ಪಾಕಿಸ್ತಾನ ದಿವಾಳಿಯಾಗಿದೆ. ಅಲ್ಲಿ ತಿನ್ನುವ ಆಹಾರಕ್ಕೂ ಹಾಹಾಕಾರ ಎದ್ದಿದೆ. ಪಾಕಿಸ್ತಾನದ ಜನರು ಕಣ್ಣೀರು ಹಾಕುತ್ತಿದ್ದಾರೆ, ಸರ್ಕಾರ ನಡೆಸುವವರು ಕೈ ಚೆಲ್ಲಿ ಕುಳಿತಿದ್ದಾರೆ. ಅಲ್ಲಿನ ಆರ್ಥಿಕ ಸಂಕಷ್ಟ (Pakistan Economic Crisis) ಅದ್ಯಾವ ಮಟ್ಟಕ್ಕೆ ತಲುಪಿದೆ ಎಂದರೆ, ‘ನಮ್ಮಲ್ಲಿ ಚುನಾವಣೆಗಳನ್ನು ನಡೆಸಲೂ ಕಾಸಿಲ್ಲ’ ಎಂದು ಈಗ ಪಾಕಿಸ್ತಾನದ ರಕ್ಷಣಾ ಸಚಿವ ಖಾಜ್ವಾ ಆಸಿಫ್ ತಿಳಿಸಿದ್ದಾರೆ. ಮಾಹಿತಿ ಸಚಿವ ಮರಿಯುಮ್ ಔರಂಗಜೇಬ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಹೀಗೆ ಹೇಳಿದ್ದಾರೆ.
ಇದೇ ವೇಳೆ ಅವರು ಮಾಜಿ ಪ್ರಧಾನಿ, ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್ ಫಕ್ಷದ ನಾಯಕ ಇಮ್ರಾನ್ ಖಾನ್ ಅವರ ವಿರುದ್ಧ ತೀವ್ರ ಕಿಡಿಕಾರಿದರು. ‘ನನ್ನನ್ನು ಹತ್ಯೆ ಮಾಡುವ ಯತ್ನವಾಗಿದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಆದರೆ ಅಂಥದ್ದೇನೂ ಆಗಿಲ್ಲ. ಸೇನೆಯ ಮಾಜಿ ಜನರಲ್ ಕ್ವಮರ್ ಜಾವೇದ್ ಬಾಜ್ವಾನ ಅಧಿಕಾರವನ್ನು ವಿಸ್ತರಿಸಿದ್ದು ಇಮ್ರಾನ್ ಖಾನ್. ಆದರೆ ಅದೇ ಬಾಜ್ವಾನನ್ನು ಈಗ ಇಮ್ರಾನ್ ಖಾನ್ ದೂಷಿಸುತ್ತಿದ್ದಾರೆ. ಅವರನ್ನು ಯಾರೂ ಬಲವಂತವಾಗಿ ಉಚ್ಚಾಟನೆ ಮಾಡಿಲ್ಲ. ಪ್ರಾಂತೀಯ ವಿಧಾನಸಭೆಗಳನ್ನೆಲ್ಲ ಅವರು ಅಸಾಂವಿಧಾನಿಕವಾಗಿ ವಿಸರ್ಜಿಸಿದರು. ವಿಶ್ವಾಸಮತ ಯಾಚನೆಯಲ್ಲಿ ಗೆಲ್ಲಲಿಲ್ಲ. ಹೀಗಾಗಿಯೇ ಸ್ಥಾನ ಕಳೆದುಕೊಂಡರು. ತಪ್ಪನ್ನೆಲ್ಲ ತನ್ನ ಬಳಿಯೇ ಇಟ್ಟುಕೊಂಡು, ತನ್ನ ಪದಚ್ಯುತಿಗೆ ಅವರು ಬೇರೆಯವರನ್ನು ದೂಷಿಸುತ್ತಿದ್ದಾರೆ. ಈಗ ಕೋರ್ಟ್ ಎದುರೂ ಅವರು ಬರುತ್ತಿಲ್ಲ ಎಂದು ಹೇಳಿದರು. ಇವತ್ತಿನ ಪರಿಸ್ಥಿತಿಗೆ ಇಮ್ರಾನ್ ಖಾನ್ ಕಾರಣ ಎಂದೂ ಆರೋಪಿಸಿದರು.
ಇದನ್ನೂ ಓದಿ: ವಿಷ ಹಾಕಿ ಪಾಕಿಸ್ತಾನ ಕ್ರಿಕೆಟಿಗನ ಕೊಲೆ ಯತ್ನ! ಚಿಕಿತ್ಸೆಗೂ ಹಣವಿಲ್ಲದ ಸ್ಥಿತಿ ವಿವರಿಸಿದ ಆಟಗಾರ
ಈ ಹಿಂದೆಯೂ ಖವಾಜಾ ಆಸಿಫ್ ಪಾಕಿಸ್ತಾನ ದಿವಾಳಿ ಆಗಿದೆ ಎಂದು ಹೇಳಿದ್ದರು. ನಾವೀಗ ದಿವಾಳಿಯಾಗಿರುವ ದೇಶದಲ್ಲಿ ಇದ್ದೇವೆ. ಇಲ್ಲಿನ ಆರ್ಥಿಕ ಸಂಕಷ್ಟದ ಹೊಣೆಯನ್ನು ಪ್ರತಿಯೊಬ್ಬ ರಾಜಕಾರಣಿಯೂ ಹೊರಬೇಕು. ನಾವೇ ನಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದ್ದರು. ಇಷ್ಟರ ಮಧ್ಯೆ ಈಗ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಚುನಾವಣೆಯನ್ನು ಅಲ್ಲಿನ ಚುನಾವಣಾ ಆಯೋಗ ಮುಂದೂಡಿದೆ. ಏಪ್ರಿಲ್ 30ಕ್ಕೆ ನಿಗದಿಯಾಗಿದ್ದ ಎಲೆಕ್ಷನ್ನ್ನು ಅಕ್ಟೋಬರ್ 8ಕ್ಕೆ ಮುಂದೂಡಿದ್ದಾಗಿ ಪಾಕ್ ಮಾಧ್ಯಮಗಳು ವರದಿ ಮಾಡಿವೆ.