Site icon Vistara News

26 ಬಾರಿ ಮೌಂಟ್​ ಎವರೆಸ್ಟ್​ ಏರಿ ದಾಖಲೆ ಬರೆದ ನೇಪಾಳಿ ಶೆರ್ಪಾ; ಇವರ ಕುಲಕಸುಬೇ ಪರ್ವತಾರೋಹಣ!

Nepali sherpa Pasang Dawa Climbed Mount Everest 26 times

#image_title

ನೇಪಾಳದ ಪರ್ವತ ಪ್ರದೇಶಗಳಲ್ಲಿರುವ ಸ್ಥಳೀಯ ಜನಾಂಗವಾದ ಶೆರ್ಪಾಗಳ ಕುಲಕಸುಬು ಅಪಾಯಕಾರಿಯಾದದ್ದು. ಮೌಂಟ್ ಎವರೆಸ್ಟ್ (Mount Everest) ಸೇರಿ ಆ ಭಾಗದ ವಿವಿಧ ಪರ್ವತಕ್ಕೆ ಟ್ರೆಕ್ಕಿಂಗ್ ಮಾಡಲು ಬರುವವರಿಗೆ ಮಾರ್ಗದರ್ಶನ ಮಾಡುವುದೇ ಇವರ ಕೆಲಸ ಆಗಿರುತ್ತದೆ. ಹೀಗೆ ಪರ್ವತಾರೋಹಣಕ್ಕೆ ಬಂದವರನ್ನು ಟ್ರೆಕ್ಕಿಂಗ್ ಮಾಡಿಸುತ್ತ, ತಾವೂ ಬೆಟ್ಟ ಏರುವುದು ಸುಲಭವಲ್ಲ. ಅತ್ಯಂತ ಎತ್ತರದ ಪರ್ವತಗಳನ್ನು ಅವರು ಅದೆಷ್ಟೋ ಸಲ ಹತ್ತಿ ಇಳಿಯಬೇಕಾಗುತ್ತದೆ.

ಇಂಥ ಅಪಾಯಕಾರಿ ಕುಲಕಸುಬಿನಲ್ಲಿ 46ವರ್ಷದ ಶೆರ್ಪಾ ಮಾರ್ಗದರ್ಶಕನೊಬ್ಬ ದಾಖಲೆ ನಿರ್ಮಿಸಿದ್ದಾರೆ. ವಿಶ್ವದ ಅತ್ಯಂತ ಎತ್ತರವಾದ ಶಿಖರ ಮೌಂಟ್​ ಎವರೆಸ್ಟ್​ನ್ನು 26ನೇ ಬಾರಿಗೆ ಹತ್ತಿದ್ದಾರೆ. ಪಸಂಗ್ ದಾವಾ ಶೆರ್ಪಾ (Pasang Dawa Sherpa) ಅವರು ಭಾನುವಾರ (ಮೇ 14) ಈ ಸಾಧನೆ ಮಾಡಿದ್ದು, ಹೀಗೆ ಮೌಂಟ್ ಎವರೆಸ್ಟ್​ನ್ನು 26ನೇ ಸಲ ಹತ್ತಿದ ವಿಶ್ವದ ಎರಡನೇ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇವರಿಗೆ 46ವರ್ಷ.

