Site icon Vistara News

Al-Jawahiri Dead | ಲಾಡೆನ್‌ ಉತ್ತರಾಧಿಕಾರಿ, 9/11 ಸಂಚುಕೋರ ಜವಾಹಿರಿಯ ಆಟ ಮುಗಿಸಿದ ಅಮೆರಿಕ

jawahiri

ವಾಷಿಂಗ್ಟನ್:‌ ಅಫಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಅಮೆರಿಕದ ಡ್ರೋನ್‌ ದಾಳಿಗೆ ಹತ್ಯೆಗೀಡಾದ ಅಯೂಮನ್‌ ಅಲ್-ಜವಾಹಿರಿ, ಒಸಾಮಾ ಬಿನ್‌ ಲಾಡೆನ್‌ ಹತ್ಯೆಯಾದ ಬಳಿಕ ಅಲ್‌ಖೈದಾದ ನೇತೃತ್ವವನ್ನು ವಹಿಸಿದ್ದ. ಕಳೆದ ಹಲವಾರು ದಶಕಗಳಿಂದ ಜಗತ್ತಿನ ನಾನಾ ಕಡೆಗಳಲ್ಲಿ ಭಯೋತ್ಪಾದಕ ಕೃತ್ಯಗಳ ಸಂಚುಕೋರನಾಗಿದ್ದ. ಲಾಡೆನ್‌ ಇದ್ದಾಗ ಈತ ಎರಡನೇ ಪ್ರಮುಖನಾಗಿದ್ದ. ಅಮೆರಿಕ ೨೦೧೧ರಲ್ಲಿ ಒಸಾಮಾ ಬಿನ್‌ ಲಾಡೆನ್‌ನನ್ನು ಹತ್ಯೆ ಮಾಡಿತ್ತು.‌ ಬಳಿಕ ಈತನೇ ಅಲ್‌ ಖೈದಾದ ನಾಯಕತ್ವ ವಹಿಸಿದ್ದ.

ಒಸಾಮಾ ಬಿನ್‌ ಲಾಡೆನ್‌ನ ಮೆಚ್ಚಿನ ಬಂಟನಾಗಿದ್ದ ಜವಾಹಿರಿ ೨೦೦೧ರಲ್ಲಿ ಅಮೆರಿಕದ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಯ ಸಂಚಿನ ರೂವಾರಿಗಳಲ್ಲಿ ಒಬ್ಬನಾಗಿದ್ದ. ಅಮೆರಿಕ ಸರ್ಕಾರ ೨೦೦೧ರಲ್ಲಿ ಈತನ ತಲೆಗೆ ೨೫ ದಶಲಕ್ಷ ಡಾಲರ್‌ ಬಹುಮಾನ (ಅಂದಾಜು ೨೦೦ ಕೋಟಿ ರೂ.) ಬಹುಮಾನವನ್ನು ಘೋಷಿಸಿತ್ತು.

ಇತ್ತೀಚಿನ ವರ್ಷಗಳಲ್ಲಿ ಜವಾಹಿರಿ ಅಲ್‌ ಖೈದಾದ ಪ್ರಮುಖ ವಕ್ತಾರನಾಗಿದ್ದ. ೨೦೦೭ರಲ್ಲಿ ೧೬ ವೀಡಿಯೊ ಮತ್ತು ಆಡಿಯೊ ಟೇಪ್‌ಗಳಲ್ಲಿ ಕಾಣಿಸಿಕೊಂಡಿದ್ದ. ಅಮೆರಿಕ ಈ ಹಿಂದೆ ಈತನ ಹತ್ಯೆಗೆ ಯತ್ನಿಸಿತ್ತು. ಆದರೆ ಕಳೆದ ಭಾನುವಾರ ಯಶಸ್ವಿಯಾಗಿದೆ. ೨೦೦೬ರ ಜನವರಿಯಲ್ಲಿ ಅಫಘಾನಿಸ್ತಾನ-ಪಾಕಿಸ್ತಾನ ಗಡಿಯಲ್ಲಿ ಅಮೆರಿಕ ನಡೆಸಿದ ದಾಳಿಯ ಗುರಿ ಜವಾಹಿರಿಯೇ ಆಗಿದ್ದ. ಆದರೆ ಆತ ಆಗ ಬಚಾವಾಗಿದ್ದ.

ಸರ್ಜನ್‌ ಆಗಿದ್ದ ಜವಾಹಿರಿ!

