Site icon Vistara News

Mount Everest: 4 ವರ್ಷಗಳ ಬಳಿಕ ಮೌಂಟ್ ಎವರೆಸ್ಟ್ ಏರಲು ವಿದೇಶಿಗರಿಗೆ ಚೀನಾ ಅನುಮತಿ

Mount Everest

Mount Everest

ಬೀಜಿಂಗ್‌: ಕೋವಿಡ್‌ ಸಾಂಕ್ರಾಮಿಕ ರೋಗದ ನಂತರ, ಸುಮಾರು 4 ವರ್ಷಗಳ ತರುವಾಯ ಇದೇ ಮೊದಲ ಬಾರಿಗೆ ಚೀನಾ (China) ವಿದೇಶಿ ಪರ್ವತಾರೋಹಿಗಳಿಗೆ ಟಿಬೆಟ್ ಮೂಲಕ ವಿಶ್ವದ ಅತಿ ಎತ್ತರದ ಪರ್ವತವಾದ ಮೌಂಟ್ ಎವರೆಸ್ಟ್ (Mount Everest) ಏರಲು ಅವಕಾಶ ನೀಡಿದೆ. ಎಂಟು ಬಾರಿ ಮೌಂಟ್‌ ಎವರೆಸ್ಟ್ ಶಿಖರವನ್ನು ಏರಿರುವ, ಗೈಡ್‌ ಆಡ್ರಿಯನ್ ಬ್ಯಾಲಿಂಗರ್ (Adrian Ballinger) ಅವರು ನೇಪಾಳ ಮಾರ್ಗಕ್ಕಿಂತ ಮೌಂಟ್ ಎವರೆಸ್ಟ್ ಏರಲು ಟಿಬೆಟ್ ಮಾರ್ಗಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಈ ವರ್ಷ ಅವರು ತಮ್ಮ ಕಂಪೆನಿ ಆಲ್ಪೆಂಗ್ಲೋ ಎಕ್ಸ್ಪೆಡಿಷನ್ಸ್ (Alpenglow Expeditions) ಮೂಲಕ ಪರ್ವತಾರೋಹಿಗಳ ಗುಂಪನ್ನು ಟಿಬೆಟ್‌ ಮೂಲಕ ಮುನ್ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚೀನಾದಲ್ಲಿ ಕೊಮೊಲಾಂಗ್ಮಾ (Qomolangma) ಎಂದು ಕರೆಯಲ್ಪಡುವ ಪರ್ವತವನ್ನು ಏರಡಲಿರುವ ಎಲ್ಲ ಪಾಸ್‌ಗಳನ್ನು ಬೀಜಿಂಗ್ ಪ್ರವಾಸೋದ್ಯಮ ಅಧಿಕಾರಿ ಅಥವಾ ಕೌನ್ಸಿಲ್ ಬದಲಿಗೆ ಚೀನಾ ಟಿಬೆಟ್ ಪರ್ವತಾರೋಹಣ ಸಂಘ (China Tibet Mountaineering Association) ವಿತರಿಸುತ್ತದೆ.‌ ಆದಾಗ್ಯೂ ಪಾಸ್‌ಗಳನ್ನು ನೀಡುವ ಬಗ್ಗೆ ಚೀನಾ ಸರ್ಕಾರ ಇದುವರೆಗೆ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.

ಎವರೆಸ್ಟ್ ಶಿಖರ ಏರಲು ಬಯಸುವ ವಿದೇಶಿಗರು ಚೀನಾಕ್ಕೆ ಪ್ರವಾಸಿ ವೀಸಾ ಪಡೆಯುವ ಜತೆಗೆ ಅರೆ ಸ್ವಾಯತ್ತ ಪ್ರದೇಶವಾದ ಟಿಬೆಟ್‌ಗೂ ಪ್ರತ್ಯೇಕ ವೀಸಾ ಹೊಂದಿರಬೇಕು. ಎವರೆಸ್ಟ್ ಶಿಖರ ಏರುವ ಅವಧಿಯು ಸಾಮಾನ್ಯವಾಗಿ ಏಪ್ರಿಲ್ ಅಂತ್ಯದಿಂದ ಮೇ ಮಧ್ಯದವರೆಗೆ ಇರುತ್ತದೆ. ಶೀಖರ ಏರುವ ಬಗ್ಗೆ ಪೂರ್ವ ಅಭ್ಯಾಸ ಮಾಡಿದ ನಂತರ ಆಡ್ರಿಯನ್ ಬ್ಯಾಲಿಂಗರ್ ಅವರ ತಂಡವು ಏಪ್ರಿಲ್ 25ರಂದು ಚೀನಾಕ್ಕೆ ತೆರಳಲಿದೆ.

