Site icon Vistara News

Nikki Haley: ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಚುನಾವಣೆ; ಭಾರತೀಯ ಮೂಲದ ನಿಕ್ಕಿ ಹ್ಯಾಲೆ ವಿರುದ್ಧ ಗೆದ್ದ ಟ್ರಂಪ್‌

Nikki trump

Nikki trump

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆ (United States presidential election)ಗೆ ಜಿದ್ದಾಜಿದ್ದಿನ ಹೋರಾಟ ಕಂಡು ಬರುತ್ತಿದೆ. ಈ ಚುನಾವಣೆ ನವೆಂಬರ್‌ 5ರಂದು ನಡೆಯಲಿದ್ದು, ಚಟುವಟಿಕೆ ಬಿರುಸು ಪಡೆದುಕೊಂಡಿದೆ. ಇದೀಗ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ದಕ್ಷಿಣ ಕೆರೊಲಿನಾ (South Carolina)ದಲ್ಲಿ ನಡೆದ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಆಯ್ಕೆಯ ಸ್ಪರ್ಧೆಯಲ್ಲಿ ಭಾರತೀಯ ಮೂಲದ ನಿಕ್ಕಿ ಹ್ಯಾಲೆ (Nikki Haley) ಅವರನ್ನು ಸೋಲಿಸಿದ್ದಾರೆ. ಈ ಮೂಲಕ ಅಧ್ಯಕ್ಷ ಜೋ ಬೈಡನ್‌ (Joe Biden) ವಿರುದ್ಧ ಸ್ಪರ್ಧಿಸಲು ಇನ್ನೊಂದು ಹೆಜ್ಜೆ ಮುಂದಿಟ್ಟಿದ್ದಾರೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದ ನಾಮ ನಿರ್ದೇಶನಕ್ಕಾಗಿ ನಿಕ್ಕಿ ಹ್ಯಾಲೆ ಕಣದಲ್ಲಿದ್ದರು. ಆದರೆ ಇದೀಗ ಮಾಜಿ ಅಧ್ಯಕ್ಷ, 77 ವರ್ಷದ ಟ್ರಂಪ್‌ ಭಾರತೀಯ ಮೂಲದ ನಿಕ್ಕಿ ಹ್ಯಾಲೆ ಅವರನ್ನು ಸೋಲಿಸಿದ್ದಾರೆ. ಕೆಲವು ದಿನಗಳ ಹಿಂದೆ ನೆವಡಾ ರಾಜ್ಯದಲ್ಲಿ ನಡೆದ ಸ್ಪರ್ಧೆಯಲ್ಲಿಯೂ ಟ್ರಂಪ್‌ ವಿಜಯ ಸಾಧಿಸಿದ್ದರು.

ಆರೋಪಿಸಿದ್ದ ನಿಕ್ಕಿ ಹ್ಯಾಲೆ

ನೆವಡಾದಲ್ಲಿ ನಡೆದ ಚುನಾವಣೆಯಲ್ಲಿ ನಿಕ್ಕಿ ಹ್ಯಾಲೆ ಸ್ಪರ್ಧಿಸಿರಲಿಲ್ಲ. ʼʼಚುನಾವಣೆ ನ್ಯಾಯಯುತವಾಗಿ ನಡೆದಿಲ್ಲ. ಟ್ರಂಪ್‌ ಗೆಲುವಿಗೆ ಅನುಕೂಲವಾಗುವಂತೆ ಚುವಾವಣೆಯನ್ನು ಆಯೋಜಿಸಲಾಗಿತ್ತುʼʼ ಎಂದು ಅವರು ಆರೋಪಿಸಿದ್ದರು. ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ನಾಮ ನಿರ್ದೇಶನಗೊಳ್ಳಲು ಟ್ರಂಪ್‌ 1,215 ಪ್ರತಿನಿಧಿಗಳ ಬೆಂಬಲ ಪಡೆಯಬೇಕು. ಮುಂದಿನ ತಿಂಗಳ ವೇಳೆಗೆ ಅವರು ಈ ಸಂಖ್ಯೆಯ ಬೆಂಬಲ ಪಡೆಯಬಹುದು ಎನ್ನುವ ನಿರೀಕ್ಷೆ ಇದೆ.

