Site icon Vistara News

Munich Massacre: 11 ಇಸ್ರೇಲಿ ಅಥ್ಲೀಟ್‌ಗಳ ಹತ್ಯೆಯ ಪ್ರತಿಕಾರ ರೋಚಕ! ʼಮೊಸಾದ್‌ʼ ಏಜೆಂಟರ ಆಪರೇಷನ್‌ ಹೀಗಿತ್ತು

Munich Massacre

ಪ್ಯಾರಿಸ್ ಒಲಿಂಪಿಕ್ಸ್ (Paris Olympics) ಮೇಲೆಯೂ ಪ್ಯಾಲೆಸ್ತೀನ್ ಉಗ್ರಗಾಮಿಗಳ (Palestinian militant) ಕರಿಛಾಯೆಯ ಆತಂಕ ಇತ್ತು. ಯಾಕೆಂದರೆ ಜರ್ಮನಿಯ (Germany) ಮ್ಯೂನಿಚ್‌ನಲ್ಲಿ (Munich Massacre) 1972ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ನಡೆದ ಆ ಒಂದು ಘಟನೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಪ್ಯಾಲೆಸ್ತೀನ್ ಉಗ್ರಗಾಮಿ ಸಂಘಟನೆಯ ಎಂಟು ಮಂದಿ 11 ಇಸ್ರೇಲಿ ಅಥ್ಲೀಟ್‌ಗಳನ್ನು (Israeli athletes) ಬರ್ಬರವಾಗಿ ಕೊಂದು ಹಾಕಿರುವ ನೋವು ಈಗಲೂ ಎಲ್ಲರನ್ನೂ ಕಾಡುತ್ತಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಇಸ್ರೇಲ್ ಪ್ರಧಾನಮಂತ್ರಿ ಗೋಲ್ಡಾ ಮೀರ್ (Prime Minister Golda Meir) ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್‌ಗೆ ರಹಸ್ಯವಾಗಿ ಪ್ರತಿಕಾರ ತೆಗೆದುಕೊಳ್ಳುವಂತೆ ಆದೇಶಿಸಿದ್ದರು.

ಮುಂದಿನ ಏಳು ವರ್ಷ “ಆಪರೇಷನ್ ವ್ರಾತ್ ಆಫ್ ಗಾಡ್” ಎಂದು ಕರೆಯಲ್ಪಡುವ ರಹಸ್ಯ ಕಾರ್ಯಾಚರಣೆಯು ಯುರೋಪ್ ಮತ್ತು ಮಧ್ಯಪ್ರಾಚ್ಯದಾದ್ಯಂತ 12ಕ್ಕಿಂತಲೂ ಹೆಚ್ಚು ಶಂಕಿತರನ್ನು ಗುರಿಯಾಗಿಟ್ಟುಕೊಂಡು ಹತ್ಯೆ ಮಾಡಲಾಯಿತು. ‘ಕಿಡಾನ್’ ಎಂದು ಕರೆಯಲ್ಪಡುವ ವಿಶೇಷ ತರಬೇತಿ ಪಡೆದ ಹಿಟ್-ತಂಡವನ್ನು ಒಳಗೊಂಡಿರುವ ಈ ರಹಸ್ಯ ಕಾರ್ಯಾಚರಣೆಯು ಹಲವಾರು ಪುಸ್ತಕಗಳು, ಸಾಕ್ಷ್ಯಚಿತ್ರಗಳು ಮತ್ತು ಸ್ಟೀವನ್ ಸ್ಪೀಲ್‌ಬರ್ಗ್‌ನ ಚಲನಚಿತ್ರ “ಮ್ಯೂನಿಚ್”ನಲ್ಲಿ ಮೂಡಿ ಬಂದಿದೆ.

Israeli athletes

ಮ್ಯೂನಿಚ್ ಹತ್ಯಾಕಾಂಡ

1972ರ ಸೆಪ್ಟೆಂಬರ್ 5ರಂದು ಎಂಟು ಉಗ್ರರು ಮ್ಯೂನಿಚ್‌ನ ಒಲಿಂಪಿಕ್ ಗ್ರಾಮಕ್ಕೆ ನುಸುಳಿದರು. ಎಕೆ 47ಗಳೊಂದಿಗೆ ಶಸ್ತ್ರಸಜ್ಜಿತರಾಗಿದ್ದ ಅವರು 11 ಇಸ್ರೇಲಿ ಕ್ರೀಡಾಪಟುಗಳು ಮತ್ತು ತರಬೇತುದಾರರನ್ನು ಒತ್ತೆಯಾಳಾಗಿ ತೆಗೆದುಕೊಂಡರು. ಆರಂಭಿಕ ದಾಳಿಯಲ್ಲಿ ಇಬ್ಬರನ್ನು ಕೊಂದರು. ಇಸ್ರೇಲ್ ಜೈಲಿನಲ್ಲಿರುವ 234 ಕೈದಿಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಈ ಸಮಯದಲ್ಲಿ ಜರ್ಮನ್ ಅಧಿಕಾರಿಗಳು ಮಾತುಕತೆಗೆ ಪ್ರಯತ್ನಿಸಿದರು.

