ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಂಗಳವಾರ ಮೋಡಿ ಮಾಡಿದ್ದಾರೆ. ಸಿಡ್ನಿಯ ಫುಟ್ಬಾಲ್ ಮೈದಾನದಲ್ಲಿ ನಡೆದ ಬೃಹತ್ ಸಭೆಯಲ್ಲಿ ಸಾವಿರಾರು ಅನಿವಾಸಿ ಭಾರತೀಯರನ್ನುದ್ದೇಶಿಸಿ ಮೋದಿ ಮಾತನಾಡಿದರು. ಅಲ್ಲದೆ, ಇದೇ ವೇಳೆ ಮೋದಿ ಅವರು ಬ್ರಿಸ್ಬೇನ್‌ನಲ್ಲಿ ಭಾರತದ ಕಾನ್ಸುಲೇಟ್ ಕಚೇರಿ ಸ್ಥಾಪಿಸಲಾಗುವುದು ಎಂದು ಘೋಷಿಸಿದ್ದಾರೆ.
“ಸುಮಾರು 20 ಸಾವಿರ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಅವರು, “ಬ್ರಿಸ್ಬೇನ್‌ನಲ್ಲಿರುವ ಸಾವಿರಾರು ಭಾರತೀಯರ ಕನಸು ನನಸಾಗುವ ಸಮಯ ಬಂದಿದೆ. ಇಷ್ಟು ದಿನಗಳ ನಿಮ್ಮ ಬೇಡಿಕೆ ಈಡೇರುವ ಸಮಯ ಸನ್ನಿಹಿತವಾಗಿದೆ. ನಾನು ಇಲ್ಲಿಗೆ ಸುಮ್ಮನೆ ಬಂದಿಲ್ಲ. ನಿಮಗಾಗಿ ಒಂದು ಘೋಷಣೆಯೊಂದನ್ನು ಹೊತ್ತು ತಂದಿದ್ದೇನೆ. ಶೀಘ್ರದಲ್ಲಿಯೇ ಬ್ರಿಸ್ಬೇನ್‌ನಲ್ಲಿ ಕಾನ್ಸುಲೇಟ್ ಕಚೇರಿಯನ್ನು ನಿರ್ಮಿಸಲಾಗುವುದು” ಎಂದು ಘೋಷಿಸಿದರು.
ಮೂರು ‘ಸಿ’ ‘ಡಿ’ ಹಾಗೂ ‘ಇ’ಗಳೊಂದಿಗೆ ಭಾರತ-ಆಸ್ಟ್ರೇಲಿಯಾ ನಂಟು
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸಂಬಂಧದ ಕುರಿತು ಕೂಡ ನರೇಂದ್ರ ಮೋದಿ ಪ್ರಸ್ತಾಪಿಸಿದರು. “ಮೂರು ‘ಸಿ’ಗಳು ಭಾರತ ಹಾಗೂ ಆಸ್ಟ್ರೇಲಿಯಾ ನಂಟು ಗಟ್ಟಿಯಾಗಿದೆ. ಕ್ರಿಕೆಟ್, ಕರಿ ಹಾಗೂ ಕ್ರಿಕೆಟ್‌ನೊಂದಿಗೆ ಉಭಯ ರಾಷ್ಟ್ರಗಳು ಉತ್ತಮ ಸಂಬಂಧ ಹೊಂದಿದೆ” ಎಂದು ಹೇಳಿದರು. ಹಾಗೆಯೇ, ಡೆಮಾಕ್ರಸಿ, ಡಯಸ್ಪೋರಾ ಹಾಗೂ ದೋಸ್ತಿ ಎಂಬ ಮೂರು ‘ಡಿʼ, ಎನರ್ಜಿ, ಎಕಾನಮಿ ಹಾಗೂ ಎಜುಕೇಷನ್ ಎಂಬ ಮೂರು ‘ಇ’ಗಳೊಂದಿಗೆ ಎರಡೂ ದೇಶಗಳ ಸಂಬಂಧ ಗಟ್ಟಿಯಾಗಿದೆ ಎಂದು ಕೂಡ ತಿಳಿಸಿದರು.
