Site icon Vistara News

Afghan Earthquake: ಆಫ್ಘನ್‌ನಲ್ಲಿ ಒಂದೇ ದಿನ 5 ಬಾರಿ ಭಾರಿ ಭೂಕಂಪ; 320 ಜನ ಸಾವು!

Afghanistan Earthquake

Over 120 Dead, Over 1,000 Injured As 6.3 Magnitude Earthquake Hits Afghanistan

ಕಾಬೂಲ್‌: ಶನಿವಾರ (ಅಕ್ಟೋಬರ್‌ 7) ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರ ದಾಳಿ, ಇದಕ್ಕೆ ಪ್ರತಿಯಾಗಿ ಗಾಜಾಪಟ್ಟಿ ಮೇಲೆ ಇಸ್ರೇಲ್‌ ವಾಯುದಾಳಿಯಿಂದ (Israel Palestine War) ನೂರಾರು ಜನ ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೇ, ಅಫಘಾನಿಸ್ತಾನದಲ್ಲಿ ಶನಿವಾರ ಒಂದೇ ದಿನ ಐದು ಬಾರಿ ಭಾರಿ ಭೂಕಂಪ (Afghan Earthquake) ಸಂಭವಿಸಿದ್ದು, 320 ಅಧಿಕ ಮಂದಿ ಮೃತಪಟ್ಟಿದ್ದಾರೆ. ಹಾಗೆಯೇ, ಸಾವಿರಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಹಾಗಾಗಿ, ಮನುಕುಲದ ಪಾಲಿಗೆ ಶನಿವಾರ ಕಂಟಕ ಎನಿಸಿದೆ.

ಅಫಘಾನಿಸ್ತಾನದ ಹೆರಾತ್‌ ನಗರದಲ್ಲಿ ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ರಿಕ್ಟರ್‌ ಮಾಪನದಂತೆ 4.3ರ ತೀವ್ರತೆಯ ಭೂಕಂಪ ಸಂಭವಿಸಿದೆ. ಹಾಗೆಯೇ, ಇದಾದ ಬಳಿಕ ಮಧ್ಯಾಹ್ನ 12.11ರ ಸುಮಾರಿಗೆ 6.1 ತೀವ್ರತೆಯ ಭೂಕಂಪ ಉಂಟಾಗಿದೆ. ಅಷ್ಟೇ ಅಲ್ಲ, ಮಧ್ಯಾಹ್ನ 12.42ರ ಸುಮಾರಗೆ 6.2ರ ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಹೀಗೆ ಒಂದರ ಹಿಂದೆ ಒಂದರಂತೆ ಐದು ಬಾರಿ ಭೂಕಂಪ ಸಂಭವಿಸಿದ್ದು, ಜನ ಇನ್ನಿಲ್ಲದಂತೆ ಕಲ್ಲವಿಲಗೊಂಡರು ಎಂದು ತಿಳಿದುಬಂದಿದೆ.

ಆಫ್ಘನ್‌ ಬೀದಿ ಬೀದಿಗಳಲ್ಲಿ ಜನ

ಹೆರಾತ್‌ ನಗರ, ಜೆಂಡೆಜಾನ್‌ ಹಾಗೂ ಘೋರಿಯಾನ್‌ ಜಿಲ್ಲೆಗಳಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಭೂಮಿ ಕಂಪಿಸಿದ ಅನುಭವವಾಗುತ್ತಲೇ ಸಾವಿರಾರು ಜನ ಮನೆಯಿಂದ ಹೊರಗೆ ಬಂದರು. ರಸ್ತೆಗಳ ಮೇಲೆಯೇ ಇಡೀ ದಿನ ಕಳೆದ ಜನ ಅನ್ನ-ನೀರಿಲ್ಲದೆ ಪರದಾಡಿದರು ಎಂದು ತಿಳಿದುಬಂದಿದೆ. ಅದರಲ್ಲೂ, ಗ್ರಾಮೀಣ ಪ್ರದೇಶಗಳಲ್ಲಿ ಕಟ್ಟಡದ ಅವಶೇಷಗಳಲ್ಲಿ ಸಿಲುಕಿದವರ ರಕ್ಷಣೆಗೆ ಸಿಬ್ಬಂದಿ ಇಲ್ಲದೆ ಜನ ಪರದಾಡುವಂತಾಯಿತು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Morocco Earthquake: ಮೊರಾಕೋದಲ್ಲಿ ಭಾರಿ ಭೂಕಂಪ, 296 ಜನ ಬಲಿ, ಮೋದಿ ಸಂತಾಪ

ಪ್ರಬಲ ಭೂಕಂಪದಿಂದಾಗಿ ಸಾವಿರಾರು ಕಟ್ಟಡಗಳು ಧರೆಗುರುಳಿದ್ದು, ಸಾವಿರಕ್ಕೂ ಅಧಿಕ ಮಂದಿಗೆ ಆಯಾ ನಗರಗಳ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗತ್ತಿದೆ. ಹಾಗೆಯೇ, ಇನ್ನೂ ನೂರಾರು ಜನ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದು, ಅವರ ರಕ್ಷಣೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಭೀಕರ ಭೂಕಂಪ ಸಂಭವಿಸಿದ ಕಾರಣ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಆಫ್ರಿಕಾ ದೇಶವಾದ ಮೊರಾಕೊದಲ್ಲಿ ಕೆಲ ವಾರಗಳ ಹಿಂದಷ್ಟೇ ಸಂಭವಿಸಿದ ಭೂಕಂಪದಲ್ಲಿ 300ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು.

Exit mobile version