಟೆ ದುಬಾರಿಯಾಗಿವೆ. ಇದನ್ನೆಲ್ಲ ಖರೀದಿ ಮಾಡುವುದೇ ಇಲ್ಲವೆಂದಲ್ಲ. ಈಗ ಅಪರೂಪಕ್ಕೆ ಒಂದು ಸಲ ತರುತ್ತೇವೆ. ಮಗುವಿಗಾಗಿ ಕೆಲವು ಕೀಟಗಳ ಪಫ್ ಸ್ನ್ಯಾಕ್ಸ್, ಕೀಟದ್ದೇ ಪ್ರೊಟೀನ್ ಪೌಡರ್ಗಳನ್ನು ಮಾಡುತ್ತೇನೆ. ಕೀಟ ಸಾಕಣೆ ಕೇಂದ್ರದಲ್ಲಿ ಸಂಪೂರ್ಣವಾಗಿ ಹುರಿದ ಕೀಟಗಳು ಸಿಗುತ್ತವೆ. ಅದನ್ನು ಖರೀದಿಸಿ ತಂದು, ನಾನೂ ವಿವಿಧ ಖಾದ್ಯ ತಯಾರಿಸಿ ಮಗುವಿಗೆ ಕೊಡುತ್ತೇನೆ. ನಾವೂ ತಿನ್ನುತ್ತೇವೆ. ಇದು ನಿಜಕ್ಕೂ ನನಗೆ ಸಹಾಯಕವಾಗಿದೆ. ಮೊದಲೆಲ್ಲ ವಾರಕ್ಕೆ ಕಿರಾಣಿಗಾಗಿಯೇ 25 ಸಾವಿರ ರೂ.ಖರ್ಚು ಮಾಡಬೇಕಿತ್ತು. ಈಗ ಅದು 8ಸಾವಿರಕ್ಕೆ ಇಳಿದಿದೆ. ಉಳಿದ ಖರ್ಚು ತೂಗಿಸಲು ನನಗೆ ತುಂಬ ಸುಲಭವಾಗಿದೆ’ ಎಂದು ಲೇಘ್ ತಿಳಿಸಿದ್ದಾರೆ. ಮಗು ಕೂಡ ಯಾವುದೇ ಹೇಸಿಗೆ, ಭಯವಿಲ್ಲದೆ, ಅದನ್ನು ಇಷ್ಟಪಟ್ಟು ತಿನ್ನುತ್ತಿದೆ ಎಂಬ ಮಾಹಿತಿಯನ್ನೂ ಅವರು ಕೊಟ್ಟಿದ್ದಾರೆ.
ಇದನ್ನೂ ಓದಿ: Viral News: ಕಾಂಟ್ಯಾಕ್ಟ್ ಲೆನ್ಸ್ ಹಾಕಿಕೊಂಡು ಮಲಗಿದವನ ಒಂದು ಕಣ್ಣನ್ನೇ ತಿಂದುಹಾಕಿದ ಕೀಟಗಳು
ಆಹಾರದ ಬಗ್ಗೆಯೇ ಲೇಖನಗಳನ್ನು ಬರೆಯುವ ಲೇಘ್, ತಾವು ಹಲವು ಆಹಾರತಜ್ಞರ ಲೇಖನಗಳನ್ನು ಓದುವುದಾಗಿ ಹೇಳಿಕೊಂಡಿದ್ದಾರೆ. ಹಾಗೇ, ಮಕ್ಕಳಿಗೆ 6 ತಿಂಗಳು ಆಗುತ್ತಿದ್ದಂತೆ ಅವುಗಳಿಗೆ ಆಯ್ದ ಕೀಟಗಳನ್ನು ಆಹಾರವಾಗಿ ಕೊಡಲು ಶುರು ಮಾಡಬಹುದು ಎಂದು ಆಹಾರತಜ್ಞ ವೇನಸ್ ಕಾಲಾಮಿ ಹೇಳುತ್ತಾರೆ ಎಂದೂ ಲೇಘ್ ಉಲ್ಲೇಖಿಸಿದ್ದಾರೆ.