ಗವರ್ನರ್‌ ಮತ್ತು ವಿಶ್ವಸಂಸ್ಥೆಯ ರಾಯಭಾರಿಯಾಗಿದ್ದ ನಿಕ್ಕಿ ಹ್ಯಾಲೆ ದಕ್ಷಿಣ ಕೆರೊಲಿನಾದ ಜಿದ್ದಾಜಿದ್ದಿನ ಹೋರಾಟದಲ್ಲಿ ಟ್ರಂಪ್‌ ವಿರುದ್ಧ ಸೋಲೊಪ್ಪಿಕೊಂಡರು. ಇದು ಅವರ ರಾಜಕೀಯ ಆಕಾಂಕ್ಷೆಗಳಿಗೆ ಬಿದ್ದ ದೊಡ್ಡ ಹೊಡೆತ ಎಂದು ಹೇಳಲಾಗುತ್ತಿದೆ. ಆದರೆ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎನ್ನುವ ಮೂಲಕ ಮತ್ತೆ ಹೋರಾಟದ ಸೂಚನೆ ನೀಡಿದ್ದಾರೆ.

ಕಣದಿಂದ ಹಿಂದೆ ಸರಿದಿದ್ದ ವಿವೇಕ್ ರಾಮಸ್ವಾಮಿ

ವಿಶೇಷ ಎಂದರೆ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಗೆ ಮುಂದಾಗಿದ್ದ ಭಾರತೀಯ ಮೂಲದ ಬಯೋಟೆಕ್ ಉದ್ಯಮಿ ವಿವೇಕ್ ರಾಮಸ್ವಾಮಿ ಇತ್ತೀಚೆಗೆ ರೇಸ್‌ನಿಂದ ಹೊರಗೆ ಬಂದು ಟ್ರಂಪ್ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದರು. ಭಾರತ ಮೂಲದ ಅಮೆರಿಕನ್​ ಪ್ರಜೆ, ಆರೋಗ್ಯ ಮತ್ತು ಬಯೋಟೆಕ್​ ವಲಯದಲ್ಲಿ ಖ್ಯಾತ ಉದ್ಯಮಿ, ಲೇಖಕ ವಿವೇಕ್​ ರಾಮಸ್ವಾಮಿ ಈ ಹಿಂದೆ ತಾವು ಅಭ್ಯರ್ಥಿ ಎಂದು ಪ್ರಕಟಿಸಿದ್ದರು. ಆದರೆ ಅಯೋವಾದ ಲೀಡ್‌ ಆಫ್ ಕಾಕಸ್‌ಗಳಲ್ಲಿ ಅವರು ನಿರೀಕ್ಷಿತ ಬೆಂಬಲ ಪಡೆಯದ ಕಾರಣ ಶ್ವೇತಭವನದ ಸ್ಪರ್ಧೆಯಿಂದ ಹೊರಗುಳಿದಿದ್ದರು.

ಇದನ್ನೂ ಓದಿ: Vivek Ramaswamy: ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದ ವಿವೇಕ್​ ರಾಮಸ್ವಾಮಿ

ಅಮೆರಿಕದ ಅತ್ಯಂತ ಹಳೇ ಪಕ್ಷವಾಗಿರುವ ರಿಪಬ್ಲಿಕನ್​ ಪಾರ್ಟಿ ಸದಸ್ಯರಾಗಿರುವ ವಿವೇಕ್​ ರಾಮಸ್ವಾಮಿ ಈ ಹಿಂದೆ ಮಾಧ್ಯಮದೊಂದಿಗೆ ಮಾತನಾಡುತ್ತ, “ಅಮೆರಿಕ ದೇಶದ ಆದರ್ಶಗಳನ್ನು ಪುನರುಜ್ಜೀವನಗೊಳಿಸುವ ಸಲುವಾಗಿ, ನಾನು ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲ್ಲಲು ಬಯಸುತ್ತೇನೆ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇನೆ’ ಎಂದು ಹೇಳಿದ್ದರು. ಹಾಗೇ ಬಳಿಕ ಟ್ವೀಟ್ ಮಾಡಿದ್ದ ಅವರು “ನಾವು ವೈವಿದ್ಯತೆಯನ್ನು ಪ್ರೀತಿಸಿ ಒಪ್ಪಿಕೊಳ್ಳುವ ಭರದಲ್ಲಿ 250 ವರ್ಷಗಳ ಹಿಂದಿನ, ಒಗ್ಗಟ್ಟಿನ ಸಿದ್ಧಾಂತಗಳನ್ನೇ ಮರೆತಿದ್ದೇವೆ. ಅದನ್ನು ಮತ್ತೆ ಪುನರುಜ್ಜೀವನಗೊಳಿಸಲು ನಾನು ಅಧ್ಯಕ್ಷನಾಗಲು ಬಯಸುತ್ತೇನೆ” ಎಂದಿದ್ದರು. ವಿವೇಕ್​ ರಾಮಸ್ವಾಮಿ ಅವರ ತಂದೆ-ತಾಯಿ ಮೂಲತಃ ಕೇರಳದವರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version