ಕೊಲೊಂಬೊ, ಶ್ರೀಲಂಕಾ: ಆರ್ಥಿಕವಾಗಿ ದಿವಾಳಿ ಎದ್ದಿರುವ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ (Sri Lanka) ಮುಂದಿನ ತಿಂಗಳು ಸ್ಥಳೀಯ ಚುನಾವಣೆ ನಿಗದಿಯಾಗಿತ್ತು. ಆದರೆ, ಇದ್ದಕ್ಕಿದ್ದಂತೆ ಈ ಚುನಾವಣೆಯನ್ನು ಮುಂದೂಡಲಾಗಿದೆ. ಇದಕ್ಕೆ ಕಾರಣ ಏನೆಂದು ಕೇಳಿದರೆ ನೀವೂ ಆಶ್ಚರ್ಯ ಪಡುತ್ತೀರಿ- ಚುನಾವಣೆಗೆ ಬೇಕಾಗುವ ಬ್ಯಾಲೆಟ್ ಪೇಪರ್ ಪ್ರಿಂಟ್ ಮಾಡಲು ಶ್ರೀಲಂಕಾ ಸರ್ಕಾರದ ಬಳಿ ಹಣವಿಲ್ಲ. ಹಾಗಾಗಿ, ಅನಿವಾರ್ಯವಾಗಿ ಚುನಾವಣೆಯನ್ನು ಮುಂದೂಡುವ ನಿರ್ಧಾರ ಕೈಗೊಳ್ಳಲಾಗಿದೆ.
ಮುಂದಿನ ತಿಂಗಳು ನಡೆಯಲಿರುವ ಸ್ಥಳೀಯ ಚುನಾವಣೆಗಳನ್ನು ಮುಂದೂಡಲು ಶ್ರೀಲಂಕಾ ಸಿದ್ಧತೆ ಮಾಡುತ್ತಿದೆ ಎಂದು ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಎಎಫ್‌ಪಿ ವರದಿ ಮಾಡಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಂಗಳವಾರ ನಡೆದ ಸಂಸತ್ ಕಲಾಪದಲ್ಲಿ ಪ್ರತಿಪಕ್ಷಗಳು ತೀವ್ರ ಗದ್ದಲ ಮಾಡಿದವು ಮತ್ತು ಅನಿವಾರ್ಯವಾಗಿ ಕಲಾಪವನ್ನು ಮುಂದೂಡಲಾಯಿತು.
ಕಳೆದ ವರ್ಷದ ಜುಲೈ ತಿಂಗಳಲ್ಲಿ ಶ್ರೀಲಂಕಾದ ಜನರು ಸರ್ಕಾರದ ವಿರುದ್ಧ ಭಾರೀ ಪ್ರತಿಭಟನೆ ನಡೆಸಿದ್ದರು. ಶ್ರೀಲಂಕಾ ಅಧ್ಯಕ್ಷರ ಮನೆಯನ್ನು ಮುತ್ತಿಗೆ ಹಾಕಿ ಪ್ರತಿಭಟಿಸಿದ್ದು, ಭಾರೀ ಸುದ್ದಿಯಾಗಿತ್ತು. ಬಳಿಕ ರಾನಿಲ್ ವಿಕ್ರಮಸಿಂಘೆ (President Ranil Wickremesinghe) ಅವರು ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಹಾಗಾಗಿ, ಮಾರ್ಚ್ 9ರಂದು ನಡೆಯುವ ಮತದಾನವು ಅವರಿಗೆ ಬೆಂಬಲದ ದೃಷ್ಟಿಯಿಂದ ಬಹಳ ಮುಖ್ಯವಾಗಿತ್ತು.
ಇದನ್ನೂ ಓದಿ Explainer: ಮೂರೇ ವರ್ಷದಲ್ಲಿ ಲಂಕೆಯನ್ನು ರಾಜಪಕ್ಸ ಕುಟುಂಬ ಮುಳುಗಿಸಿದ್ದು ಹೇಗೆ?
ಆದರೆ, ಈಗ ಚುನಾವಣೆ ನಡೆಯುವುದೇ ಅನುಮಾನವಾಗಿದೆ. ಚುನಾವಣಾ ಆಯೋಗವು ಎಲೆಕ್ಷನ್ ವೆಚ್ಚಕ್ಕಾಗಿ ಹಣ ಬಿಡುಗಡೆ ಮಾಡುವಂತೆ ವಿತ್ತ ಸಚಿವಾಲಯಕ್ಕೆ ಸಲ್ಲಿಸಿದ ಮನವಿಯನ್ನು ತಿರಸ್ಕರಿಸಲಾಗಿದೆ. ಬ್ಯಾಲೆಟ್ ಪೇಪರ್ ಪ್ರಿಂಟ್ ಮಾಡಲು, ಪೊಲೀಸ್ ಭದ್ರತೆ, ಇಂಧನಕ್ಕೆ ಅನುದಾನ ನೀಡಲು ಹಣವಿಲ್ಲ ಎಂದು ಲಂಕಾದ ಖಜಾನೆ ಇಲಾಖೆಯು ತಿಳಿಸಿದೆ.