Site icon Vistara News

ನೇಪಾಳ ವಿಮಾನ ಪತನ; 21 ಮಂದಿಯ ಮೃತದೇಹ ಪತ್ತೆ, ಇನ್ನೊಬ್ಬರಿಗಾಗಿ ಹುಡುಕಾಟ

Plane Crash In Nepal

ಕಠ್ಮಂಡು: ನೇಪಾಳ ವಿಮಾನ ಪತನ (Nepal Plane Crash) ದುರಂತದಲ್ಲಿ, ಅದರಲ್ಲಿದ್ದ ಯಾರೊಬ್ಬರೂ ಜೀವಂತವಾಗಿ ಸಿಕ್ಕಿಲ್ಲ. ಇಲ್ಲಿಯವರೆಗೆ 21 ಮಂದಿಯ ಮೃತದೇಹ ಪತ್ತೆಯಾಗಿದೆ. ಘಟನೆ ನಡೆದ ಸ್ಥಳಲ್ಲಿ ಸದ್ಯ 60 ಮಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇನ್ನೊಬ್ಬರಾದರೂ ಜೀವಂತವಾಗಿ ಸಿಗುತ್ತಾರೆ ಎಂಬ ಭರವಸೆ ಉಳಿದಿಲ್ಲ. ಸದ್ಯ ಸಿಕ್ಕಿರುವ ಶವಗಳನ್ನು ಕಠ್ಮಂಡುವಿಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ತ್ರಿಭುವನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ತೇಕನಾಥ್‌ ಸಿತೌಳಾ ಹೇಳಿದ್ದಾರೆ. ನೇಪಾಳದ ತಾರಾ ಏರ್‌ಲೈನ್ಸ್‌ ಸಂಸ್ಥೆಗೆ ಸೇರಿದ ಸಣ್ಣ ವಿಮಾನ ನಿನ್ನೆ (ಮೇ 29) ಮುಸ್ತಾಂಗ್‌ನ ಥಾಸಾಂಗ್‌-2 ಬಳಿಯ ಸನೋಸ್ವೇರ್‌ ಎಂಬಲ್ಲಿ  ಪತನಗೊಂಡಿತ್ತು. ಮೊದಲಿಗೆ ವಿಮಾನ ಎಲ್ಲಿ ಅಪಘಾತಕ್ಕೀಡಾಗಿದೆ ಎಂಬುದೇ ಗೊತ್ತಾಗಿರಲಿಲ್ಲ. ಬಳಿಕ ಸ್ಥಳ ಪತ್ತೆಯಾದರೂ ಪ್ರತಿಕೂಲ ಹವಾಮಾನದಿಂದಾಗಿ ರಕ್ಷಣಾ ಕಾರ್ಯಾಚರಣೆ ಸಾಧ್ಯವಾಗಿರಲಿಲ್ಲ. ಇಂದು ಮುಂಜಾನೆ ನೇಪಾಳ ಆರ್ಮಿ ಟ್ವೀಟ್‌ ಮಾಡಿ, ಘಟನೆ ನಡೆದ ಸ್ಥಳದ ಬಗ್ಗೆ ಮಾಹಿತಿ ಹಂಚಿಕೊಂಡಿತ್ತು. ಚೂರುಚೂರಾಗಿ ಬಿದ್ದ ವಿಮಾನದ ಫೋಟೋಗಳನ್ನೂ ಶೇರ್‌ ಮಾಡಿಕೊಂಡಿತ್ತು.

ಇಂದು ಬೆಳಗ್ಗೆ ನೇಪಾಳ ಸೇನೆಯ 15 ತಂಡಗಳು ಕಾರ್ಯಪ್ರವೃತ್ತರಾದವು. ಈ ವಿಮಾನ ಸಮುದ್ರಮಟ್ಟದಿಂದ 14,500 ಅಡಿ ಎತ್ತರದಲ್ಲಿ ಪತನಗೊಂಡಿತ್ತು. ಆದರೆ ಅದರಲ್ಲಿದ್ದ ಪ್ರಯಾಣಿಕರ ಸ್ಥಿತಿ ಏನಾಗಿದೆ ಎಂದು ನೋಡಿ, ಅವರನ್ನು ರಕ್ಷಣೆ ಮಾಡುವ ಸಲುವಾಗಿ ಹೊರಟಿದ್ದ ಸೈನಿಕರ ತಂಡವನ್ನು ಸುಮಾರು 11 ಸಾವಿರ ಅಡಿಗಳಷ್ಟು ಎತ್ತರಕ್ಕೆ ಕರೆದೊಯ್ದು ಬಿಡಲಾಗಿತ್ತು. ನಂತರ ಘಟನೆ ನಡೆದ ಸ್ಥಳಕ್ಕೆ ತೆರಳಲಾಗಿದೆ ಎಂದು ನೇಪಾಳ ಆರ್ಮಿ ವಕ್ತಾರ ಬ್ರಿಗೇಡಿಯರ್‌ ಜನರಲ್‌ ನಾರಾಯಣ್‌ ಸಿಲ್ವಾಲ್‌ ತಿಳಿಸಿದ್ದರು.

