Site icon Vistara News

Buddha Boy: ʼಬುದ್ಧನ ಅವತಾರʼ ಎನಿಸಿಕೊಂಡ ಧಾರ್ಮಿಕ ನಾಯಕ ಅತ್ಯಾಚಾರ ಆರೋಪದಲ್ಲಿ ಸೆರೆ

buddha boy

ಕಠ್ಮಂಡು: ʼಬುದ್ಧನ ಪುನರ್ಜನ್ಮ’ (reincarnation of Buddha, Buddha Boy) ಎಂದು ಲಕ್ಷಾಂತರ ಭಕ್ತರು ನಂಬಿರುವ ಯುವ ಧಾರ್ಮಿಕ ನಾಯಕನೊಬ್ಬನನ್ನು (Spiritual leader) ನೇಪಾಳ ಪೊಲೀಸರು ಇಂದು ಬಂಧಿಸಿದ್ದಾರೆ. ಆಶ್ರಮದಲ್ಲಿ ನಡೆದ ಸರಣಿ ಅತ್ಯಾಚಾರ (Physical abuse) ಹಾಗೂ ನಾಪತ್ತೆ ಪ್ರಕರಣಗಳಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದಾನೆ.

ಭಕ್ತರು ಈತನನ್ನು ʼಬುದ್ಧ ಬಾಯ್ʼ ಎಂದು ಕರೆಯುತ್ತಾರೆ. ಮೂಲ ಹೆಸರು ರಾಮ್ ಬಹದ್ದೂರ್ ಬೊಮ್ಜಾನ್ (Ram Bahadur Bomjon). 33 ವರ್ಷ ವಯಸ್ಸಿನ ಈ ಗುರು ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದಾನೆ. ಹದಿಹರೆಯದಲ್ಲಿ ಈತ ನೀರು, ಆಹಾರ ಅಥವಾ ನಿದ್ರೆ ಇಲ್ಲದೆ ತಿಂಗಳುಗಟ್ಟಲೆ ಚಲನರಹಿತನಾಗಿ ಕುಳಿತು ಧ್ಯಾನ ಮಾಡುತ್ತಾನೆ ಎಂದು ಈತನ ಅನುಯಾಯಿಗಳು ಸುದ್ದಿ ಹಬ್ಬಿಸಿದ್ದರು. ಬಳಿಕ ಈತ ಪ್ರಸಿದ್ಧಿಗೆ ಬಂದಿದ್ದಾನೆ.

ಆಶ್ರಮದಲ್ಲಿ ಈತ ತನ್ನ ಅನುಯಾಯಿಗಳ ಮೇಲೆ ದೀರ್ಘಕಾಲದಿಂದ ದೈಹಿಕವಾಗಿ ಮತ್ತು ಲೈಂಗಿಕವಾಗಿ ದೌರ್ಜನ್ಯ ಎಸಗಿದ್ದಾನೆ. ಹಲವಾರು ವರ್ಷಗಳಿಂದ ಇದು ನಡೆಯುತ್ತಿದ್ದು, ಬಯಲಾಗದಂತೆ ಮುಚ್ಚಿಡಲಾಗಿದೆ ಎಂದು ಆರೋಪಿಸಲಾಗಿದೆ. ಹಲವು ವರ್ಷಗಳಿಂದ ತಲೆ ತಪ್ಪಿಸಿಕೊಂಡಿದ್ದ ಈತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವಕ್ತಾರ ಕುಬೇರ್ ಕಡಯತ್ ತಿಳಿಸಿದ್ದಾರೆ.

ದಕ್ಷಿಣ ಕಠ್ಮಂಡು ಜಿಲ್ಲೆಯ ಸರ್ಲಾಹಿಯ ಆಶ್ರಮದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಹೊರಡಿಸಲಾದ ವಾರಂಟ್‌ನ ಮೇಲೆ ಪೊಲೀಸರು ಬೋಮ್‌ಜನ್‌ನನ್ನು ಕಠ್ಮಂಡುವಿನಲ್ಲಿ ಬಂಧಿಸಿದ್ದಾರೆ. ಈತ ಪರಾರಿಯಾಗುತ್ತಿದ್ದಾಗ 30 ದಶಲಕ್ಷ ನೇಪಾಳಿ ರೂಪಾಯಿಗಳು ($225,000) ಮತ್ತು ವಿದೇಶಿ ಕರೆನ್ಸಿಯಲ್ಲಿ ಮತ್ತೊಂದು $22,500 ಮೊತ್ತದ ನಗದು ಕಟ್ಟುಗಳೊಂದಿಗೆ ಸಿಕ್ಕಿಬಿದ್ದಿದ್ದಾನೆ.

