ಸ್ಟಾಕ್‌ಹೋಮ್, ಸ್ವೀಡನ್: ಜೈಲಿನಲ್ಲಿರುವ ಇರಾನ್ ಕಾರ್ಯಕರ್ತೆ ನರ್ಗಿಸ್ ಮೊಹಮ್ಮದಿ (Narges Mohammadi) ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು (Nobel Peace Prize) ಪ್ರದಾನ ಮಾಡಲಾಗಿದೆ. ಆದರೆ ಅವರು ಜೈಲಿನಲ್ಲಿರುವ ಕಾರಣ ಸಮಾರಂಭಕ್ಕೆ ಬರಲು ಸಾಧ್ಯವಾಗದಿರುವುದರಿಂದ, ಅವರಿಗಾಗಿ ಒದು ಖಾಲಿ ಕುರ್ಚಿಯನ್ನು ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆಯಲ್ಲಿ ಮೀಸಲಿಡಲಾಗಿತ್ತು.
ಇರಾನ್‌ನಲ್ಲಿ ಮಹಿಳೆಯರ ಮೇಲಿನ ದಬ್ಬಾಳಿಕೆಯ ವಿರುದ್ಧ ಮತ್ತು ಮಾನವ ಹಕ್ಕುಗಳನ್ನು ಉತ್ತೇಜಿಸುವ ಹೋರಾಟಕ್ಕಾಗಿ 2023ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದ ಜೈಲಿನಲ್ಲಿರುವ ಇರಾನ್ ಕಾರ್ಯಕರ್ತೆ ನರ್ಗೆಸ್ ಮೊಹಮ್ಮದಿ ಅವರ ಮಕ್ಕಳು ಡಿಸೆಂಬರ್ 10ರ ಭಾನುವಾರದಂದು ನಾರ್ವೆಯ ಓಸ್ಲೋ ಸಿಟಿ ಹಾಲ್‌ನಲ್ಲಿ ಅವರ ತಾಯಿಯ ಪರವಾಗಿ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದರು.
ತಮ್ಮ ತಂದೆಯೊಂದಿಗೆ ಪ್ಯಾರಿಸ್‌ನಲ್ಲಿ ದೇಶಭ್ರಷ್ಟರಾಗಿ ವಾಸಿಸುತ್ತಿರುವ ಮೊಹಮ್ಮದಿಯ 17 ವರ್ಷದ ಅವಳಿ ಮಕ್ಕಳಾದ ಕಿಯಾನಾ ಮತ್ತು ಅಲಿ ರಹಮಾನಿ ಪ್ರಶಸ್ತಿಯನ್ನು ಸ್ವೀಕರಿಸಿದರು. ಮೊಹಮ್ಮದಿ ಅವರ ದೊಡ್ಡ ಭಾವಚಿತ್ರವನ್ನು ಪ್ರದರ್ಶಿಸಲಾಯಿತು.
“ಅವಳು ಇಲ್ಲಿ ಇರಬೇಕಿತ್ತು, ಆದರೆ ಮರಣದಂಡನೆ ಕೊಡುವವರ ಮೂಲಕ ಅವಳನ್ನು ತಡೆಯಲಾಯಿತು” ಎಂದು ಕಿಯಾನಾ ರಹಮಾನಿ ಫ್ರೆಂಚ್ ಭಾಷೆಯಲ್ಲಿ ನೀಡಿದ ಭಾಷಣದ ಆರಂಭದಲ್ಲಿ ಹೇಳಿದರು. “ಕಡ್ಡಾಯ ಹಿಜಾಬ್ ಅನ್ನು ರದ್ದುಗೊಳಿಸುವುದು ಧಾರ್ಮಿಕ ದಬ್ಬಾಳಿಕೆಯ ಎಲ್ಲಾ ಬೇರುಗಳನ್ನು ನಿರ್ಮೂಲನೆ ಮಾಡುವುದಕ್ಕೆ ಮತ್ತು ನಿರಂಕುಶ ದಬ್ಬಾಳಿಕೆಯ ಸರಪಳಿಗಳನ್ನು ಮುರಿಯುವುದಕ್ಕೆ ಸಮಾನವಾಗಿದೆ” ಎಂದು ಮೊಹಮ್ಮದಿಯ ಮಕ್ಕಳು ಅವಳ ಪರವಾಗಿ ಹೇಳಿದರು.
ಕಟ್ಟರ್ ಇಸ್ಲಾಮಿಕ್ ರಾಷ್ಟ್ರದಲ್ಲಿ ಮಹಿಳಾ ದೌರ್ಜನ್ಯ ವಿರುದ್ಧ ಧ್ವನಿ ಎತ್ತಿ ಜೈಲು ಪಾಲಾಗಿರುವ ನರ್ಗೀಸ್ ಮೊಹಮ್ಮದಿ, ವಿಶ್ವದಾದ್ಯಂತ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ. ಇರಾನ್‌ನಲ್ಲಿ (Iran) ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧದ ಹೋರಾಟ ಮತ್ತು ಎಲ್ಲರಿಗೂ ಮಾನವ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಉತ್ತೇಜಿಸುವ ಹೋರಾಟಕ್ಕಾಗಿ ಇರಾನ್ ಕಾರ್ಯಕರ್ತೆ ನರ್ಗೀಸ್ ಮೊಹಮ್ಮದಿ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ. ಜೈಲಿನಲ್ಲಿದ್ದರೂ, ಹಲವು ನಿರ್ಬಂಧಗಳ ಹೊರತಾಗಿಯೂ ನರ್ಗೀಸ್ ಮೊಹಮ್ಮದಿ ಅವರು ಲೇಖನಗಳನ್ನು ಪ್ರಕಟಿಸುವ ಮೂಲಕ ತಮ್ಮ ಹೋರಾಟವನ್ನು ಜಾರಿಯಲ್ಲಿಟ್ಟಿದ್ದಾರೆ.
ನರ್ಗೀಸ್ ಮೊಹಮ್ಮದಿ ಅವರ ಕೆಚ್ಚೆದೆಯ ಹೋರಾಟವು ಅಪಾರ ವೈಯಕ್ತಿಕ ತ್ಯಾಗದಿಂದಲೇ ಆರಂಭವಾಗಿದೆ. ಒಟ್ಟಾರೆಯಾಗಿ, ಸರ್ಕಾರವು ಅವರನ್ನು 13 ಬಾರಿ ಬಂಧಿಸಿದೆ, ಐದು ಬಾರಿ ಅಪರಾಧಿ ಎಂದು ತೀರ್ಪು ನೀಡಿದೆ. ಅವರಿಗೆ ಒಟ್ಟು 31 ವರ್ಷಗಳ ಜೈಲು ಮತ್ತು 154 ಛಡಿ ಏಟಿನ ಶಿಕ್ಷೆ ವಿಧಿಸಿದೆ. ಈಗಲೂ ಅವರು ಜೈಲಿನಲ್ಲೇ ಇದ್ದಾರೆ ಎಂದು ಅಕಾಡೆಮಿ ಹೇಳಿದೆ.
ಇದನ್ನೂ ಓದಿ: Nobel Peace Prize: ಯಾರು ಈ ನೊಬೆಲ್ ಶಾಂತಿ ಪ್ರಶಸ್ತಿ ಗೆದ್ದ ನರ್ಗೀಸ್ ಮೊಹಮ್ಮದಿ? ಅವರೇಕೆ ಜೈಲಿನಲ್ಲಿದ್ದಾರೆ?