ಅನಂತರ ಭಯೋತ್ಪಾದಕರು ವಾಯುನೆಲೆಗೆ ತೆರಳಿದರು. ಅಲ್ಲಿ ಎರಡು ಬೆಲ್ ಯುಹೆಚ್ -1 ಮಿಲಿಟರಿ ಹೆಲಿಕಾಪ್ಟರ್‌ಗಳು ಅವರನ್ನು ಕೈರೋಗೆ ಕರೆದುಕೊಂಡು ಹೋಗಿತ್ತು. ಜರ್ಮನ್ ಪೋಲೀಸರ ರಕ್ಷಣಾ ಪ್ರಯತ್ನದಲ್ಲಿ ಎಲ್ಲಾ ಒತ್ತೆಯಾಳುಗಳು, ಜರ್ಮನ್ ಪೊಲೀಸ್ ಅಧಿಕಾರಿ ಮತ್ತು ಐವರು ಭಯೋತ್ಪಾದಕರ ಸಾವಿಗೆ ಕಾರಣವಾಯಿತು.

Israeli PM Golda Meir

ಇಸ್ರೇಲ್ ಪ್ರತಿಕಾರ ಹೇಗಿತ್ತು?

ಮ್ಯೂನಿಚ್ ಹತ್ಯಾಕಾಂಡದ ಅನಂತರ ಪ್ರಧಾನಮಂತ್ರಿ ಗೋಲ್ಡಾ ಮೀರ್ ಅವರು ಮೊಸಾದ್ ಮುಖ್ಯಸ್ಥ ಝ್ವಿ ಜಮೀರ್ ಮತ್ತು ಭಯೋತ್ಪಾದನಾ ನಿಗ್ರಹ ಸಲಹೆಗಾರ ಅಹರಾನ್ ಯಾರಿವ್ ಅವರೊಂದಿಗೆ ಭಯೋತ್ಪಾದಕ ಗುಂಪುಗಳ ನಾಯಕರನ್ನು ಮುಗಿಸಲು ಯೋಜನೆಯನ್ನು ರೂಪಿಸಿದರು. ಈ ರಹಸ್ಯ ಕಾರ್ಯಾಚರಣೆಯು ವಿದೇಶಿ ನೆಲದಲ್ಲಿ ಹತ್ಯೆಗಳನ್ನು ನಡೆಸುವುದನ್ನು ಒಳಗೊಂಡಿತ್ತು. ಇದು ಬೃಹತ್ ರಾಜಕೀಯ ಮತ್ತು ನೈತಿಕ ಪರಿಣಾಮಗಳನ್ನು ಹೊಂದಿತ್ತು. ಭವಿಷ್ಯದ ದಾಳಿಗಳನ್ನು ತಡೆಗಟ್ಟಲು ಮತ್ತು ಮ್ಯೂನಿಚ್ ಸಂತ್ರಸ್ತರಿಗೆ ನ್ಯಾಯವನ್ನು ನೀಡಲು ನಿರ್ಣಾಯಕ ಕ್ರಮ ಅಗತ್ಯ ಎಂದು ಇಸ್ರೇಲ್ ನಾಯಕರು ನಂಬಿದ್ದರು.

ಕಿಡಾನ್ ಕಾರ್ಯಾಚರಣೆ

‘ಕಿಡಾನ್’ ಎಂದು ಕರೆಯಲ್ಪಡುವ ಮೊಸಾದ್‌ನ ವಿಶೇಷ ಘಟಕವು ಹತ್ಯೆಗಳನ್ನು ನಡೆಸುವ ಕಾರ್ಯವನ್ನು ನಿರ್ವಹಿಸುತ್ತಿತ್ತು. ಈ ಘಟಕವು ವಿವಿಧ ರೀತಿಯ ಯುದ್ಧ ಮತ್ತು ರಹಸ್ಯ ಕಾರ್ಯಾಚರಣೆ, ಹತ್ಯೆಯಲ್ಲಿ ಹೆಚ್ಚು ತರಬೇತಿ ಪಡೆದವರನ್ನು ಒಳಗೊಂಡಿತ್ತು. ಮ್ಯೂನಿಚ್ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ಯಾಲೆಸ್ಟೈನ್ ಲಿಬರೇಶನ್ ಆರ್ಗನೈಸೇಶನ್ (PLO) ನ ಉನ್ನತ-ಶ್ರೇಣಿಯ ಸದಸ್ಯರನ್ನು ʼಕಿಡಾನ್ʼ ಗುರಿಯಾಗಿಸಿಕೊಂಡಿತ್ತು.

