ಈ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ. ಯಾವುದೋ ಮುಖವಂತೂ ಕಾಣುತ್ತದೆ. ಆದರೆ ಅದು ಯಾವುದರ ಮುಖ? ನೀವು ಊಹಿಸಿ. ಆದರೆ ಒಂದೇನೆಂದರೆ ಇದು ಯಾವುದೇ ದೊಡ್ಡ ಪ್ರಾಣಿಯ ಮುಖವಂತೂ ಅಲ್ಲವೇ ಅಲ್ಲ..!
ಅಂದಹಾಗೇ ಈ ಫೋಟೋ ಸಾಮಾನ್ಯದ್ದಲ್ಲ. ಲಿಥುವೇನಿಯಾದ ವನ್ಯಜೀವಿ ಫೋಟೋಗ್ರಾಫರ್ ಕ್ಲಿಕ್ಕಿಸಿರುವ ಫೋಟೋ 2022ರ ನಿಕಾನ್ ಸ್ಮಾಲ್ ವರ್ಲ್ಡ್ ಫೋಟೋಮೈಕ್ರೋಗ್ರಫಿ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದೆ. ಅತ್ಯಂತ ಸೂಕ್ಷ್ಮ ವಸ್ತುಗಳು, ಪ್ರಾಣಿಗಳ ಫೋಟೋಗ್ರಫಿಯನ್ನು ಉತ್ತೇಜಿಸಲು ಪ್ರತಿವರ್ಷ ನಿಕಾನ್ ಸ್ಮಾಲ್ ವರ್ಲ್ಡ್ ಫೋಟೋಮೈಕ್ರೋಗ್ರಫಿ ಆಯೋಜಿಸಲಾಗುತ್ತದೆ. ಈ ವರ್ಷ ಬಹುಮಾನ ಪಡೆದ ಫೋಟೋಗಳಲ್ಲಿ ಇದೂ ಒಂದಾಗಿದೆ. ಅಂದಹಾಗೇ, ಫೋಟೋ ತೆಗೆದಿದ್ದು ಲಿಥುವೇನಿಯಾದ ಫೋಟೋಗ್ರಾಫರ್ ಯುಜೆನಿಜಸ್ ಕವಲಿಯಾಸ್ಕಾಸ್ ಎಂಬುವರು..
ಇನ್ನೂ ನಿಮಗೆ ಇದು ಯಾವುದರ ಮುಖ ಎಂದು ಗೊತ್ತಾಗದೆ ಇದ್ದರೆ ನಾವೇ ಹೇಳ್ತೇವೆ..ಇದು ‘ಇರುವೆ’ಯ ಮುಖ. ಸಾಮಾನ್ಯವಾಗಿ ನಾವು ಇಂಥ ಇರುವೆ, ಸೊಳ್ಳೆ, ನೊಣದಂಥ ಕೀಟಗಳನ್ನು ಅಷ್ಟೆಲ್ಲ ಸೂಕ್ಷ್ಮವಾಗಿ ಗಮನಿಸುವುದಿಲ್ಲ. ಸಾಮಾನ್ಯರು ಅದನ್ನು ನೋಡುವುದಕ್ಕೂ, ಒಬ್ಬ ಛಾಯಾಗ್ರಾಹಕ ಅದನ್ನು ಗಮನಿಸಿ, ಫೋಟೋ ಸೆರೆ ಹಿಡಿಯುವುದಕ್ಕೂ ಸಾಕಷ್ಟು ವ್ಯತ್ಯಾಸ ಇರುತ್ತದೆ ಎಂಬುದಕ್ಕೆ ಈ ಫೋಟೋವೇ ಸಾಕ್ಷಿ. ಇರುವೆ ನಮಗೆ ಹೊಸದಲ್ಲ, ಆದರೆ ಈ ಫೋಟೋ ನೋಡಿದ ಮೇಲೆ, ಇರುವ ಮುಖ ಹೊಸದು ಎನ್ನಿಸದೆ ಇರದು..!
‘ಎರಡೂ ಕಣ್ಣುಗಳು ಕೆಂಪಾಗಿವೆ. ಕೋರೆಹಲ್ಲುಗಳೆಲ್ಲ ಬಂಗಾರದ್ದೇನೋ ಎನ್ನಿಸುತ್ತಿವೆ. ಅದ್ಯಾವುದೋ ಹಾರರ್ ಸಿನಿಮಾದ ಭೂತದ ಮುಖವೇನೋ ಎಂಬ ಭಾವ ಹುಟ್ಟಿಸುವಂತಿದೆ’ -ಇರುವೆಯ ಈ ಫೋಟೋ ನೋಡಿ ನೆಟ್ಟಿಗರೂ ವಿವಿಧ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅಂದಹಾಗೇ ನಿಕಾನ್ ಕಳೆದ 48 ವರ್ಷಗಳಿದಲೂ ಫೋಟೊಗ್ರಫಿ ಸ್ಪರ್ಧೆ ಆಯೋಜಿಸುತ್ತ ಬಂದಿದೆ. ಈ ವರ್ಷ ಸುಮಾರು 1300 ಫೋಟೋಗಳು ಬಂದಿದ್ದವು. ಅದರಲ್ಲಿ 57 ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು. ಆ 57ರಲ್ಲಿ ಈ ಇರುವೆ ಫೋಟೋಕ್ಕೂ ಬಹುಮಾನ ಬಂದಿದೆ.
ಇದನ್ನೂ ಓದಿ: Viral Photo | ಹೂವು ಮಾರುವವ ಹೀಟ್ನಿಂದ ಪಾರಾಗಲು ಮಾಡಿದ ಅದ್ಭುತ ಉಪಾಯ ಇದು!