ಈಜಿಪ್ತ್‌ನ ರಾಜಧಾನಿ ಕೈರೊದಲ್ಲಿ ೧೯೫೧ರ ಜೂನ್‌ ೧೯ರಂದು ಜನಿಸಿದ್ದ ಜವಾಹಿರಿ, ಮಧ್ಯಮ ವರ್ಗದ ಹಾಗೂ ವೈದ್ಯರು, ಶಿಕ್ಷಿತರನ್ನು ಒಳಗೊಂಡಿದ್ದ ಪ್ರಖ್ಯಾತ ಕುಟುಂಬವೊಂದರಲ್ಲಿ ಜನಿಸಿದ್ದ. ಈತನ ಅಜ್ಜ ರಬಿಯಾ ಜವಾಹಿರಿ ಮಧ್ಯಪ್ರಾಚ್ಯದ ಸುನ್ನಿ ಇಸ್ಲಾಮಿಕ್‌ ಕಲಿಕಾ ಕೇಂದ್ರದಲ್ಲಿ ಇಮಾಮ್ ಆಗಿದ್ದರು. ಈತನ ಸೋದರ ಸಂಬಂಧಿಯೊಬ್ಬರು ಅರಬ್‌ಲೀಗ್‌ನ ಮೊದಲ ಪ್ರಧಾನ ಕಾರ್ಯದರ್ಶಿ ಆಗಿದ್ದರು.

ಶಾಲೆಯಲ್ಲಿ ಓದುತ್ತಿದ್ದಾಗಲೇ ಈಜಿಪ್ತ್‌ನ ಹಳೆಯ ಮತ್ತು ದೊಡ್ಡ ಇಸ್ಲಾಮಿಕ್ ಸಂಘಟನೆಗಳಲ್ಲೊಂದಾಗಿದ್ದ ಮುಸ್ಲಿಮ್‌ ಬ್ರದರ್‌ಹುಡ್‌ನ ಚಟುವಟಿಕೆಗಳಲ್ಲಿ ಜವಾಹಿರಿ ಭಾಗವಹಿಸುತ್ತಿದ್ದ. ಬಳಿಕ ಕೈರೊ ವಿಶ್ವವಿದ್ಯಾಲಯದ ವೈದ್ಯಕೀಯ ವಿದ್ಯಾಲಯದಲ್ಲಿ ವೈದ್ಯಕೀಯ ಶಿಕ್ಷಣ ಮುಂದುವರಿಸಿದ್ದ. ನಾಲ್ಕು ವರ್ಷಗಳ ಓದಿನ ಬಳಿಕ ೧೯೭೪ರಲ್ಲಿ ಸರ್ಜರಿಯಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದ. ಆತನ ತಂದೆ ಮಹಮ್ಮದ್‌ ಅದೇ ಸಂಸ್ಥೆಯಲ್ಲಿ ಪ್ರೊಫೆಸರ್‌ ಆಗಿದ್ದ. ಆರಂಭದಲ್ಲಿ ಕುಟುಂಬದ ಕ್ಲಿನಿಕ್‌ ಅನ್ನು ಮುಂದುವರಿಸಿದ ಜವಾಹಿರಿ ಬಳಿಕ ಭಯೋತ್ಪಾದಕ ಚಟುವಟಿಕೆಗಳತ್ತ ಆಕರ್ಷಿತನಾದ. ೧೯೭೩ರಲ್ಲಿ ಈಜಿಪ್ತಿನಲ್ಲಿ ಜಿಹಾದ್‌ ಆರಂಭೌಆದಾಗ ಸಕ್ರಿಯನಾದ. ೧೯೮೧ರಲ್ಲಿ ಕೈರೊದಲ್ಲಿ ಈಜಿಪ್ತ್‌ ಅಧ್ಯಕ್ಷ ಅನ್ವರ್‌ ಸದಾತ್‌ ಹತ್ಯೆಯ ಸಂಚು ನಡೆಸಿದ ಆರೋಪ ಜವಾಹಿರಿ ಮೇಲೆ ಕೂಡ ಇತ್ತು. ಮಿಲಿಟರಿ ಪರೇಡ್‌ ವೇಳೆ ಸೈನಿಕರ ವೇಷದಲ್ಲಿ ಉಗ್ರರು ಪ್ರವೇಶಿಸಿ ಅಧ್ಯಕ್ಷರನ್ನು ಹತ್ಯೆಗೈದಿದ್ದರು. ಇಸ್ರೇಲ್‌ ಜತೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದ ಅನ್ವರ್‌ ಸದಾತ್‌ ಉಗ್ರರ ಕೆಂಗಣ್ಣಿಗೆ ಗುರಿಯಾಗಿದ್ದರು. ಅಧ್ಯಕ್ಷರ ಹತ್ಯೆಯ ವಿಚಾರಣೆಯಲ್ಲಿ ಜವಾಹಿರಿ, ಹತ್ಯೆಯ ಸಮರ್ಥಕರ ನಾಯಕನಾಗಿ ಹೊರಹೊಮ್ಮಿದ್ದ. ಈ ಹತ್ಯೆ ಕೇಸ್‌ನಲ್ಲಿ ಜವಾಹಿರಿ ಖುಲಾಸೆಯಾಗಿದ್ದರೂ, ಇತರ ಪ್ರಕರಣಗಳಿಗೆ ಸಂಬಂಧಿಸಿ ಮೂರು ವರ್ಷ ಜೈಲುವಾಸದ ಶಿಕ್ಷೆ ನೀಡಲಾಗಿತ್ತು. ಈಜಿಪ್ತ್‌ನ ಜೈಲಿನಲ್ಲಿ ಜವಾಹಿರಿಗೆ ಅಧಿಕಾರಿಗಳು ದೌರ್ಜನ್ಯ ನಡೆಸಿದ್ದರೆಂದು ಆತನ ಬೆಂಬಲಿಗರು ಹೇಳುತ್ತಾರೆ. ಈದಾದ ಬಳಿಕ ಜವಾಹಿರಿ ಉಗ್ರನಾಗಿ ಬದಲಾದ ಎಂಬ ವಾದವಿದೆ. ೧೯೮೫ರಲ್ಲಿ ಜೈಲಿನಿಂದ ಬಿಡುಗಡೆಯಾದ ಜವಾಹಿರಿ ಸೌದಿ ಅರೇಬಿಯಾಗೆ ತೆರಳಿದ. ಅಲ್ಲಿಂದ ಪಾಕಿಸ್ತಾನದ ಪೇಶಾವರ ಹಾಗೂ ಬಳಿಕ ಅಫಘಾನಿಸ್ತಾನಕ್ಕೆ ಸ್ಥಳಾಂತರವಾಗಿದ್ದ. ಸೋವಿಯತ್‌ ಒಕ್ಕೂಟವು ಅಫಘಾನಿಸ್ತಾನವನ್ನು ಅತಿಕ್ರಮಿಸಿದ್ದಾಗ ಈತ ವೈದ್ಯನಾಗಿ ಕೆಲಸ ಮಾಡುತ್ತಿದ್ದ. ಅಪಘಾನಿಸ್ತಾನದಲ್ಲಿ ಭಯೋತ್ಪಾದಕ ಕೃತ್ಯಗಳಲ್ಲಿ ಸಕ್ರಿಯನಾದ. ೧೯೯೩ರಲ್ಲಿ ಈಜಿಪ್ತ್‌ ಮೂಲದ ಭಯೋತ್ಪಾದಕ ಚಟುವಟಿಕೆಗಳ ನಾಯಕತ್ವ ಈತನಿಗೆ ಸಿಕ್ಕಿತು. ಪ್ರಧಾನಿ ಅತೀಫ್‌ ಸಿದ್ಧಿಕಿ ಸೇರಿ ಹಲವರ ಮೇಲೆ ದಾಳಿ ನಡೆಯಿತು. ೯೦ರ ದಶಕದ ಮಧ್ಯಭಾಗದಲ್ಲಿ ಈಜಿಪ್ತ್‌ ಸರ್ಕಾರ ಉರುಳಿಸಲು ನಡೆಸಿದ ಹಿಂಸಾಚಾರಕ್ಕೆ ೧,೨೦೦ ಈಜಿಪ್ತಿಯನ್ನರು ಸಾವಿಗೀಡಾಗಿದ್ದರು. ೧೯೯೯ರಲ್ಲಿ ಜವಾಹಿರಿಗೆ ಗಲ್ಲು ಶಿಕ್ಷೆಯನ್ನು ಈಜಿಪ್ತ್‌ ಕೋರ್ಟ್‌ ಪ್ರಕಟಿಸಿತ್ತು.

