ಇದೊಂದು ಅಪರೂಪದ ಘಟನೆ. ಬಹಳ ಸಲ ರೈಲು ಕಾಡಿನ ಮಧ್ಯೆ ಸಾಗುವಾಗ ಇದ್ದಕ್ಕಿದ್ದಂತೆ ದಾರಿಗೆ ಅಡ್ಡ ಬಂದ ಆನೆಯನ್ನೇ ಲೆಕ್ಕಿಸದೆ ಮುಂದೆ ಸಾಗುವುದನ್ನು ನೋಡಿದ್ದೇವೆ. ದೈತ್ಯ ಆನೆಗಳೂ ಸೇರಿದಂತೆ ಹಲವು ಪ್ರಾಣಿಗಳು ರೈಲ್ವೇ ಹಳಿಗಳಲ್ಲಿ ದಾರುಣವಾಗಿ ಸಾವಿಗೀಡಾಗುವ ಘಟನೆಗಳೂ ಆಗಾಗ ನಡೆಯುತ್ತಿರುತ್ತವೆ. ಕಾರು ಬಸ್‌ಗಳಡಿ ದುರ್ಮರಣಕ್ಕೀಡಾಗುವ ನಾಯಿ, ಹಸುಗಳನ್ನೂ ನೋಡಿ ಮುಂದೆ ಸಾಗುತ್ತೇವೆ. ಆದರೆ, ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಆನೆಯ ವಿಷಯ ಬಿಡಿ, ಆಮೆಯೊಂದು ರೈಲ್ವೆ ಹಳಿ ಮೇಲೆ ಬಂದಿದ್ದರಿಂದ ರೈಲು ಗಂಟೆಗಳ ಕಾಲ ನಿಂತು ಬಿಟ್ಟಿದೆ!
ಪ್ರತಿಯೊಂದು ಜೀವಕ್ಕೂ ಬೆಲೆಯಿದೆ. ಅದು ಆನೆಯಾದರೇನು, ಇರುವೆಯಾದರೇನು? ಇದಕ್ಕೆ ಪುಷ್ಟಿ ನೀಡುವ ಮಾನವೀಯ ಘಟನೆಯಿದು. ಲಂಡನ್‌ನ ಸ್ಟಾನ್‌ಸ್ಟೆಡ್ ವಿಮಾನ ನಿಲ್ದಾಣಕ್ಕೆ ನಾರ್ಫೋಕ್‌ನಿಂದ ಹೋಗುವ ರೈಲು ಇದ್ದಕ್ಕಿದ್ದಂತೆ ನಿಂತು ಬಿಟ್ಟಿದೆ. ಕಾರಣ ಏನೆಂದು ನೋಡಿದರೆ, ರೈಲ್ವೆ ಹಳಿಯ ಮಧ್ಯದಲ್ಲೊಂದು ಆಮೆ ಮಲಗಿತ್ತು!
ಪ್ರಾಣಿಯೊಂದು ರೈಲು ಹಳಿಯ ಮಧ್ಯದಲ್ಲಿರುವುದರಿಂದ ರೈಲು ಸಂಚಾರ ಗಂಟೆಗಳ ಕಾಲ ವ್ಯತ್ಯಯವಾಗಲಿದೆ ಎಂದು ಈ ಹಾದಿಯ ಎಲ್ಲಾ ಸ್ಟೇಷನ್ನುಗಳಿಗೂ ಸಂದೇಶ ರವಾನೆಯಾಗಿತ್ತು. ಎಲ್ಲರಿಗೂ ರೈಲು ಹಳಿಯ ಮಧ್ಯದಲ್ಲಿ ಅದೆಂಥ ಪ್ರಾಣಿಯಿರಬಹುದು ಎಂಬ ಕುತೂಹಲ ಇತ್ತು. ಬಳಿಕ ಇದು ಆಮೆಯೆಂದು ತಿಳಿದು ಜನ ಹೌಹಾರಿದ್ದಾರೆ!
ರೈಲ್ವೆ ಹಳಿಯ ಮಧ್ಯೆ ಗಾಯಗೊಂಡು ಬಿದ್ದಿದ್ದ ಆಮೆ ಒಂದು ಹೆಜ್ಜೆಯೂ ಮುಂದಿಡಲಾಗದೆ ಬಹಳ ಹೊತ್ತು ಅದೇ ಜಾಗದಲ್ಲಿತ್ತು. ಆದರೆ, ಇದನ್ನು ಜರುಗಿಸಲಾಗದಷ್ಟು ಭಾರವೂ ಇದ್ದಿದ್ದರಿಂದ ಹೊರ ತೆಗೆದುಕೊಂಡು ಹೋಗಲು ಸಾಕಷ್ಟು ಸಮಯ ಬೇಕಾಯಿತು. ಹಾಗಾಗಿ ರೈಲು ಸಂಚಾರವನ್ನೇ ಸುಮಾರು ಒಂದೂವರೆ ಗಂಟೆಗಳ ಕಾಲ ಸ್ಥಗಿತಗೊಳಿಸಲಾಯಿತು.
ಸುಮಾರು ಒಂದೂವರೆ ಗಂಟೆಗಳ ಭಾರೀ ಪ್ರಯತ್ನದಿಂದ ಈ ಆಮೆಯನ್ನು ಹಳಿಯಿಂದ ತೆಗೆಯಲಾಯಿತು. ಅದನ್ನು ಹತ್ತಿರದ ವನ್ಯಜೀವಿ ಕೇಂದ್ರಕ್ಕೆ ರವಾನಿಸಲಾಯಿತು.
ಆಮೆ ಸದ್ಯಕ್ಕೆ ವನ್ಯಜೀವಿ ಧಾಮದಲ್ಲಿ ಸುತಕ್ಷಿತವಾಗಿದ್ದು, ಗುಣಮುಖವಾಗುತ್ತಿದೆ ಎಂದು ರೈಲ್ವೆ ನಿಗಮವೂ ಟ್ವೀಟ್ ಮಾಡಿದೆ. ಇದಕ್ಕೆ ಹಲವು ಕಮೆಂಟುಗಳು ಬಂದಿದ್ದು, ಕೇವಲ ಆಮೆಯೊಂದಕ್ಕೆ ತುಂಬ ಬ್ಯುಸಿ ಇರುವ ರೈಲು ಮಾರ್ಗವೊಂದನ್ನು ಒಂದೂವರೆ ಗಂಟೆಗಳ ಕಾಲ ಸ್ಥಗಿತಗೊಳಿಸಿ, ಆಮೆಯ ಜೀವಕ್ಕೆ ಕೊಟ್ಟ ರೈಲ್ವೆ ನಿಗಮಕ್ಕೆ ಹಲವರು ಇದೊಂದು ಮಾನವೀನ ನಡೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ| ಬೆಕ್ಕುಗಳ ವರ್ತನೆ ಅರಿಯಲು ಅದರ ಮಾಲೀಕರಿಗೆ ಟೆಸ್ಟ್!