Site icon Vistara News

Earthquake In USA : ಅಮೆರಿಕದ ನ್ಯೂಜೆರ್ಸಿ, ನ್ಯೂಯಾರ್ಕ್​ನಲ್ಲಿ ಭೂಕಂಪ

Earthquake in US

ನ್ಯೂಯಾರ್ಕ್​: ಅಮೆರಿಕದ ಪ್ರಮುಖ ನಗರಗಳಾದ ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯಲ್ಲಿ (New Jersey) ಶುಕ್ರವಾರ 5.5 ತೀವ್ರತೆಯ ಭೂಕಂಪ (Earthquake In USA) ಸಂಭವಿಸಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪಶಾಸ್ತ್ರ ಕೇಂದ್ರ (ಇಎಂಎಸ್​ಸಿ ) ಶುಕ್ರವಾರ ತಿಳಿಸಿದೆ. ನ್ಯೂಯಾರ್ಕ್ (New Yorkd) ಭೂಕಂಪವು 10 ಕಿಲೋಮೀಟರ್ (6.21 ಮೈಲಿ) ಆಳದಲ್ಲಿತ್ತು ಎಂದು ರಾಯಿಟರ್ಸ್ ವರದಿ ಮಾಡಿದೆ. ಯುಎಸ್​​ಜಿಎಸ್​ ಪ್ರಕಾರ, ಭೂಕಂಪದ ಕೇಂದ್ರಬಿಂದು ನ್ಯೂಜೆರ್ಸಿಯ ಲೆಬನಾನ್​​ನ ಈಶಾನ್ಯದಲ್ಲಿದೆ. ಇದು ನ್ಯೂಯಾರ್ಕ್ ನಗರದ ಪಶ್ಚಿಮದಿಂದ ಸುಮಾರು 50 ಮೈಲಿ ದೂರದಲ್ಲಿದೆ ಎಂದು ಹೇಳಿದೆ.

ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಅವರು ರಾಜ್ಯದಾದ್ಯಂತ ಭೂಕಂಪನದ ಅನುಭವವಾಗಿದೆ ಎಂಬುದನ್ನು ದೃಢ ಪಡಿಸಿದ್ದಾರೆ. “ನನ್ನ ತಂಡವು ಪರಿಣಾಮಗಳು ಮತ್ತು ಸಂಭವಿಸಬಹುದಾದ ಯಾವುದೇ ಹಾನಿಯನ್ನು ಎದುರಿಸಲು ಸಜ್ಜಾಗಿದೆ. ನಾವು ದಿನವಿಡೀ ಸಾರ್ವಜನಿಕರಿಗೆ ಮಾಹಿತಿ ನೀಡುತ್ತೇವೆ ಎಂದು ಅವರು ಎಕ್ಸ್ ನಲ್ಲಿ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ನ್ಯೂಯಾರ್ಕ್ ನಗರದ ಉಪ ಮೇಯರ್ ಫ್ಯಾಬಿಯನ್ ಲೆವಿ ಅವರು ನಗರದ ಮೇಲೆ ಭೂಕಂಪದಿಂದಾಗಿ ಗಂಭೀರ ಪರಿಣಾಮಗಳು ಆಗಿಲ್ಲ ಎಂದು ಹೇಳಿದ್ದಾರೆ.

ಯುಎನ್ಎಸ್​ಸಿ ಸಭೆ ಮೊಟಕು

ನ್ಯೂಯಾರ್ಕ್​ನಲ್ಲಿ ಭೂಕಂಪ ಸಂಭವಿಸಿದ ಹಿನ್ನೆಲೆಯಲ್ಲಿ, ಗಾಜಾದಲ್ಲಿನ ಪರಿಸ್ಥಿತಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯಲ್ಲಿ ಭದ್ರತಾ ಮಂಡಳಿಯ ಆಯೋಜಿಸಿದ್ದ ಸಭೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಸೇವ್ ದಿ ಚಿಲ್ಡ್ರನ್ ವಕ್ತಾರೆ ಜಂತಿ ಸೊರಿಪ್ಟೊ ಭಾಷಣ ಮಾಡುವ ವೇಳೆ ಭೂಕಂಪ ಉಂಟಾಗಿತ್ತು.