ಸರಣಿ ಹತ್ಯೆಗಳು

ಮುಂದಿನ ಹಲವಾರು ವರ್ಷಗಳಲ್ಲಿ ಮೊಸಾದ್‌ ತಂಡದವರು ಯುರೋಪ್ ಮತ್ತು ಮಧ್ಯಪ್ರಾಚ್ಯದಾದ್ಯಂತ ಉನ್ನತ ಮಟ್ಟದ ಹತ್ಯೆಗಳನ್ನು ನಡೆಸಿದ್ದರು. ಇದು ಅತ್ಯಂತ ಗಮನಾರ್ಹವಾದ ಕೆಲವು ಕಾರ್ಯಾಚರಣೆಗಳನ್ನು ಒಳಗೊಂಡಿತ್ತು.

ವೇಲ್ ಜ್ವೈಟರ್

ಮೊದಲ ಗುರಿ ರೋಮ್‌ನಲ್ಲಿ ವಾಸಿಸುತ್ತಿದ್ದ ಪ್ಯಾಲೆಸ್ಟೀನಿಯನ್ ಕವಿ ಮತ್ತು ಅನುವಾದಕ ವೇಲ್ ಜ್ವೈಟರ್ ಆಗಿದ್ದ. ಈತ ಸೆಪ್ಟೆಂಬರ್ ದಾಳಿಯ ಪ್ರಮುಖ ಮುಖ್ಯಸ್ಥನಾಗಿದ್ದ ಎನ್ನಲಾಗಿದೆ. 1972ರ ಅಕ್ಟೋಬರ್ 16ರಂದು ಇಬ್ಬರು ಮೊಸ್ಸಾದ್ ಹಿಟ್‌ಮ್ಯಾನ್‌ಗಳು ಜ್ವೈಟರ್‌ನ ಅಪಾರ್ಟ್ಮೆಂಟ್ ಕಟ್ಟಡದ ಲಾಬಿಯಲ್ಲಿ ಹೊಂಚು ಹಾಕಿ 11 ಬಾರಿ ಗುಂಡು ಹಾರಿಸಿದರು. ಆದರೆ ಜ್ವೈಟರ್ ಮೇಲಿನ ದಾಳಿಯನ್ನು ಮೊಸಾದ್‌ ಗುಪ್ತಚರವು ದೃಢೀಕರಿಸಿಲ್ಲ.

ಮಹಮೂದ್ ಹಂಶರಿ

ಫ್ರಾನ್ಸ್‌ನಲ್ಲಿ ಪಿಎಲ್‌ಒ ಪ್ರತಿನಿಧಿಯಾಗಿದ್ದ ಮಹಮೂದ್ ಹಂಶರಿ ಮುಂದಿನ ಗುರಿಯಾಗಿದ್ದ. ಮೊಸಾದ್ ಕಾರ್ಯಕರ್ತರು ಆತನನ್ನು ಪ್ಯಾರಿಸ್ ಅಪಾರ್ಟ್ಮೆಂಟ್ ನಲ್ಲಿ ಪತ್ತೆ ಹಚ್ಚಿದರು. ಪತ್ರಕರ್ತರಂತೆ ನಟಿಸಿ ಆತನ ದೂರವಾಣಿಯಲ್ಲಿ ಬಾಂಬ್ ಇಡುವಲ್ಲಿ ಯಶಸ್ವಿಯಾದರು. 1972ರ ಡಿಸೆಂಬರ್ 8ರಂದು ಬಾಂಬ್ ಸ್ಫೋಟಿಸಿ, ಹಂಶರಿಯನ್ನು ಕೊಂದರು.

ಹುಸೇನ್ ಅಲ್ ಬಶೀರ್

ಸೈಪ್ರಸ್ ಮೂಲದ ಪಿಎಲ್‌ಒ ಆಪರೇಟಿವ್ ಹುಸೇನ್ ಅಲ್ ಬಶೀರ್ ಮೇಲೆ ದಾಳಿಯ ಯೋಜನೆ ರೂಪಿಸಿದ ಮೊಸ್ಸಾದ್ ಏಜೆಂಟ್‌ಗಳು 1973ರ ಜನವರಿ 24ರಂದು ನಿಕೋಸಿಯಾ ಹೊಟೇಲ್‌ನಲ್ಲಿ ಅವನ ಹಾಸಿಗೆಯ ಕೆಳಗೆ ಬಾಂಬ್ ಇಟ್ಟರು. ಇದರ ಸ್ಫೋಟದಿಂದ ಬಶೀರ್ ತಕ್ಷಣ ಸಾವನ್ನಪ್ಪಿದ್ದ.