ಇದನ್ನೂ ಓದಿ: ಏರ್‌ಪೋರ್ಟ್‌ನಲ್ಲೇ ಹೆಲಿಕಾಪ್ಟರ್‌ ಪತನ; ಇಬ್ಬರು ಪೈಲಟ್‌ಗಳ ದುರ್ಮರಣ

ನೇಪಾಳ ನಾಗರಿಕ ವಿಮಾನಯಾನ ಪ್ರಾಧಿಕಾರ (ಸಿಎಎಎನ್‌) ಪ್ರಕಟಣೆ ಬಿಡುಗಡೆ ಮಾಡಿ, ಮೃತದೇಹಗಳು ಸಿಕ್ಕಿವೆ. ವಿಮಾನದ ಅವಶೇಷ ಕಾಣಿಸಿದ್ದು ಮೊದಲು ಇಂದಾ ಸಿಂಗ್‌ ಎಂಬುವರಿಗೆ. ವಿಮಾನ ಸಂಪೂರ್ಣವಾಗಿ ಚೂರುಚೂರಾದ ಸ್ಥಿತಿಯಲ್ಲಿದೆ. ಅದರಲ್ಲಿದ್ದವರೆಲ್ಲ ಅಲ್ಲೇ ಅಕ್ಕಪಕ್ಕದ ಕಣಿವೆಗಳಲ್ಲಿ ಬಿದ್ದು ಮೃತಪಟ್ಟಿದ್ದಾರೆ ಎಂದು ಅವರೇ ಮಾಹಿತಿ ನೀಡಿದ್ದರು. ಅವರ ಮಾಹಿತಿ ಸಿಕ್ಕ ಬಳಿಕ ಸ್ವಲ್ಪವೂ ತಡ ಮಾಡದೆ ಅಲ್ಲಿಗೆ ಹೋಗಲಾಯಿತು. ಇದೀಗ ಸಿಕ್ಕಿರುವ ಮೃತದೇಹಗಳ ಗುರುತು ಪತ್ತೆ ಹಚ್ಚಬಹುದಾಗಿದ್ದು, ನಾವು ಅವರ ಕುಟುಂಬದದೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದೂ ಸಿಎಎಎನ್‌ ತಿಳಿಸಿದೆ.

ತಾರಾ ಏರ್‌ ಸಂಸ್ಥೆಗೆ ಸೇರಿದ 9 NAET ಎಂಬ ಎರಡು ಎಂಜಿನ್‌ಗಳ ವಿಮಾನ ಭಾನುವಾರ ಬೆಳಗ್ಗೆ 9.55 ರ ಹೊತ್ತಿಗೆ ನೇಪಾಳದ ಪೊಖರದಿಂದ ಹೊರಟಿತ್ತು. ಇದರಲ್ಲಿ ನಾಲ್ವರು ಭಾರತೀಯರು, 13 ಮಂದಿ ನೇಪಾಳಿಯನ್ನರು ಮತ್ತು ಇಬ್ಬರು ಜರ್ಮನ್ನರು ಇದ್ದರು. ಹೊರಟ ಕೆಲವೇ ಹೊತ್ತಲ್ಲಿ ಕಂಟ್ರೋಲ್‌ ಸೆಂಟರ್‌ನ ಸಂಪರ್ಕ ಕಡಿತಗೊಂಡಿತ್ತು.

ಇದನ್ನೂ ಓದಿ: Nepal Plane Crash: ನೇಪಾಳ ವಿಮಾನ ಪತನಗೊಂಡ ಸ್ಥಳ ಪತ್ತೆ; 22 ಪ್ರಯಾಣಿಕರ ಸುಳಿವಿಲ್ಲ

Exit mobile version