Site icon Vistara News

Oldest doctor: 101 ವರ್ಷದ ಜಗತ್ತಿನ ಅತ್ಯಂತ ಹಿರಿಯ ವೈದ್ಯ! ಇವರಿಗೆ ಈಗಲೂ ಕಾಯಕವೇ ಕೈಲಾಸ!

oldest doctor Dr. Howard Tucker

oldest doctor Dr. Howard Tucker

ಈಗಲೂ ವೈದ್ಯವೃತ್ತಿ ನಡೆಸುತ್ತಿರುವವರ ಪೈಕಿ ಈ ವೈದ್ಯರು ಜಗತ್ತಿನ ಅತ್ಯಂತ (Oldest doctor) ಹಿರಿಯರಂತೆ. ಇವರ ಹೆಸರು ಡಾ.ಹೋವರ್ಡ್‌ ಟಕ್ಕರ್.‌ 1947ರಿಂದ ವೈದ್ಯ ವೃತ್ತಿ ಆರಂಭಿಸಿದ ಇವರು ಈಗಲೂ ವೃತ್ತಿಯಲ್ಲೇ ಮುಂದುವರಿದಿದ್ದಾರೆ ಅಂದರೆ ನೀವು ನಂಬಲೇಬೇಕು! ಅಂದ ಹಾಗೆ ಇವರ ಈಗಿನ ವಯಸ್ಸು 101 ವರ್ಷ! ಅವರ ಸುದ್ದಿ ಇದೀಗ ವೈರಲ್‌ (viral story) ಆಗುತ್ತಿದೆ.

ವಯಸ್ಸು ಕೇಳಿ ಹೌಹಾರಿರಬೇಕಲ್ವೇ ನೀವು. ಹೌದು, ಇದು ಕನಸೇ ಎಂದು ನೀವು ಚಿವುಟಿಕೊಂಡು ನೋಡುವ ಅಗತ್ಯವೇ ಇಲ್ಲ. ಇದು ಸತ್ಯ. 101 ವರ್ಷ ಬದುಕಿರುವುದೇ ಸೋಜಿಗ, ಬದುಕಿದರೂ, ಕೆಲಸ ಮಾಡಿಕೊಂಡಿರುವುದು ಅಥವಾ ಎಲ್ಲವನ್ನೂ ನೆನಪಿಟ್ಟುಕೊಳ್ಳುವುದು, ಚುರುಕಾಗಿ (Active in old age) ಓಡಾಡಿಕೊಂಡಿರುವುದು ಕೊಂಚ ಕಷ್ಟವೇ. ಅಂಥದ್ದರಲ್ಲಿ ಇವರು ವೈದ್ಯವೃತ್ತಿ ಮಾಡಿಕೊಂಡಿರುವುದೆಂದರೆ ಅದು ಅದ್ಭುತವಲ್ಲದೆ ಮತ್ತೇನು ಹೇಳಿ! ಸದ್ಯ 101ನೇ ವಯಸ್ಸಿನಲ್ಲಿಯೂ ವೈದ್ಯ ವೃತ್ತಿ ಮಾಡುತ್ತಿರುವ ಇವರ ಬಗೆಗೆ ಜಗತ್ತೇ ಬೆರಗಾಗಿದೆ. ಅಷ್ಟೇ ಅಲ್ಲ, ಇವರ ಬಳಿಗೆ ಬರುವ ಪ್ರತಿಯೊಬ್ಬರೂ, ತಮ್ಮ ಮಿದುಳು ಈ ವಯಸ್ಸಿನಲ್ಲಿಯೂ ಇಷ್ಟೊಂದು ಚುರುಕಾಗಿರುವ ರಹಸ್ಯವೇನು ಎಂಬ ಪ್ರಶ್ನೆಯನ್ನು ಕೇಳುತ್ತಾರಂತೆ. ಅದಕ್ಕೆ ಅವರು ಉತ್ತರಿಸುವ ಪ್ರಯತ್ನವನ್ನೂ ಮಾಡಿದ್ದಾರೆ!