ಅಂದಹಾಗೇ, ಮೌಂಟ್​ ಎವರೆಸ್ಟ್​ನ್ನು 26 ಬಾರಿ ಏರಿದ ಮೊದಲ ಪರ್ವತಾರೋಹಿ ಮಾರ್ಗದರ್ಶಕ ಕಾಮಿ ರಿಟಾ ಶೆರ್ಪಾ. ಇವರು 2022ರಲ್ಲಿ ಈ ಸಾಧನೆ ಮಾಡಿದ್ದರು. 4ವರ್ಷಗಳಲ್ಲಿ ಐದು ಸಲ ಮೌಂಟ್ ಎವರೆಸ್ಟ್ ಹತ್ತಿದ್ದರು. ಇವರಿಗೆ 53 ವರ್ಷ. ಇನ್ನು ಪಸಂಗ್​ ದಾವಾ ಶೆರ್ಪಾ ಅವರು ಇಮ್ಯಾಜಿನ್​ ನೇಪಾಳ್ ಟ್ರೆಕ್ಸ್​ ಎಂಬ ಟ್ರೆಕ್ಕಿಂಗ್ ಕಂಪನಿಯಲ್ಲೇ ಕೆಲಸ ಮಾಡುತ್ತಿದ್ದಾರೆ. ಈ ಕಂಪನಿ ಕೂಡ ಪಸಂಗ್​ ದಾವಾ ಅವರ ದಾಖಲೆ ಬಗ್ಗೆ ಹೇಳಿದೆ. ಒಬ್ಬ ಹಂಗೇರಿಯನ್​ ವ್ಯಕ್ತಿಗೆ ಮಾರ್ಗದರ್ಶಕರಾಗಿ ಪಸಂಗ್​ ದಾವಾ ಶೆರ್ಪಾ ಅವರು ಪರ್ವತ ಏರಿದ್ದರು ಎಂದು ತಿಳಿಸಿದೆ. ಹಾಗೇ, ಕಾಮಿ ರಿಟಾ ಅವರೂ ಕೂಡ ಇನ್ನೊಬ್ಬ ಪರ್ವತಾರೋಹಿಗೆ ಮಾರ್ಗದರ್ಶನ ಮಾಡುತ್ತ, ಮೌಂಟ್ ಎವರೆಸ್ಟ್​ ಏರುತ್ತಲೇ ಇದ್ದಾರೆ. ಅವರು ಶಿಖರದ ತುದಿ ತಲುಪಿದ ಮೇಲೆ ಮತ್ತೊಂದು ದಾಖಲೆ ನಿರ್ಮಾಣವಾಗಲಿದೆ. 27 ಬಾರಿ ಮೌಂಟ್​ ಎವರೆಸ್ಟ್ ಏರಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ ಪಾತ್ರರಾಗಲಿದ್ದಾರೆ ಎಂದು ಪ್ರವಾಸೋದ್ಯಮ ವಿಭಾಗದ ಸರ್ಕಾರಿ ಅಧಿಕಾರಿ ಬಿಗ್ಯಾನ್ ಕೊಯಿರಾಲಾ ತಿಳಿಸಿದ್ದಾರೆ.

2023ನೇ ವರ್ಷದ ಮೌಂಟ್ ಎವರೆಸ್ಟ್ ಪರ್ವತಾರೊಹಣ ಸೆಷನ್​​​ ಮಾರ್ಚ್​​ನಿಂದ ಪ್ರಾರಂಭವಾಗಿದೆ. ಈ ತಿಂಗಳಲ್ಲೇ ಮೊದಲ ಸೆಷನ್​ ಅಂತ್ಯಗೊಳ್ಳಲಿದೆ. ಪಾಕಿಸ್ತಾನಿ ಮಹಿಳೆ ನೈಲಾ ಕಿಯಾನಿ ಎಂಬುವರು ಕೂಡ ಭಾನುವಾರ ಶಿಖರದ ತುತ್ತ ತುದಿ ತಲುಪಿದ್ದಾರೆ. ಈ ಸೆಷನ್ಸ್​ನಲ್ಲಿ ಎವರೆಸ್ಟ್ ಏರಿದ ಮೊದಲ ವಿದೇಶಿ ಮಹಿಳೆ ಇವರಾಗಿದ್ದಾರೆ.

ಇದನ್ನೂ ಓದಿ: Puneeth Rajkumar: ಮೌಂಟ್ ಎವರೆಸ್ಟ್​​ ಮೇಲೆ ಪುನೀತ್ ಜನ್ಮದಿನ ಆಚರಣೆ! ಜೇಮ್ಸ್ ಜಾತ್ರೆಯಲ್ಲಿ ಮಿಂದೆದ್ದ ಅಪ್ಪು ಅಭಿಮಾನಿಗಳು

Exit mobile version