ಲಾಂಗ್ ಐಲ್ಯಾಂಡ್, ಫಿಲಡೆಲ್ಫಿಯಾ ಮತ್ತು ನ್ಯೂಯಾರ್ಕ್​ನಲ್ಲಿ ಭೂಕಂಪನದ ಅನುಭವವಾಗಿದೆ ಎಂದು ಜನರು ಸಾಮಾಜಿಕ ಮಾಧ್ಯಮಗಳಲ್ಲಿ ವರದಿ ಮಾಡಿದ್ದಾರೆ.

ಬೀದಿಗೆ ಇಳಿದ ನಿವಾಸಿಗಳು

ವಾಷಿಂಗ್ಟನ್ ಡಿಸಿಯಿಂದ ನ್ಯೂಯಾರ್ಕ್ ನಗರದವರೆಗೆ ಭೂಕಂಪನದ ಅನುಭವವಾಗಿದೆ ಎಂಬ ವರದಿಗಳ ಮಧ್ಯೆ, ನ್ಯೂಯಾರ್ಕ್ ಪೊಲೀಸ್ ಇಲಾಖೆ ಯಾವುದೇ ಗಾಯಗಳು ಅಥವಾ ಹಾನಿಯ ವರದಿಗಳಿಲ್ಲ ಎಂದು ದೃಢಪಡಿಸಿದೆ.

ಇದನ್ನೂ ಓದಿ: Lok Sabha Election : ಭಾರತದ ಚುನಾವಣೆ ವೇಳೆ ಕುತಂತ್ರಿ ಚೀನಾ ಸೈಬರ್ ಅಟ್ಯಾಕ್​; ಮೈಕ್ರೊಸಾಫ್ಟ್​ ಆರೋಪ

ಕಟ್ಟಡಗಳು ನಡುಗುತ್ತಿರುವ ವರದಿಗಳನ್ನು ಸ್ವೀಕರಿಸಿದ ನಂತರ, ನ್ಯೂಯಾರ್ಕ್ ನಗರದ ಅಗ್ನಿಶಾಮಕ ಇಲಾಖೆ ಹೇಳಿಕೆ ನೀಡಿದೆ. ನಾವು ಕರೆಗಳಿಗೆ ಸ್ಪಂದಿಸುತ್ತಿದ್ದೇವೆ ಮತ್ತು ಮೌಲ್ಯಮಾಪನ ಮಾಡುತ್ತಿದ್ದೇವೆ.. ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಅವರು ಹೇಳಿದ್ದಾರೆ. ಭೂಕಂಪ ಸಂಭವಿಸಿದ ಕೆಲವೇ ನಿಮಿಷಗಳಲ್ಲಿ, ನ್ಯೂಯಾರ್ಕ್ ನಗರದ ಕೆಲವು ಭಾಗಗಳಲ್ಲಿನ ನಿವಾಸಿಗಳು ಮನೆಯಿಂದಹೊರಕ್ಕೆ ಬಂದು ಪಾದಚಾರಿ ಮಾರ್ಗಗಳಲ್ಲಿ ಜಮಾಯಿಸಿದ್ದಾರೆ.

ವಿಮಾನಗಳ ಸೇವೆ ಸ್ಥಗಿತ

ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್ಎಎ) ಪ್ರಕಾರ, ಭೂಕಂಪದ ನಂತರ ನ್ಯೂಯಾರ್ಕ್​. ಕೆನಡಿ, ಫಿಲಡೆಲ್ಫಿಯಾ ಮತ್ತು ಬಾಲ್ಟಿಮೋರ್ ವಿಮಾನ ನಿಲ್ದಾಣಗಳಿಗೆ ವಿಮಾನ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ನೆವಾರ್ಕ್ ಲಿಬರ್ಟಿ ವಿಮಾನ ನಿಲ್ದಾಣದಲ್ಲಿನ ಏರ್ ಟ್ರಾಫಿಕ್ ಕಂಟ್ರೋಲ್ ಟವರ್ ಅನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ನಿಯಂತ್ರಕರೊಬ್ಬರು ರೇಡಿಯೋ ಮೂಲಕ ತಿಳಿಸಿದ್ದಾರೆ. ಅಂದರೆ ನಿಯಂತ್ರಕರು ಬೇರೆ ಸ್ಥಳಕ್ಕೆ ಸ್ಥಳಾಂತರಗೊಳ್ಳುವವರೆಗೆ ವಿಮಾನಗಳನ್ನು ನಿಲ್ಲಿಸಲಾಗುತ್ತದೆ.

Exit mobile version