ಅವರೇ ಹೇಳುವಂತೆ, ಕಳೆದ 7 ದಶಕಗಳಿಂದ ಅವರು ವೈದ್ಯವೃತ್ತಿ ನಡೆಸುತ್ತಿದ್ದಾರೆ. ಅವರು ನುರಿತ ನರಮಂಡಲ ತಜ್ಞರು. ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ಅನುಭವಿ ವೈದ್ಯರು ಎಂದೂ ಹೇಳಬಹುದು. ಅವರ ಪ್ರಕಾರ, ನಿಮ್ಮಲ್ಲಿರುವ ಅತ್ಯುತ್ತಮ ವಂಶವಾಹಿನಿಯ ಜೊತೆಗೆ ಒಂದಿಷ್ಟು ಅದೃಷ್ಟ ಇವುಗಳ ಜೊತೆಗೆ, ಮನಸ್ಸನ್ನು ಸದಾ ಚುರುಕಾಗಿಟ್ಟುಕೊಂಡಿರುವ ಮೂಲಕ ಇಷ್ಟು ದೂರದ ಹಾದಿಯನ್ನು ಅವರು ಕ್ರಮಿಸಲು ಸಾಧ್ಯವಾಯಿತಂತೆ. ಮಿದುಳಿಗೆ ಸದಾ ಕೆಲಸ ಕೊಡುತ್ತಿರಬೇಕು. ಅದು ಕ್ರಿಯಾಶೀಲ ಚಟುವಟಿಕೆಗಳಾಗಿರಬಹುದು, ಮನರಂಜನೆಯೂ ಆಗಿರಬಹುದು. ಕೆಲಸವೆಂದರೆ ಕೇವಲ ನಿಮ್ಮ ವೃತ್ತಿಯಷ್ಟೇ ಅಲ್ಲ. ಎಲ್ಲ ಬಗೆಯ ಕೆಲಸವನ್ನೂ ಮಿದುಳಿಗೆ ನೀಡುತ್ತಲೇ ಇರಬೇಕಾದ್ದು ಅಗತ್ಯ. ನಮ್ಮ ದೇಹದ ಮಾಂಸಖಂಡಗಳಿಗೆ ಹೇಗೆ ವ್ಯಾಯಾಮ ಬೇಕೋ, ಹಾಗೆಯೇ ಮಿದುಳಿಗೂ, ಮನಸ್ಸಿಗೂ ವ್ಯಾಯಾಮ ಬೇಕು ಎನ್ನುತ್ತಾರೆ ಅವರು.

ಗಿನ್ನಿಸ್‌ ದಾಖಲೆಯಲ್ಲಿ ನಾನು ಈಗಲೂ ವೃತ್ತಿಯಲ್ಲಿರುವ ಜಗತ್ತಿನ ಅತ್ಯಂತ ಹಿರಿಯ ವೈದ್ಯ ಎಂಬುದನ್ನು ದಾಖಲಿಸಲಾಗಿದೆ. ನನ್ನ ಹೆಂಡತಿ ಸಾರಾ ಕೂಡಾ ವೈದ್ಯೆಯಾಗಿದ್ದು, ಆಕೆಯೂ ತನ್ನ 89ನೇ ವಯಸ್ಸಿನಲ್ಲೂ ಈಗ ಮನೋವೈದ್ಯೆಯಾಗಿ ಕೆಲಸ ಮಾಡುತ್ತಿದ್ದಾರೆ. ನನ್ನ ಕೆಲಸದಲ್ಲಿ ನಾನು ಸಾಕಷ್ಟು ವೈದ್ಯಕೀಯ ವಿವರಗಳನ್ನೂ, ಔಷಧಿಗಳ ಕುರಿತಾದ ಜ್ಞಾನವನ್ನೂ ನೆನಪಿಟ್ಟುಕೊಳ್ಳಬೇಕು. ನನ್ನ ನಿರಂತರ ವೈದ್ಯವೃತ್ತಿಯಲ್ಲಿ ಈ ಎಲ್ಲ ವಿವರಗಳನ್ನು ಇಂದಿಗೂ ನೆನಪಿಟ್ಟುಕೊಂಡೇ ಬಂದಿದ್ದೇನೆ. ಎಲ್ಲಿಯೂ ನನಗೆ ಮರೆವಿನ ಸಮಸ್ಯೆ ಎದುರಾಗಿಲ್ಲ. ಮಿದುಳಿಗೆ ಇಂತಹ ವ್ಯಾಯಾಮ ನಿತ್ಯವೂ ದೊರಕುವುದರಿಂದ ಅದು ಚುರುಕಾಗಿ ಈಗಲೂ ಕೆಲಸ ಮಾಡುತ್ತಿದೆ ಎಂದವರು ವಿವರಿಸುತ್ತಾರೆ.