ಪಾಶ್ಚಿಮಾತ್ಯ ಗುರಿ: ಜವಾಹಿರಿ ೧೯೯೦ರ ಅವಧಿಯಲ್ಲಿ ಜಗತ್ತಿನ ನಾನಾ ಕಡೆಗಳಿಗೆ ಭೇಟಿ ನೀಡಿದ್ದ.ಭಯೋತ್ಪಾದಕ ಕೃತ್ಯಗಳಿಗೆ ಹಣ ಸಂಗ್ರಹಿಸುವುದು, ಕುಮ್ಮಕ್ಕು ಕೊಡುವುದು ಈತನ ದುರುದ್ದೇಶವಾಗಿತ್ತು. ನಕಲಿ ಪಾಸ್‌ಪೋರ್ಟ್‌ ಬಳಸಿ ಆಸ್ಟ್ರಿಯಾ, ಯೆಮನ್‌, ಇರಾಕ್‌, ಇರಾನ್‌, ಪಿಲಿಪ್ಪೀನ್ಸ್‌ಗೆ ಓಡಾಡಿದ್ದ. ೧೯೯೭ರಲ್ಲಿ ಅಫಘಾನಿಸ್ತಾನದ ಜಲಾಲಾಬಾದ್‌ಗೆ ತೆರಳಿದ. ಅದು ಒಸಾಮಾ ಬಿನ್‌ ಲಾಡೆನ್‌ನ ಅಡ್ಡೆಯಾಗಿತ್ತು. ಬಳಿಕ ಲಾಡೆನ್‌ನ ಅಲ್‌ ಖೈದಾ ಭಯೋತ್ಪಾದಕ ಸಂಘಟನೆಗೆ ಜವಾಹಿರಿ ಸೇರಿದ್ದ. ಅಲ್‌ ಖೈದಾ ಅಮೆರಿಕದ ನಾಗರಿಕರ ಹತ್ಯೆಗೆ, ರಾಯಭಾರ ಕಚೇರಿಗಳ ಮೇಲೆ ದಾಳಿಗೆ ಸಂಚು ನಡೆಸುತ್ತಿದ್ದಾಗ ಜವಾಹಿರಿ ಸಹಕರಿಸುತ್ತಿದ್ದ. ಕೀನ್ಯಾ ಮತ್ತು ತಾಂಝಾನಿಯಾದಲ್ಲಿ ಅಮೆರಿಕದ ರಾಯಭಾರ ಕಚೇರಿಯನ್ನು ಧ್ವಂಸಗೊಳಿಸಲಾಗಿತ್ತು. ಪಾಕಿಸ್ತಾನದಲ್ಲಿ ಈಜಿಪ್ತ್‌ ದೂತಾವಾಸದ ಮೇಲೆ ದಾಳಿ ನಡೆಸಲಾಗಿತ್ತು.

