Site icon Vistara News

Nijjar Killing: ಖಲಿಸ್ತಾನಿ ಉಗ್ರ ನಿಜ್ಜರ್‌ ಹತ್ಯೆಯ ಆರೋಪಿಗಳನ್ನು ಬಂಧಿಸಿದ ಕೆನಡಾ ಪೊಲೀಸರು; ಯಾರಿವರು?

Nijjar Killing

Nijjar killing: Canadian police arrest members of ‘hit squad’ responsible for murder, says media report

ಒಟ್ಟಾವ: ಖಲಿಸ್ತಾನಿ ಉಗ್ರರ ಪರವಾಗಿರುವ ಕೆನಡಾ ಸರ್ಕಾರವೀಗ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ (Hardeep Singh Nijjar) ಹತ್ಯೆಯ (Nijjar Killing) ಆರೋಪಿಗಳನ್ನು ಬಂಧಿಸಿದೆ ಎಂದು ಮಾಧ್ಯಮಗಳ ವರದಿಗಳು ತಿಳಿಸಿವೆ. ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯ ತಂಡದಲ್ಲಿದ್ದ ಕೆಲವು ಆರೋಪಿಗಳನ್ನು ಕೆನಡಾ ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಆದರೆ, ಯಾರನ್ನು ಬಂಧಿಸಲಾಗಿದೆ ಎಂಬುದರ ಕುರಿತು ಇದುವರೆಗೆ ಮಾಹಿತಿ ಲಭ್ಯವಾಗಿಲ್ಲ.

ಕೆನಡಾ ಸರ‍್ರೆಯಲ್ಲಿ ಹರ್ದೀಪ್‌ ಸಿಂಗ್‌ ನಿಜ್ಜರ್‌ನನ್ನು ಹತ್ಯೆ ಮಾಡಿದವರು ಭಾರತದ ಏಜೆಂಟ್‌ಗಳು ನೇಮಿಸಿದವರೇ ಆಗಿದ್ದಾರೆ ಎಂಬುದಾಗ ಕೆನಡಾ ಆರೋಪಿಸಿದೆ. ಆದರೆ, ಹತ್ಯೆ ಮಾಡಿದ ತಂಡದ ಸದಸ್ಯರನ್ನೇ ಕೆನಡಾ ಪೊಲೀಸರು ಬಂಧಿಸಿದ್ದಾರೆ ಎಂಬುದಾಗಿ ತಿಳಿದುಬಂದಿರುವುದು ಪ್ರಕರಣಕ್ಕೆ ಹೊಸ ತಿರುವು ಸಿಕ್ಕಂತಾಗಿದೆ. ಹರ್ದೀಪ್‌ ಸಿಂಗ್‌ ನಿಜ್ಜರ್‌ನನ್ನು ಕೊಂದವರು ಯಾರು? ಅವರು ಭಾರತದ ಮೂಲದವರಾ? ಅವರು ನೀಡಿದ ಮಾಹಿತಿ ಏನು ಎಂಬ ಮಾಹಿತಿಯು ಕೆನಡಾ ಪೊಲೀಸರಿಂದಲೇ ಹೊರಬರಬೇಕಿದೆ. ಹತ್ಯೆ ಮಾಡಿದ ತಂಡದವರು ಎನ್ನಲಾದ ಮೂವರನ್ನು ಕೆನಡಾ ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಲಾಗುತ್ತಿದೆ.

2023ರ ಜೂನ್‌ 18ರಂದು ಕೆನಡಾದಲ್ಲಿ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಗೀಡಾಗಿದ್ದಾನೆ. ಇದರ ಹಿಂದೆ ಭಾರತದ ಏಜೆಂಟರ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಆರೋಪ ಕೂಡ ಮಾಡಿದ್ದಾರೆ. ಹೀಗೆ, ಕೆನಡಾವನ್ನು ಭಾರತದ ವಿರುದ್ಧ ಎತ್ತಿಕಟ್ಟಲು ಪಾಕಿಸ್ತಾನದ ಐಎಸ್‌ಐ ಇಂತಹ ಕುತಂತ್ರ ಮಾಡಿದೆ. ಆದರೆ, ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯ ಆರೋಪವನ್ನು ತಿರಸ್ಕರಿಸುವ ಭಾರತ, ಆರೋಪಗಳಿಗೆ ಸಾಕ್ಷ್ಯ ಕೊಡಿ ಎಂದು ತಿರುಗೇಟು ನೀಡಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಈಗ ಭಾರತ ಹಾಗೂ ಕೆನಡಾ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಶುರುವಾಗಿದೆ.

“ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಕುರಿತು ನಾನು ಭಾರತದ ಜತೆ ಮಾತನಾಡಿದ್ದೇನೆ. ಆದರೆ, ಆತನ ಹತ್ಯೆಯ ಕುರಿತು ಭಾರತಕ್ಕೆ ತುಂಬ ವಾರಗಳ ಹಿಂದೆಯೇ ನಂಬಲರ್ಹ ಆರೋಪಗಳ ಕುರಿತು ಮಾಹಿತಿಯನ್ನು ಒದಗಿಸಲಾಗಿದೆ. ತುಂಬ ಗಂಭೀರವಾದ ವಿಚಾರದ ಕುರಿತು ಭಾರತ ಹಾಗೂ ಕೆನಡಾ ಒಗ್ಗೂಡಿ ಕಾರ್ಯನಿರ್ವಹಿಸುವ ಕುರಿತು ಕೂಡ ಮನವರಿಕೆ ಮಾಡಲಾಗಿದೆ. ಗಂಭೀರ ಹತ್ಯೆಯ ವಿಚಾರದಲ್ಲಿ ಭಾರತವು ನಮ್ಮ ಜತೆ ಕೈಗೂಡಿಸುತ್ತದೆ ಎಂಬ ಆಶಾಭಾವನೆಯಲ್ಲಿ ಇದ್ದೇವೆ” ಎಂದು ಜಸ್ಟಿನ್‌ ಟ್ರುಡೋ ಹೇಳಿದ್ದರು. ಆದರೆ, ಭಾರತ ಮಾತ್ರ ಸರಿಯಾದ ಸಾಕ್ಷ್ಯ ಕೊಡಿ ಎಂದು ಹೇಳಿದೆ.

ಇದನ್ನೂ ಓದಿ: Khalistan terrorist: ʼನಿಜ್ಜರ್‌ ಹತ್ಯೆಯಲ್ಲಿ ಭಾರತದ ಕೈವಾಡವಿಲ್ಲʼ ಎಂದ ನ್ಯೂಜಿಲ್ಯಾಂಡ್‌ ಉಪಪ್ರಧಾನಿಗೇ ಬೆದರಿಕೆ ಹಾಕಿದ ಪನ್ನುನ್!‌

Exit mobile version