ಕಾಠ್ಮಂಡು: ನಾಲ್ವರು ಭಾರತೀಯರು ಸೇರಿ 22 ಜನ ಪ್ರಯಾಣಿಕರಿದ್ದ ನೇಪಾಳದ ದೇಶೀಯ ವಿಮಾನವೊಂದು ಮೇ 29 ರಂದು ಪತನ (Nepal Plane Crash)ವಾಗಿದೆ. ತಾರಾ ಏರ್ ಸಂಸ್ಥೆಗೆ ಸೇರಿದ 9 NAET ಎಂಬ ಎರಡು ಎಂಜಿನ್‌ಗಳ ಏರ್‌ಕ್ರಾಫ್ಟ್ ಬೆಳಗ್ಗೆ 9.55ಕ್ಕೆ ಪೋಖರದಿಂದ ಹೊರಟಿತ್ತು. ಸ್ವಲ್ಪ ಹೊತ್ತಿನಲ್ಲೇ ಗುಡ್ಡಗಾಡು ಪ್ರದೇಶಗಳ ಮಧ್ಯೆ ನಾಪತ್ತೆಯಾಗಿತ್ತು. ಅದಾದ ಎರಡೇ ತಾಸುಗಳಲ್ಲಿ ಮುಸ್ತಾಂಗ್‌ನ ಕೊವಾಂಗ್ ಎಂಬ ಹಳ್ಳಿಯಲ್ಲಿ ವಿಮಾನ ಪತ್ತೆಯಾಗಿತ್ತು. ಆದರೆ ಈ ವಿಮಾನ ಎಲ್ಲಿ ಅಪಘಾತವಾಯಿತು ಎಂಬುದು ಗೊತ್ತಾಗಿರಲಿಲ್ಲ. ಆದರೆ ಈಗ ವಿಮಾನ ಅಪಘಾತದ ಸ್ಥಳ ಮತ್ತು ಅದರ ಅವಶೇಷಗಳನ್ನು ಪತ್ತೆ ಮಾಡಿದ್ದೇವೆ ಎಂದು ನೇಪಾಳ ಸೇನೆ ಟ್ವೀಟ್ ಮೂಲಕ ತಿಳಿಸಿದೆ.
ಈ ವಿಮಾನದಲ್ಲಿ ನಾಲ್ವರು ಭಾರತೀಯರು, ಇಬ್ಬರು ಜರ್ಮನ್ನರು ಮತ್ತು 13 ನೇಪಾಳಿಗಳು ಇದ್ದರು. ಹಾಗೇ, ವಿಮಾನದ ಸಿಬ್ಬಂದಿ ಮೂವರೂ ನೇಪಾಳದವರೇ ಆಗಿದ್ದರು. ಇದು ಸುಮಾರು 43 ವರ್ಷಗಳ ಹಳೇ ವಿಮಾನವಾಗಿತ್ತು. ಭಾನುವಾರ ನೇಪಾಳದ ಪ್ರಸಿದ್ಧ ಪ್ರವಾಸಿ ತಾಣವಾದ ಜೋಮ್ಸಮ್‌ಗೆ ಹೊರಟಿತ್ತು. ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ನಿಯಂತ್ರಣ ಕೇಂದ್ರದ ಸಂಪರ್ಕ ಕಳೆದುಕೊಂಡಿದ್ದ ವಿಮಾನ ಮುಸ್ತಾಂಗ್‌ನ ಥಾಸಾಂಗ್-2 ಬಳಿಯ ಸನೋಸ್ವೇರ್ ಎಂಬಲ್ಲಿ ಪತನಗೊಂಡಿದ್ದು ಗೊತ್ತಾಗಿದೆ ಎಂದು ನೇಪಾಳ ಆರ್ಮಿ ವಕ್ತಾರ ಬ್ರಿಗೇಡಿಯರ್ ಜನರಲ್ ನಾರಾಯಣ್ ಸಿಲ್ವಾಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಏರ್‌ಪೋರ್ಟ್‌ನಲ್ಲೇ ಹೆಲಿಕಾಪ್ಟರ್ ಪತನ; ಇಬ್ಬರು ಪೈಲಟ್‌ಗಳ ದುರ್ಮರಣ
ಭಾನುವಾರ ವಿಮಾನ ನಾಪತ್ತೆಯಾದಾಗಿನಿಂದಲೂ ಅದರ ಪತ್ತೆ ಕಾರ್ಯ ನಡೆಯುತ್ತಿತ್ತು. ಕೊವಾಂಗ್ ಹಳ್ಳಿ ಬಳಿ ಕಾಣಿಸಿದ್ದರೂ ಅದು ಯಾವ ಸ್ಥಿತಿಯಲ್ಲಿದೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿರಲಿಲ್ಲ. ಇದೀಗ ವಿಮಾನದ ಅವಶೇಷ ಪತ್ತೆಯಾಗಿರುವುದಾಗಿ ಹೇಳಿದ್ದು, ಯಾವುದೇ ಪ್ರಯಾಣಿಕರೂ ಕಾಣಿಸುತ್ತಿಲ್ಲ. ಇವರ್ಯಾರೂ ಬದುಕಿರುವ ಸಾಧ್ಯತೆಯಿಲ್ಲ ಎಂದೇ ಹೇಳಲಾಗಿದೆ. ವಿಮಾನದಲ್ಲಿದ್ದ ನಾಲ್ವರು ಭಾರತೀಯರು ಮಹಾರಾಷ್ಟ್ರದ ಥಾಣೆಯವರಾಗಿದ್ದು, ಅಶೋಕ್ ಕುಮಾರ್ ತ್ರಿಪಾಠಿ, ಅವರ ಮಾಜಿ ಪತ್ನಿ ವೈಭವಿ ತ್ರಿಪಾಠಿ, ಮಗ ಧನುಷ್ ತ್ರಿಪಾಠಿ ಮತ್ತು ಮಗಳು ರಿತಿಕಾ ತ್ರಿಪಾಠಿ ಎಂದು ಗುರುತಿಸಲಾಗಿದೆ. ಅಶೋಕ್ ತ್ರಿಪಾಠಿ ಮತ್ತು ವೈಭವಿ ತ್ರಿಪಾಠಿ ವಿಚ್ಛೇದಿತರಾಗಿದ್ದರೂ, ವರ್ಷಕ್ಕೆ ಒಮ್ಮೆ ಮಕ್ಕಳಿಗಾಗಿ ಒಟ್ಟಾಗಿ ರಜಾದಿನಗಳನ್ನು ಕಳೆಯುತ್ತಿದ್ದರು. ಈ ಕುಟುಂಬದವರೊಂದಿಗೆ ನೇಪಾಳ ಸರ್ಕಾರ ಸಂಪರ್ಕದಲ್ಲಿದೆ. ಸದ್ಯ ವೈಭವಿ ತ್ರಿಪಾಠಿ ತಾಯಿಗೆ ವಿಷಯ ತಿಳಿಸಿಲ್ಲ.
ರಕ್ಷಣಾ ಕಾರ್ಯಾಚರಣೆಗೆ ತೊಡಕು
ವಿಮಾನ ಪತನಕ್ಕೆ ಹವಾಮಾನ ಪ್ರತಿಕೂಲವೇ ಕಾರಣ ಎನ್ನಲಾಗಿದೆ. ಈ ಖಾಸಗಿ ವಿಮಾನ ಕಾಣೆಯಾಗುತ್ತಿದ್ದಂತೆ ಅದನ್ನು ಪತ್ತೆ ಮಾಡಿ, ಪ್ರಯಾಣಿಕರನ್ನು ರಕ್ಷಿಸಲು ಮುಸ್ತಾಂಗ್ ಮತ್ತು ಪೊಖರದ ಎರಡು ಖಾಸಗಿ ಹೆಲಿಕಾಪ್ಟರ್‌ಗಳನ್ನು ನೇಪಾಳ ಗೃಹ ಇಲಾಖೆ ನಿಯೋಜಿಸಿತ್ತು. ಆದರೆ ಹಿಮಾಚ್ಛಾದಿತವಾಗಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿತ್ತು. ಇನ್ನು ನೇಪಾಳದಲ್ಲಿ ಮೌಂಟ್ ಎವರೆಸ್ಟ್ ಸೇರಿ 14 ಅತ್ಯಂತ ಎತ್ತರದ ಶಿಖರಗಳಿವೆ. ಅದರ ಹೊರತಾಗಿಯೂ ಚಿಕ್ಕ ಗುಡ್ಡಗಳಿವೆ. ಇದೊಂದು ಪರ್ವತ ಪ್ರದೇಶವಾಗಿದ್ದು, ವಿಮಾನ ಅಪಘಾತಗಳ ಸಂಖ್ಯೆಯೂ ಹೆಚ್ಚಾಗಿದೆ.
2016ರಲ್ಲಿ ಇದೇ ತಾರಾ ಏರ್‌ಲೈನ್‌ಗೆ ಸೇರಿದ ವಿಮಾನವೊಂದು ಇದೇ ಮಾರ್ಗದಲ್ಲಿ ಸಂಚಾರ ಮಾಡುತ್ತಿದ್ದಾಗ ಪತನಗೊಂಡು 23 ಮಂದಿ ಮೃತಪಟ್ಟಿದ್ದರು. 2018ರಲ್ಲಿ ಯುಎಸ್-ಬಾಂಗ್ಲಾ ವಿಮಾನವೊಂದು ತ್ರಿಭುವನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾಗಿ 51 ಪ್ರಯಾಣಿಕರು ಸಾವನ್ನಪ್ಪಿದ್ದರು.
ಇದನ್ನೂ ಓದಿ: ಫ್ರಾನ್ಸ್‌ನಲ್ಲಿ ಏರ್ ಶೋ ವೇಳೆ ಎರಡು ರಫೇಲ್ ವಿಮಾನಗಳ ಡಿಕ್ಕಿ!