Site icon Vistara News

ಲಾಹೋರಿನ ಕೆಎಫ್‌ಸಿ ಡೆಲಿವರಿ ಗರ್ಲ್‌ ಮೀರಬ್‌ ಸ್ಫೂರ್ತಿ ಕತೆ ಈಗ ವೈರಲ್!

meerab

‌ʻಮನಸ್ಸಿದ್ದರೆ ಮಾರ್ಗʼ ಎಂಬ ಗಾದೆ ಹುಟ್ಟಿದ್ದು ಸುಮ್ಮನೆ ಅಲ್ಲ. ಯಾವುದೇ ಕೆಲಸ, ಸಾಧನೆ ಮಾಡಬೇಕೆಂದಿದ್ದರೆ, ಅದಕ್ಕೆ ಕನಸು ಮಾತ್ರ ಸಾಕಾಗುವುದಿಲ್ಲ, ಆ ನಿಟ್ಟಿನಲ್ಲಿ ಮನಸೂ ಮಾಡಬೇಕು. ಕಷ್ಟಗಳನ್ನು ಮೆಟ್ಟಿ ನಿಲ್ಲುವ ಎದೆಗಾರಿಕೆ ಬೇಕಾಗುತ್ತದೆ. ಎಷ್ಟೇ ಕಷ್ಟವಿದ್ದರೂ ಮುಂದೊಂದು ದಿನ ಶುಭದಿನ ನನ್ನ ಪಾಲಿಗೆ ಬಂದೇ ಬರುತ್ತದೆ ಎಂಬ ದೃಢ ನಂಬಿಕೆಯಿಂದ ನಿಷ್ಟೆಯಿಂದ ಆ ನಿಟ್ಟಿನಲ್ಲಿ ಪ್ರಯತ್ನ ಮಾಡುವುದು ಇದೆಯಲ್ಲಾ, ಅದಷ್ಟೇ ಹಲವರಿಗೆ ಸ್ಪೂರ್ತಿಯಾಗುತ್ತದೆ.

ಇದೂ ಅಂಥದ್ದೇ ಒಂದು ಉದಾಹರಣೆ. ನಮ್ಮ ನೆರೆಯ ಪಾಕಿಸ್ತಾನದಲ್ಲಿ ತನ್ನ ಪದವಿ ಓದುತ್ತಾ, ರಾತ್ರಿಯ ಹೊತ್ತಿನಲ್ಲಿ ಕೆಎಫ್‌ಸಿ ಡೆಲಿವರಿ ಗರ್ಲ್‌ ಆಗಿ ಕೆಲಸ ಮಾಡುತ್ತಿರುವ ಮೀರಬ್‌ ಎಂಬ ಹುಡುಗಿಯೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದಾಳೆ! ಆಕೆಯ ಕತೆಯೀಗ ಹಲವರಿಗೆ ಸ್ಪೂರ್ತಿಯಾಗಿದೆ.

ಫಿಜಾ ಇಜಾಝ್‌ ಎಂಬಾಕೆ ಮೊನ್ನೆ ಈ ಮೀರಬ್‌ಳ ಕತೆಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಆಕೆ ಬರೆದುಕೊಂಡಂತೆ, ಮೊನ್ನೆ ತಾನೇ ಈಕೆ ಕೆಎಫ್‌ಸಿಯಿಂದ ಒಂದಿಷ್ಟು ತಿನಿಸುಗಳನ್ನು ಆರ್ಡರ್‌ ಮಾಡಿದ್ದಾಳೆ. ಎಂದಿನಂತೆ ಅಲ್ಲಿಂದ ಕಾಲ್‌ ಬಂದಿದೆ. ಆದರೆ, ಅದು ಹುಡುಗನ ಸ್ವರವಲ್ಲದೆ, ಹುಡುಗಿಯದಾಗಿತ್ತು. ಆಶ್ಚರ್ಯವಾದರೂ, ಫಿಜಾ ತನ್ನ ಆಹಾರದ ಪಾರ್ಸೆಲ್‌ ಪಡೆಯಲು ಮನೆಯ ಹೊರಗೆ ಬಂದು ಆಕೆಗಾಗಿ ಕಾದಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಬಂದ ಮೀರಬ್‌, ಆಕೆಗೆ ಆಹಾರ ಕೊಟ್ಟಿದ್ದಾಳೆ. ಕುತೂಹಲ ತಡೆಯಲಾಗದೆ, ಫಿಜಾ ತನಗೆ ಪಾರ್ಸೆಲ್‌ ತಂದ ಮೀರಬ್‌ ಜೊತೆ ಹತ್ತು ನಿಮಿಷ ಮಾತಾಡಿ, ಆಕೆಯ ವಿಚಾರಗಳನ್ನು ತಿಳಿದು ಖುಷಿಯಾಗಿ ಇತರರಿಗೆ ಈ ಕತೆ ಮಾದರಿಯಾಗಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದಾರೆ. ಅದು ಈಗ ವೈರಲ್‌ ಆಗಿದೆ.‌

