ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ಭಾರತ ಮೂಲದ ನಿಕ್ಕಿ ಹ್ಯಾಲೆ (Nikki Haley) ಅವರು ಹಿಂದೆ ಸರಿದಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ (US Presidential Election 2024) ಸ್ಪರ್ಧಿಸಲು ನಡೆದ ಪ್ರಾಥಮಿಕ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ (Donald Trump) ಅವರು ಭರ್ಜರಿ ವಿಜಯ ಸಾಧಿಸಿದ ಹಿನ್ನೆಲೆಯಲ್ಲಿ ನಿಕ್ಕಿ ಹ್ಯಾಲೆ ರೇಸ್‌ನಿಂದ ಹಿಂದೆ ಸರಿದಿದ್ದಾರೆ. ಇದರೊಂದಿಗೆ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರ ಹಾದಿ ಸುಗಮವಾಗಿದ್ದು, ನವೆಂಬರ್‌ನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡೆನ್ (Joe Biden) ಅವರನ್ನು ಎದುರಿಸಲಿದ್ದಾರೆ.
ವಾಷಿಂಗ್ಟನ್ ಡಿಸಿಯ ಪ್ರಾಥಮಿಕ ಚುನಾವಣೆಯಲ್ಲಿ ನಿಕ್ಕಿ ಹ್ಯಾಲೆ ಅವರು ಡೊನಾಲ್ಡ್ ಟ್ರಂಪ್ ವಿರುದ್ಧ ಗೆಲುವು ಸಾಧಿಸಿದ್ದರು. ಇದರಿಂದಾಗಿ ಅವರ ಆತ್ಮವಿಶ್ವಾಸ ಹೆಚ್ಚಾಗಿತ್ತು. ಆದರೆ, ಸೂಪರ್ ಮಂಗಳವಾರದ (Super Tuesday) ಸ್ಪರ್ಧೆಯಲ್ಲಿ ನಿಕ್ಕಿ ಹ್ಯಾಲೆ ತೀವ್ರ ಹಿನ್ನಡೆ ಅನುಭವಿಸಿದರು. ಪ್ರಾಥಮಿಕ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರು 15 ರಾಜ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಭಾರಿ ಮುನ್ನಡೆ ಸಾಧಿಸಿದರು. ನಿಕ್ಕಿ ಹ್ಯಾಲೆ ಅವರು ತಮ್ಮ ರಾಜ್ಯವೇ ಆದ ಸೌತ್ ಕೆರೋಲಿನಾದಲ್ಲಿಯೇ ಸೋಲನುಭವಿಸಿದ್ದು ತೀವ್ರ ಹಿನ್ನಡೆಯಾಯಿತು.
Thank you, America 🇺🇸
— Team Nikki Haley (@NikkiHaleyHQ) March 6, 2024
While Nikki Haley’s run for President of the United States has come to an end, we will always continue to fight for a proud and strong America.pic.twitter.com/WSv3Pt6l8v
ಸೋಲಿನ ಬಳಿಕ ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದಿದ್ದೇನೆ ಎಂದು ನಿಕ್ಕಿ ಹ್ಯಾಲೆ ಘೋಷಿಸಿದ್ದಾರೆ. “ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿಯುವ ಸಮಯ ಬಂದಿದೆ. ಇದುವರೆಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು. ಜುಲೈನಲ್ಲಿ ಪಕ್ಷದ ಸಭೆ ನಡೆಯಲಿದ್ದು, ಡೊನಾಲ್ಡ್ ಟ್ರಂಪ್ ಅವರೇ ಅಂತಿಮ ಅಭ್ಯರ್ಥಿಯಾಗಲಿದ್ದಾರೆ. ಡೊನಾಲ್ಡ್ ಟ್ರಂಪ್ ಅವರಿಗೆ ಅಭಿನಂದನೆಗಳು. ಅವರಿಗೆ ಶುಭವಾಗಲಿ ಎಂದು ಹಾರೈಸುತ್ತೇನೆ. ಅಮೆರಿಕದ, ಇಲ್ಲಿನ ಜನರ ಹಕ್ಕುಗಳಿಗಾಗಿ ನಮ್ಮ ಹೋರಾಟ ಮುಂದುವರಿಯುತ್ತದೆ” ಎಂದು ನಿಕ್ಕಿ ಹ್ಯಾಲೆ ತಿಳಿಸಿದ್ದಾರೆ.
ಇದನ್ನೂ ಓದಿ: Amitabh Bachchan: ಟ್ರಂಪ್ ಮಗಳನ್ನು ಅಮಿತಾಭ್‌ಗೆ ಪರಿಚಯಿಸಿದ ಅಂಬಾನಿ!
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ನಿಕ್ಕಿ ಹ್ಯಾಲೆ ಅವರು ಡೊನಾಲ್ಡ್ ಟ್ರಂಪ್ ಅವರಿಗೆ ಪ್ರಬಲ ಸ್ಪರ್ಧಿಯಾಗಿದ್ದರು. ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿದ್ದಾಗ ನಿಕ್ಕಿ ಹ್ಯಾಲೆ ಅವರು ವಿಶ್ವಸಂಸ್ಥೆಯಲ್ಲಿ ಅಮೆರಿಕ ರಾಯಭಾರಿಯಾಗಿದ್ದರು. ಇವರು ಸೌತ್ ಕೆರೋಲಿನಾದ ಗವರ್ನರ್ ಕೂಡ ಆಗಿದ್ದರು. 2024ರ ನವೆಂಬರ್ 5ರಂದು ನಡೆಯುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತ ಮೂಲದ ವಿವೇಕ್ ರಾಮಸ್ವಾಮಿ ಅವರ ಹೆಸರು ಕೂಡ ಕೇಳಿಬಂದಿತ್ತು. ಆದರೀಗ, ಮತ್ತೆ ಡೊನಾಲ್ಡ್ ಟ್ರಂಪ್ ಹಾಗೂ ಜೋ ಬೈಡೆನ್ ಮಧ್ಯೆ ಅಧ್ಯಕ್ಷ ಗಾದಿಗೆ ಸೆಣಸಾಟ ನಡೆಯುವುದು ಖಚಿತವಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