“ನನ್ನ ಪ್ರಕಾರ ಎವರೆಸ್ಟ್‌ ಶಿಖರವನ್ನು ನೇಪಾಳದ ಕಡೆಯಿಂದ ಹತ್ತುವುದಕ್ಕಿಂತ ಚೀನಾದ ಕಡೆಯಿಂದ ಏರುವುದು ಉತ್ತಮ. 2000ರಿಂದ 2007ರವರೆಗೆ ಚೀನಾದ ಕಡೆಯ ಪರ್ವತಾರೋಹಣ ಹೆಚ್ಚು ಜನಪ್ರಿಯವಾಗಿತ್ತು. ಇದು ಹೆಚ್ಚು ಸುರಕ್ಷಿತ ಮಾರ್ಗ” ಎಂದು ಬ್ಯಾಲಿಂಗರ್ ವಿವರಿಸುತ್ತಾರೆ.

ಬೀಜಿಂಗ್‌ನಲ್ಲಿ 2008ರಲ್ಲಿ ಬೇಸಿಗೆ ಒಲಿಂಪಿಕ್ಸ್ ನಡೆಸಿತು. ಈ ಹಿನ್ನೆಲೆಯಲ್ಲಿ ಎವರೆಸ್ಟ್‌ ಶಿಖರ ಏರುವುದನ್ನು ನಿಲ್ಲಿಸಲಾಗಿತು. ಇದರಿಂದ ಅನೇಕರು ಆರ್ಥಿಕವಾಗಿ ನಷ್ಟಕ್ಕೊಳಗಾಗಿದ್ದರು. ಹೀಗಾಗಿ ಪರ್ವಾರೋಹಿಗಳು ಕ್ರಮೇಣ ಈ ಮಾರ್ಗದಲ್ಲಿ ತೆರಳುವುದನ್ನು ಬಿಟ್ಟು ಬಿಟ್ಟರು. “ನಾವೆಲ್ಲರೂ 2008ರಲ್ಲಿ ಚೀನಾ ಮೂಲಕ ಎವರೆಸ್ಟ್‌ ಶಿಖರ ಏರಲು ಸಿದ್ಧತೆ ನಡೆಸಿದ್ದೆವು. ಆದರೆ ಇದ್ದಕ್ಕಿಂತೆ ಚೀನಾ ಪರ್ವತಕ್ಕೆ ಪ್ರವೇಶ ನಿರಾಕರಿಸಿತು. ಇದರಿಂದ ಬಹಳಷ್ಟು ಜನರು ಸಾಕಷ್ಟು ಹಣವನ್ನು ಕಳೆದುಕೊಂಡರು. ಇದರ ಪರಿಣಾಮವಾಗಿ ಬಹುತೇಕರು ನೇಪಾಳ ಮಾರ್ಗವನ್ನು ಆಯ್ದುಕೊಂಡಿದ್ದಾರೆʼʼ ಎಂದು ಬ್ಯಾಲಿಂಗರ್ ಹೇಳಿದ್ದಾರೆ.

ಇದನ್ನೂ ಓದಿ: 26 ಬಾರಿ ಮೌಂಟ್​ ಎವರೆಸ್ಟ್​ ಏರಿ ದಾಖಲೆ ಬರೆದ ನೇಪಾಳಿ ಶೆರ್ಪಾ; ಇವರ ಕುಲಕಸುಬೇ ಪರ್ವತಾರೋಹಣ!

Exit mobile version