ಇದನ್ನೂ ಓದಿ: My unschooled year | SSLC ನಂತರ ಒಂದು ವರ್ಷ ಬ್ರೇಕ್‌ ತಗೊಳ್ಳಿ! ಇದು ಸಾಗರಿಕಾ ಸ್ಫೂರ್ತಿಕತೆ!

ಮೀರಬ್‌ ಸದ್ಯ ಲಾಹೋರಿನ ಕಾಲೇಜೊಂದರಲ್ಲಿ ಫ್ಯಾಷನ್‌ ಡಿಸೈನಿಂಗ್‌ನಲ್ಲಿ ಪದವಿ ಓದುತ್ತಿದ್ದಾಳೆ. ಆದರೆ ತನ್ನ ಕನಸಿನ ಓದಿಗೆ ಮನೆಯಲ್ಲಿ ಬಡತನ. ಶುಲ್ಕ ಭರಿಸಲೂ ದುಡ್ಡು ಸಾಲದು. ಅಮ್ಮನಿಗೆ ಕಾಯಿಲೆ. ಆಕೆಗೂ ಔಷಧಿಯ ಖರ್ಚಿಗೆ ದುಡ್ಡಿಲ್ಲ. ಇಂಥ ಸಂದರ್ಭ ಸಾಮಾನ್ಯವಾಗಿ ಮನೆಯ ಹುಡುಗಿಯರ ಓದು ಅರ್ಧಕ್ಕೇ ನಿಲ್ಲುವುದು ಸಾಮಾನ್ಯ. ಆದರೆ, ಮೀರಬ್‌ ವಿಷಯದಲ್ಲಿ ಹಾಗಾಗಿಲ್ಲ. ಆಕೆ, ಸ್ಕೂಟರ್‌ ಹಿಡಿದು ಕಳೆದ ಮೂರು ವರ್ಷಗಳಿಂದ ಕೆಎಫ್‌ಸಿಯಲ್ಲಿ ರೈಡರ್/ಡೆಲಿವರಿ ಗರ್ಲ್‌ ಆಗಿ ಕೆಲಸ ಮಾಡುತ್ತಿದ್ದಾಳೆ. ಬೆಳಗಿನ ಹೊತ್ತು ಕಾಲೇಜು, ಕಾಲೇಜಿನಿಂದ ಬಂದ ಮೇಲೆ ರಾತ್ರಿಯವರೆಗೆ ಆಹಾರದ ಡೆಲಿವರಿ ಕೆಲಸ ಮಾಡಿಕೊಂಡು ತನ್ನ ಕಾಲೇಜಿನ ಖರ್ಚುಗಳು, ಅಮ್ಮನ ಔಷಧಿ ಖರ್ಚು, ಮನೆಯ ಕೆಲವು ಖರ್ಚುಗಳನ್ನೆಲ್ಲ ಒಬ್ಬಳೇ ನಿಭಾಯಿಸುತ್ತಿದ್ದಾಳೆ. ರಾತ್ರಿಯ ಹೊತ್ತು ಧೈರ್ಯವಾಗಿ, ಗ್ರಾಹಕರ ವಿಳಾಸ ಹುಡುಕುತ್ತಾ ಸ್ಕೂಟರ್‌ ಚಲಾಯಿಸಿಕೊಂಡು ಕೆಲಸ ಮಾಡುತ್ತಿದ್ದಾಳೆ!