ಜನರನ್ನು ಮೋಡಿ ಮಾಡಿದ ಮೋಡಿ
ಸ್ಟೇಡಿಯಂನಲ್ಲಿ ಮೋದಿ ಭಾಷಣವು ಮೋಡಿ ಮಾಡಿತು. ಇಡೀ ಅನಿವಾಸಿ ಭಾರತೀಯರನ್ನು ಒಳಗೊಳ್ಳಿಸುವ ಮೂಲಕ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದರು. “ಜಗತ್ತಿನಲ್ಲೇ ಹಾಲಿನ ಉತ್ಪಾದನೆಯಲ್ಲಿ ನಂಬರ್ ಒನ್ ಇದೆ, ಅದು ಯಾವ ದೇಶ” ಎಂದು ಪ್ರಶ್ನಿಸಿದರು. ಆಗ ಎಲ್ಲರೂ ಇಂಡಿಯಾ ಇಂಡಿಯಾ ಎಂದು ಘೋಷಣೆ ಕೂಗಿದರು. ಹಾಗೆಯೇ, ಮೊಬೈಲ್ ಉತ್ಪಾದನೆಯಲ್ಲಿ ಎರಡನೇ ಸ್ಥಾನ, ಸ್ಟಾರ್ಟಪ್ ಎಕೋ ಸಿಸ್ಟಂನಲ್ಲಿ ನಂಬರ್ ಒನ್ ಸೇರಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದಾಗಲೂ ಜನ ಇಂಡಿಯಾ ಇಂಡಿಯಾ ಎಂದು ಘೋಷಿಸಿದರು.
ಮೋದಿ ಭಾಷಣದ ಮೋಡಿ ನೋಡಿ
ಮೋದಿ ಭಾಷಣದ ವೇಳೆ ಕೊರೊನಾ ನಿರೋಧಕ ಲಸಿಕೆ, ಬೇರೆ ದೇಶಗಳಿಗೆ ನೆರವು, ಭಾರತದ ರಫ್ತು, ಮಾಹಿತಿ ಮತ್ತು ತಂತ್ರಜ್ಞಾನ, ಬ್ಯಾಂಕಿಂಗ್ ಸೇರಿ ಹತ್ತಾರು ವಿಷಯಗಳನ್ನು ಪ್ರಸ್ತಾಪಿಸಿದರು. ಮೋದಿ ಭಾಷಣದ ಉದ್ದಕ್ಕೂ ಜನ ಮೋದಿ ಮೋದಿ ಎಂದು ಘೋಷಣೆ ಕೂಗಿದರು. ಭಾರತ್ ಮಾತಾ ಕೀ ಜೈ ಎಂಬ ಘೋಷಣೆಗಳೂ ಭಾಷಣದುದ್ದಕ್ಕೂ ಮೊಳಗಿದವು.
ನನ್ನ ಮಾತು ಉಳಿಸಿಕೊಂಡಿರುವೆ ಎಂದ ಮೋದಿ…
ನಾನು 2014ರಲ್ಲಿ ಆಸ್ಟ್ರೇಲಿಯಾಕ್ಕೆ ಬಂದಾಗ ಇಲ್ಲಿನ ಭಾರತೀಯರಿಗೆ ಒಂದು ಮಾತು ಕೊಟ್ಟಿದ್ದೆ. ಈಗ ಅದನ್ನು ಉಳಿಸಿಕೊಂಡಿದ್ದೇನೆ. ನಾನೀಗ ಪ್ರಧಾನಿಯಾಗಿ ಬಂದಿದ್ದೇನೆ, ಮತ್ತೆ ಇಲ್ಲಿಗೆ ಪ್ರಧಾನಿಯೊಬ್ಬರು ಬರಲು 28 ವರ್ಷ ಬೇಕಾಗುವುದಿಲ್ಲ ಎಂದು ಮಾತುಕೊಟ್ಟಿದೆ. ಅದರಂತೆ ಈಗ ನಿಮ್ಮ ಮುಂದೆ ಬಂದು ನಿಂತಿದ್ದೇನೆ ಎಂದು ಹೇಳಿದರು. ಆಗಲೂ ಜನ ಮೋದಿ ಮೋದಿ ಎಂದು ಘೋಷಿಸಿದರು.
ಇದನ್ನೂ ಓದಿ: Narendra Modi : ಮೋದಿ ಮತ್ತು ಖಾದಿ; ಬಿಡಿಸಲಾಗದ ಅನುಬಂಧ!
ಮೊಳಗಿದ ಜನಗಣಮನ
ಸಾವಿರಾರು ಅನಿವಾಸಿ ಭಾರತೀರಯರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡುವ ಮುನ್ನ ಸ್ಟೇಡಿಯಂನಲ್ಲಿ ಭಾರತದ ರಾಷ್ಟ್ರಗೀತೆ ಮೊಳಗಿತು. ಸುಮಾರು 20 ಸಾವಿರ ಜನ ಎದ್ದು ನಿಂತು ಜನಗಣಮನ ಹಾಡಿದರು. ನರೇಂದ್ರ ಮೋದಿ ಅವರೂ ರಾಷ್ಟ್ರಗೀತೆ ಹಾಡಿದರು. ರಾಷ್ಟ್ರಗೀತೆ ಮುಗಿಯುತ್ತಲೇ ಜನ ಭಾರತ್ ಮಾತಾ ಕೀ ಜೈ ಎಂದು ಘೋಷಿಸಿದರು.