Munich Massacre


ಬೈರುತ್ ಕಾರ್ಯಾಚರಣೆ

1973ರ ಎಪ್ರಿಲ್ 10ರಂದು ಬೈರುತ್‌ನಲ್ಲಿ ಅತ್ಯಂತ ರೋಚಕ ಕಾರ್ಯಾಚರಣೆ ನಡೆಸಲಾಯಿತು. ಮೊಸ್ಸಾದ್ ಸಿಬ್ಬಂದಿ ಇಸ್ರೇಲ್ ಕಮಾಂಡೋಗಳೊಂದಿಗೆ ಸೇರಿ ಗಣ್ಯ ಸಯೆರೆಟ್ ಮಟ್ಕಲ್ ಘಟಕದ ಮಹಿಳೆಯರಂತೆ ವೇಷ ಧರಿಸಿ ಬೈರುತ್‌ಗೆ ನುಸುಳಿದರು. ಕಾರ್ಯಾಚರಣೆಯು ಮೂರು ಪ್ರಮುಖ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡಿತ್ತು. ಮೊಹಮ್ಮದ್ ಯೂಸೆಫ್ ಅಲ್-ನಜ್ಜರ್, ಕಮಲ್ ಅಡ್ವಾನ್ ಮತ್ತು ಕಮಲ್ ನಾಸರ್. ಈ ಕಾರ್ಯಾಚರಣೆ ಯಶಸ್ವಿಯಾಗಿತ್ತು.

ಇದನ್ನೂ ಓದಿ: Bangladesh: ಪ್ರಧಾನಿ ರಾಜೀನಾಮೆಗೆ ಒತ್ತಾಯಿಸಿ ಬಾಂಗ್ಲಾದೇಶದಲ್ಲಿ ಹಿಂಸಾಚಾರ; 91 ಜನ ಸಾವು

ಅಲಿ ಹಸನ್ ಸಲಾಮೆಹ್

“ರೆಡ್ ಪ್ರಿನ್ಸ್” ಎಂದು ಕರೆಯಲ್ಪಡುವ ಅಲಿ ಹಸನ್ ಸಲಾಮೆ ಮೊಸ್ಸಾದ್ ನ ಪ್ರಮುಖ ಗುರಿಯಾಗಿತ್ತು. ಸಲಾಮೆ ಮ್ಯೂನಿಚ್ ದಾಳಿಯ ಮುಖ್ಯಸ್ಥನಾಗಿದ್ದ. ಪಿಎಲ್‌ಒ ಮಾಜಿ ಮುಖ್ಯಸ್ಥ ಯಾಸರ್ ಅರಾಫತ್ ಅವರ ನಿಕಟ ಸಹವರ್ತಿಯಾಗಿದ್ದ.

ನಾರ್ವೆಯಲ್ಲಿ ವಿಫಲ ಪ್ರಯತ್ನದಲ್ಲಿ ಮೊಸ್ಸಾದ್ ತಂಡವು ಅಹ್ಮದ್ ಬೌಚಿಖಿ ಎಂಬ ಅಮಾಯಕ ಮೊರೊಕನ್ ಅಡುಗೆಯವನನ್ನು ತಪ್ಪಾಗಿ ಕೊಂದಿತು. ಬಳಿಕ ಸಲಾಮೆಯನ್ನು ಪತ್ತೆಹಚ್ಚಲು ತನ್ನ ಪ್ರಯತ್ನಗಳನ್ನು ತೀವ್ರಗೊಳಿಸಿತು. 1979ರಲ್ಲಿ ಸಲಾಮೆ ಮತ್ತು ಅವನ ಹೆಂಡತಿಯೊಂದಿಗೆ ಸ್ನೇಹ ಬೆಳೆಸಿದ ರಹಸ್ಯ ಕಾರ್ಯಾಚರಣೆಯ ತಂಡಕ್ಕೆ ಪ್ರಗತಿ ದೊರೆಯಿತು. 1979ರ ಜನವರಿ 22ರಂದು ಸಲಾಮೆ ಬೈರುತ್‌ನಲ್ಲಿ ಕಾರ್ ಬಾಂಬ್‌ನಿಂದ ಕೊಲ್ಲಲ್ಪಟ್ಟನು. ಹೀಗೆ ಇಸ್ರೇಲ್‌ ತನ್ನ ವೈರಿಗಳ ಮೇಲೆ ಸೇಡು ತೀರಿಸಿಕೊಂಡಿತು.

Exit mobile version