ನಮ್ಮ ಬಗೆಬಗೆಯ ಹವ್ಯಾಸಗಳನ್ನು ಮುಂದುವರಿಸುವುದು, ವಯಸ್ಸಾದರೂ ಚುರುಕಾಗಿ ಕೆಲಸಗಳನ್ನು ಮಾಡಿಕೊಂಡಿರುವುದು ಹೆಚ್ಚು ಚಲನಶಕ್ತಿಯನ್ನು ನೀಡುತ್ತದೆ. ಮಿದುಳಿಗೆ ಸ್ಥಿರತೆ ನೀಡುತ್ತದೆ. ನಾನು ನನ್ನ 60ನೇ ವಯಸ್ಸಿನಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆ ನನ್ನ ವೈದ್ಯವೃತ್ತಿ ಮಾಡಿ, ರಾತ್ರಿ ಕಾಲೇಜಿಗೆ ಹೋಗಿ ಕಾನೂನು ಕಲಿತೆ. ನನ್ನ 67ನೇ ವಯಸ್ಸಿನಲ್ಲಿ ನಾನು ಕಾನೂನು ಪದವಿ ಪಾಸ್‌ ಮಾಡಿದೆ. ಕಲಿಕೆಗೆ ವಯಸ್ಸಿನ ಹಂಗಿಲ್ಲ. ಏನಾದರೊಂದು ಆಸಕ್ತಿಯನ್ನು ಹುಡುಕಿಕೊಂಡು ಬದುಕಿನ ಖುಷಿಯನ್ನು ಸವಿಯಬೇಕು. ಅಷ್ಟೇ ಬಿಟ್ಟರೆ, ಚುರುಕಾಗಿರುವ ಮಿದುಳಿಗೆ ಬೇರೆ ಕಾರಣಗಳಿಲ್ಲ ಎಂದು ಅವರು ವಿವರಿಸುತ್ತಾರೆ.

ಸಾಮಾಜಿಕವಾಗಿಯೂ ತಾನು ಚುರುಕಾಗಿದ್ದೆ. ಈಗಲೂ ಇದ್ದೇನೆ. ನಮ್ಮ ಮಕ್ಕಳು, ಅವರ ಗಂಡಂದಿರು, ಮೊಮಮಕ್ಕಳು ಹೀಗೆ ಎಲ್ಲರ ಜೊತೆಗೆ ಬೆರೆತು ಎರಡು ವಾರಕ್ಕೊಮ್ಮೆಯಾದರೂ ಜೊತೆಯಾಗಿ ಕೂತು ಉಣ್ಣುತ್ತೇವೆ. ಮನಸೋ ಇಚ್ಛೆ ಹರಟುತ್ತೇವೆ. ಬೇಸರದ ಸಂಗತಿಯೆಂದರೆ, ನನ್ನ ವಯಸ್ಸಿನ ಗೆಳೆಯರೆಲ್ಲರೂ ಈಗ ಮರಣ ಹೊಂದಿದ್ದಾರೆ. ಆದರೆ, ನನ್ನ ವೃತ್ತಿ ನನಗೆ ಅನೇಕ ಯುವಜನರನ್ನು ಸ್ನೇಹಿತರನ್ನಾಗಿ, ಪರಿಚಿತರನ್ನಾಗಿ ನೀಡಿದೆ. ಹಾಗಾಗಿ ನಾನು ಅವರೆಲ್ಲರ ಜೊತೆ ಚುರುಕಾಗಿ ಮಾತನಾಡಿಕೊಂಡಿರುತ್ತೇನೆ. ಅಷ್ಟೇ ಅಲ್ಲ, ಈಗಲೂ ಪುಸ್ತಕಗಳನ್ನು ಓದುತ್ತೇನೆ. ನನ್ನ ವೃತ್ತಿ ಸಂಬಂಧ ನಾನು ಅಪ್‌ಡೇಟ್‌ ಇರುತ್ತೇನೆ. ಓದಿ ವಿಷಯ ತಿಳಿದುಕೊಂಡು ನನ್ನ ಮಿದುಳಿ ಈಗಿನ ಜ್ಞಾನ ಸಂಪತ್ತಿನಿಂದಲೂ ಚುರುಕಾಗಿರುವಂತೆ ನೋಡಿಕೊಳ್ಳುತ್ತೇನೆ. ಇವೆಲ್ಲವೂ ಮಿದುಳಿನ ಈಗಿನ ಆರೋಗ್ಯಕ್ಕೆ ಕಾರಣ ಎನ್ನುತ್ತಾರೆ ಅವರು.

ಇದನ್ನೂ ಓದಿ: Viral Story: ಸತ್ತಿದ್ದಾನೆ ಎಂದು ವೈದ್ಯರು ಘೋಷಿಸಿದ ಬಿಜೆಪಿ ಮುಖಂಡ ಅಂತ್ಯಕ್ರಿಯೆಗೆ ಮೊದಲು ಕಣ್ಣು ತೆರೆದ!

Exit mobile version