ವಾಷಿಂಗ್ಟನ್: ಭೂಮಿಯ ಮೇಲಿನ ಎಲ್ಲ ಜಲಮೂಲಗಳನ್ನು ಸಮೀಕ್ಷೆ ಮಾಡುವುದಕ್ಕಾಗಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ, ನ್ಯಾಷನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್(ನಾಸಾ-NASA) ಉಪಗ್ರಹವೊಂದನ್ನು ಶುಕ್ರವಾರ ಯಶಸ್ವಿಯಾಗಿ ಲಾಂಚ್ ಮಾಡಿದೆ. ಹವಾಮಾನ ಬದಲಾವಣೆಯಿಂದ ಜಲಮೂಲಗಳ ಮೇಲಾಗುತ್ತಿರುವ ಪರಿಣಾಮ ಕುರಿತು ಅಧ್ಯಯನ ಕೈಗೊಳ್ಳುವ ಗುರಿಯನ್ನು ನಾಸಾ ಹೊಂದಿದೆ(NASA Launches SWOT).
ಸರ್ಫೇಸ್ ವಾಟರ್ ಆ್ಯಂಡ್ ಓಷನ್ ಟೋಪೋಗ್ರಫಿ(SWOT) ಉಪಗ್ರಹವು ನೂರು ಕೋಟಿ ಡಾಲರ್ ಯೋಜನೆಯಾಗಿದೆ. ಫ್ರಾನ್ಸ್‌ನ ಬಾಹ್ಯಾಕಾಶ ಸಂಸ್ಥೆ ಸಿಎನ್‌ಇಎಸ್‌ನ ಜತೆಗೂಡಿ ನಾಸಾ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಕ್ಯಾಲಿಫೋರ್ನಿಯಾದ ವ್ಯಾಂಡೆನ್‌ಬರ್ಗ್ ಸ್ಪೇಸ್ ಫೋರ್ಸ್ ನೆಲೆಯಿಂದ ಈ ಉಪಗ್ರಹವನ್ನು ಶುಕ್ರವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.
ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯದ ಬಳಿಕ ಈ ಉಪಗ್ರಹವು ಆರು ತಿಂಗಳಲ್ಲಿ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಸಂಗ್ರಹಿಸಲಿದೆ ಎಂದು ನಾಸಾ ಹೇಳಿಕೊಂಡಿದೆ. ಭೂಮಿಯ ಸುತ್ತು ನೀರು ಹೇಗೆ ಸಂಚರಿಸುತ್ತಿದೆ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಸ್ವೋಟ್(SWOT) ಕ್ರಾಂತಿಕಾರಕ ಮಾಹಿತಿಯನ್ನು ಒದಗಿಸಲಿದೆ ಎಂದು ನಾಸಾ ಅರ್ಥ್ ಸೈನ್ಸ್ ವಿಭಾಗದ ನಿರ್ದೇಶಕಿ ಕರೆನ್ ಸೇಂಟ್ ಜರ್ಮೈನ್ ಅವರು ತಿಳಿಸಿದ್ದಾರೆ.
ಈ ಉಪಗ್ರಹ ಒದಗಿಸುವ ದತ್ತಾಂಶಗಳಿಂದ ನಾವು ಈ ಹಿಂದೆಂದೂ ನೋಡಲು ಸಾಧ್ಯವಾಗದ ಸಾಗರಗಳಲ್ಲಿನ ಸುಳಿಗಳು ಮತ್ತು ಪ್ರವಾಹಗಳ ಹಾಗೂ ಪರಿಚಲನೆಯನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಾಗಲಿದೆ. ಹಾಗೆಯೇ ನೀರು ಹೆಚ್ಚಿರುವ ಪ್ರದೇಶಗಳಲ್ಲಿ ಸಂಭವನೀಯ ನೆರೆಯನ್ನು ಊಹಿಸಲು ಮತ್ತು ಕ್ಷಾಮ ಪೀಡಿತ ಪ್ರದೇಶಗಳನ್ನು ಪ್ರಿಡಿಕ್ಟ್ ಮಾಡಲು ಈ ಉಪಗ್ರಹ ನೀಡುವ ಮಾಹಿತಿಯಿಂದ ಸಾಧ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ | Artemis I Mission | ಚಂದ್ರನ ಅದ್ಭುತ ಫೋಟೋ ಕಳುಹಿಸಿದ ನಾಸಾದ ಆರ್ಟಿಮಿಸ್ I