ಬೊಮ್ಜಾನ್ ವಿರುದ್ಧ ಲೈಂಗಿಕ ದುರುಪಯೋಗ ಮತ್ತು ದುಷ್ಕೃತ್ಯದ ಆರೋಪಗಳು ಒಂದು ದಶಕಕ್ಕೂ ಹೆಚ್ಚು ಹಿಂದಿನಿಂದ ಇವೆ. 2010ರಲ್ಲಿ ಬೊಮ್ಜಾನ್ ವಿರುದ್ಧ ಹತ್ತಾರು ಹಲ್ಲೆ ದೂರುಗಳು ದಾಖಲಾಗಿವೆ. ತಮ್ಮ ಧ್ಯಾನಕ್ಕೆ ಭಂಗ ತಂದವರ ಮೇಲೆ ಆತ ಹಲ್ಲೆ ಮಾಡಿದ್ದಾನೆ. 2018ರಲ್ಲಿ ಈ ಮಠದಲ್ಲಿ ಗುರು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು 18 ವರ್ಷದ ಸನ್ಯಾಸಿನಿಯೊಬ್ಬಳು ಆರೋಪಿಸಿದ್ದಳು.

ಈತನ ಆಶ್ರಮವೊಂದರಿಂದ ನಾಲ್ವರು ಭಕ್ತರು ನಾಪತ್ತೆಯಾಗಿದ್ದಾರೆ ಎಂದು ಕುಟುಂಬ ಸದಸ್ಯರು ದೂರು ನೀಡಿದ ಬಳಿಕ ಪೊಲೀಸರು ಈತನ ವಿರುದ್ಧ ಕ್ರಮಕ್ಕೆ ಪ್ರಾರಂಭಿಸಿದರು. ನಾಲ್ವರು ಎಲ್ಲಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ. ನಾಪತ್ತೆಯಾದವರು ಎಂತಹ ಪರಿಸ್ಥಿತಿಯಲ್ಲಿದ್ದಾರೆ ಎಂದು ತಿಳಿಯದ ಹೊರತು ಅದನ್ನು ಕೊಲೆ ಎಂದು ಕರೆಯುವಂತಿಲ್ಲ.

ತನ್ನ ವಿರುದ್ಧದ ಆರೋಪಗಳು ಹೆಚ್ಚಾಗುತ್ತಿದ್ದಂತೆಯೇ ಬೊಮ್ಜನ್ ಅನುಯಾಯಿಗಳನ್ನು ದೊಡ್ಡ ಸಂಖ್ಯೆಯಲ್ಲಿ ಸೇರಲು ಆಜ್ಞಾಪಿಸಿದ್ದ. ಒಂದು ಹಂತದಲ್ಲಿ ಕಾಡಿನ ಒಳಗೆ ಆತನ ಪವಾಡಗಳನ್ನು ವೀಕ್ಷಿಸಲು ಸಾವಿರಾರು ಜನರು ಸೇರಿದ್ದರು. 16 ವರ್ಷ ವಯಸ್ಸಿನವನಾಗಿದ್ದಾಗಲೇ ಪೂರ್ವ ನೇಪಾಳದ ಅರಣ್ಯದಲ್ಲಿ ಬೊಮ್ಜಾನ್ ಒಂಬತ್ತು ತಿಂಗಳ ಕಾಲ ಕಣ್ಮರೆಯಾಗಿದ್ದ. ಆತನ ಸುರಕ್ಷಿತ ಮರಳುವಿಕೆಗಾಗಿ ಬೌದ್ಧ ಸನ್ಯಾಸಿಗಳು ಪ್ರಾರ್ಥಿಸಿದ್ದರು.

ಇದನ್ನೂ ಓದಿ: Video Game: ಕಠಿಣ ವೀಡಿಯೊ ಗೇಮ್ ಟೆಟ್ರಿಸ್ ಅನ್ನು ಸೋಲಿಸಿದ ಮೊದಲ ಮನುಷ್ಯ, 13ರ ಹುಡುಗ!

Exit mobile version