ಈಕೆಯ ಮುಂದೆ ದೊಡ್ಡ ದೊಡ್ಡ ಕನಸುಗಳೂ ಇವೆ. ಪದವಿ ಮುಗಿಸಿಕೊಂಡು ತನ್ನದೇ ಹೊಸ ಫ್ಯಾಷನ್‌ ಬ್ರ್ಯಾಂಡ್‌ ಆರಂಭಿಸಬೇಕೆಂಬ ಗುರಿಯಿದೆ. ಈಕೆಯ ಕಾಲೇಜಿನ ಶುಲ್ಕದ ಖರ್ಚನ್ನು ಸದ್ಯ, ʻಕೆಎಫ್‌ಸಿ ಫೀಮೇಲ್‌ ಹೈಯರ್‌ ಎಜುಕೇಶನ್‌ ಸ್ಕಾಲರ್ಶಿಪ್‌ʼ ಯೋಜನೆಯಡಿ ಆಕೆ ಪಡೆದುಕೊಳ್ಳುತ್ತಿದ್ದಾಳೆ. ಆದರೆ, ಮನೆಯ ಹಲವು ಖರ್ಚುಗಳಿಗೆ ಈಕೆ ದುಡಿದು ಮನೆಗೆ ಹೆಗಲಾಗಿ ನಿಂತಿದ್ದಾಳೆ.

ಮೀರಬ್‌ ಕತೆಯನ್ನು ಕೇಳಿ ಫಿಜಾಗೆ ಬಹಳ ಖುಷಿಯಾಗಿ, ಈ ಸ್ಪೂರ್ತಿಕತೆಯನ್ನುಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಸಾವಿರಾರು ಮಂದಿ ಮೀರಬ್‌ ಕತೆ ಕೇಳಿ ಖುಷಿಯಾಗಿದ್ದು ಕಮೆಂಟ್‌ ಮಾಡಿದ್ದಾರೆ. ಸ್ವತಃ ಕೆಎಫ್‌ಸಿ ಚೀಫ್‌ ಪೀಪಲ್‌ ಆಫೀಸರ್‌ ಅಸ್ಮಾ ಯೂಸುಫ್‌ ಕೂಡಾ ಇದಕ್ಕೆ ಕಮೆಂಟ್‌ ಮಾಡಿದ್ದು, ಮೀರಬ್‌ ನಮ್ಮ ಹೆಮ್ಮೆಯ ಹುಡುಗಿ. ಆಕೆ ನಮ್ಮಿಂದ ಸ್ಕಾಲರ್‌ಶಿಪ್‌ ಪಡೆದು ಶುಲ್ಕ ಕಟ್ಟಿದರೂ, ಬಾಕಿ ಸಮಯದಲ್ಲಿ ಇಲ್ಲಿ ದುಡಿದು ತನ್ನ ಮನೆಯನ್ನು ಸಂಭಾಳಿಸುತ್ತಿದ್ದಾಳೆ ಎಂದಿದ್ದಾರೆ.

ಬಡತನದಿಂದ ಕಷ್ಟಪಟ್ಟು ಓದುತ್ತಿರುವ ಎಲ್ಲರಿಗೂ ಈಕೆಯ ಛಲ ದಾರಿದೀಪವಾಗಲಿ. ಕಷ್ಟಪಟ್ಟು ಸಾಧನೆಯ ಹಾದಿಯಲ್ಲಿರುವ ಮಂದಿಗೆ, ಅಂಜಿಕೆಯಿಂದ ಹಿಂದೆ ಸರಿದ ಮಂದಿಗೆ ಈಕೆ ಮಾರ್ಗದರ್ಶಿಯಾಗಲಿ!

ಇದನ್ನೂ ಓದಿ: ಪಶ್ಚಿಮ ಬಂಗಾಳ ತೃಣಮೂಲ ಕಾಂಗ್ರೆಸ್​​ ಪಕ್ಷಕ್ಕೆ ಮುಜುಗರ ತರುವ ಫೋಟೋಗಳು ವೈರಲ್

Exit mobile version