ಅಮೆರಿಕ ವಿರುದ್ಧದ ದಾಳಿ

ಅಮೆರಿಕದ ಮೇಲೆ ೨೦೦೧ರ ಸೆಪ್ಟೆಂಬರ್‌ ೧೧ರಂದು ನಡೆದ ಭೀಕರ ದಾಳಿಯಲ್ಲಿ ಸುಮಾರು ೩,೦೦೦ ಮಂದಿ ಸಾವಿಗೀಡಾಗಿದ್ದರು. ಇದರ ಸಂಚುಕೋರರಲ್ಲಿ ಜವಾಹಿರಿ ಒಬ್ಬನಾಗಿದ್ದ. ಲಾಡೆನ್‌ ಹತ್ಯೆಯ ಬಳಿಕ ೨೦೧೧ರಲ್ಲಿ ಜವಾಹಿರಿಯನ್ನು ಅಲ್‌ ಖೈದಾ ನಾಯಕ ಎಂದು ದೃಢಪಡಿಸಲಾಯಿತು. ಅಲ್‌ ಖೈದಾ ಬಗ್ಗೆ ಈತ ಒಂದು ಪುಸ್ತಕವನ್ನೂ ಬಿಡುಗಡೆಗೊಳಿಸಿದ್ದ.

ಹಿಜಾಬ್‌ ವಿವಾದಕ್ಕೆ ಪ್ರತಿಕ್ರಿಯಿಸಿದ್ದ ಜವಾಹಿರಿ! : ಕರ್ನಾಟಕದಲ್ಲಿ ಉಂಟಾಗಿದ್ದ ಹಿಜಾಬ್‌ ವಿವಾದಕ್ಕೆ ಸಂಬಂಧಿಸಿ ಅಲ್‌ ಖೈದಾ ಮುಖ್ಯಸ್ಥ ಜವಾಹಿರಿ ಪ್ರತಿಕ್ರಿಯಿಸಿದ್ದ ವಿಡಿಯೊ ಸುದ್ದಿಯಾಗಿತ್ತು. ಮಂಡ್ಯದಲ್ಲಿ ಹಿಜಾಬ್‌ ವಿರೋಧಿಸಿ ಜೈ ಶ್ರೀರಾಮ್‌ ಘೋಷಿಸುತ್ತಿದ್ದವರಿಗೆ ಪ್ರತಿಯಾಗಿ ಅಲ್ಲಾಹು ಅಕ್ಬರ್‌ ಘೋಷಣೆ ಕೂಗಿದ್ದ ವಿದ್ಯಾರ್ಥಿನಿ ಮಸ್ಕಾನ್‌ ಖಾನ್‌ ಅವರನ್ನು ಜವಾಹಿರಿ ಹೊಗಳಿದ್ದ.

ಇದನ್ನೂ ಓದಿ : ಅಮೆರಿಕದ ಡ್ರೋನ್‌ ದಾಳಿಗೆ ಅಲ್‌ ಖೈದಾ ನಾಯಕ ಜವಾಹಿರಿ ಹತ್ಯೆ

Exit mobile version