ಇಸ್ಲಾಮಾಬಾದ್: ಆರ್ಥಿಕವಾಗಿ ದಿವಾಳಿಯ ಅಂಚಿನಲ್ಲಿರುವ ಪಾಕಿಸ್ತಾನದಲ್ಲಿ ನಿರುದ್ಯೋಗ ಸಮಸ್ಯೆ ವಿಪರೀತವಾಗಿದೆ. ಸಣ್ಣ ನೌಕರಿಗೂ ಸಾವಿರಾರು ಜನರು ಅರ್ಜಿ ಹಾಕುತ್ತಿದ್ದಾರೆ. ಇಸ್ಲಾಮಾಬಾದ್ ಪೊಲೀಸ್ ಇಲಾಖೆಯಲ್ಲಿ ಖಾಲಿಯಿದ್ದ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಸುಮಾರು 30 ಸಾವಿರಕ್ಕೂ ಹೆಚ್ಚು ಜನರು ಅರ್ಜಿ ಹಾಕಿದ್ದರು. ವಿಪರೀತ ಸಂಖ್ಯೆಯಲ್ಲಿ ಅರ್ಜಿ ಹಾಕಿದ್ದರಿಂದ ಅಭ್ಯರ್ಥಿಗಳನ್ನು ಸ್ಟೇಡಿಯಂನಲ್ಲಿ ಕೂಡಿಸಿ, ಪರೀಕ್ಷೆ ಬರೆಸಲಾಗಿದೆ. ಈ ಸಂಬಂಧ ಫೋಟೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ(Islamabad Police).
ಇಸ್ಲಾಮಾಬಾದ್‌ನ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಕನಿಷ್ಠ 32 ಸಾವಿರ ಅಭ್ಯರ್ಥಿಗಳು ನೆಲದಲ್ಲಿ ಕುಳಿತುಕೊಂಡು ಟೆಸ್ಟ್ ಬರೆದಿದ್ದಾರೆ. ಪಾಕಿಸ್ತಾನದಾದ್ಯಂತ ಸುಮಾರು 32 ಸಾವಿರ ಜನರು ಅರ್ಜಿ ಹಾಕಿದ್ದರು. ಒಟ್ಟು 1667 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಇಸ್ಲಾಮಾಬಾದ್‌ನಲ್ಲಿ ಕಳೆದ ಐದು ವರ್ಷಗಳಿಂದ ಕಾನ್ಸ್‌ಟೇಬಲ್ ಹುದ್ದೆಗಳು ಖಾಲಿ ಇದ್ದವು.
ಇಸ್ಲಾಮಾಬಾದ್ ಪೊಲೀಸ್ ನೇಮಕಾತಿಯಲ್ಲಿ ಭಾರಿ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಪಾಲ್ಗೊಂಡಿರುವುದು ಪಾಕಿಸ್ತಾನದಲ್ಲಿ ಉದ್ಯೋಗವನ್ನು ಹೆಚ್ಚಿಸುವ ವಿಷಯದ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಪಾಕಿಸ್ತಾನದಲ್ಲಿ ನಿರುದ್ಯೋಗ ಉತ್ತುಂಗಕ್ಕೇರಿದೆ. ಸರ್ಕಾರಿ ಉದ್ಯೋಗಗಳಲ್ಲಿ ಅತ್ಯಲ್ಪ ನೇಮಕಾತಿಯಿಂದಾಗಿ, ನಿರುದ್ಯೋಗಿಗಳ ಸಂಖ್ಯೆಯೂ ನಿರಂತರವಾಗಿ ಹೆಚ್ಚುತ್ತಿದೆ. ಹೀಗಿದ್ದರೂ ಸರ್ಕಾರಿ ವಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಲಕ್ಷಾಂತರ ಆಕಾಂಕ್ಷಿಗಳು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ | India Pakistan Exchange List | ಅಣ್ವಸ್ತ್ರ, ಕೈದಿಗಳ ಕುರಿತು ಪರಸ್ಪರ ಮಾಹಿತಿ ಹಂಚಿಕೊಂಡ ಭಾರತ-ಪಾಕಿಸ್ತಾನ