Site icon Vistara News

Kenya Deaths: ಯೇಸುವನ್ನು ಭೇಟಿಯಾಗಲು ಉಪವಾಸ; ಪಾದ್ರಿ ಮಾತು ಕೇಳಿ 403 ಜನರ ಸಾವು

Doomsday Deaths In Kenya

Over 403 Bodies Of Kenya Cult Members, Who Starved To Meet Jesus, Found

ನೈರೋಬಿ: ಬಡತನ, ಪೌಷ್ಟಿಕಾಂಶ ಕೊರತೆಯಿಂದ ಜನ ನರಳುತ್ತಿರುವ ಕೀನ್ಯಾದಲ್ಲಿ ಕಂಡು ಕೇಳರಿಯದ ಮೂಢನಂಬಿಕೆಯು ನೂರಾರು ಜನರನ್ನು ಬಲಿ ಪಡೆದಿದೆ. ಯೇಸು ಕ್ರಿಸ್ತನನ್ನು ಭೇಟಿ ಮಾಡಬೇಕು ಎಂಬ ಆಸೆಯಿಂದ ಸಾಮೂಹಿಕವಾಗಿ ಜನ ಉಪವಾಸ ಕೈಗೊಂಡಿದ್ದು, ಇದುವರೆಗೆ 403 ಮಂದಿ (Kenya Deaths) ಮೃತಪಟ್ಟಿದ್ದಾರೆ. ಕೀನ್ಯಾದ ಕಾಡಿನಲ್ಲಿ ಸಾಮೂಹಿಕವಾಗಿ ಹೆಣಗಳು ಪತ್ತೆಯಾಗುತ್ತಿರುವುದು ಆತಂಕ ಮೂಡಿಸಿದೆ.

ಕೀನ್ಯಾದ ಪೂರ್ವ ಭಾಗದಲ್ಲಿರುವ ಶಕಹೋಲಾ ಅರಣ್ಯದಲ್ಲಿ ನೂರಾರು ಜನರ ಶವ ಪತ್ತೆಯಾಗುತ್ತಿವೆ. ನೀವು ಸಾಯುವ ತನಕ ಉಪವಾಸ ಮಾಡಿದರೆ ಯೇಸು ಕ್ರಿಸ್ತನನ್ನು ನೇರವಾಗಿ ಭೇಟಿಯಾಗುತ್ತೀರಿ ಎಂದು ಗುಡ್‌ ಇಂಟರ್‌ನ್ಯಾಷನಲ್‌ ಚರ್ಚ್‌ನ ಪಾದ್ರಿ ಪೌಲ್‌ ಮ್ಯಾಕೆಂಜೀ ಎಂಬಾತನು ಜನರ ತಲೆಯಲ್ಲಿ ಮೌಢ್ಯ ಬಿತ್ತಿದ್ದಾನೆ. ಈತನ ಮಾತು ನಂಬಿದ ನೂರಾರು ಜನ ಸಾಮೂಹಿಕವಾಗಿ ಉಪವಾಸ ಮಾಡಿದ್ದಾರೆ. ಕೊನೆಗೆ ಉಪವಾಸದಿಂದ ಮೃತಪಟ್ಟಿದ್ದಾರೆ.

ಕ್ರೈಸ್ತ ಪಾದ್ರಿಯ ಮಾತು ನಂಬಿಕೊಂಡ ಜನ ಅರಣ್ಯ ಪ್ರದೇಶದಲ್ಲಿ ಉಪವಾಸ ಮಾಡಿದ್ದಾರೆ. ಇದನ್ನೇ ಡೂಮ್ಸ್‌ಡೇ ಕಲ್ಟ್‌ (Doomsday Cult) ಎಂದು ಕರೆಯುತ್ತಾರೆ. ದೇವರನ್ನು ಭೇಟಿಯಾಗಬೇಕು ಎಂದು ಜನ ಸಾಮೂಹಿಕವಾಗಿ ಡೂಮ್ಸ್‌ ಡೇ ಆಚರಿಸಿದ್ದಾರೆ. ಇದು ಅವರ ಪ್ರಾಣಕ್ಕೇ ಕುತ್ತು ತಂದಿದೆ. ಕಳೆದ ಏಪ್ರಿಲ್‌ನಿಂದ ಆಚರಣೆ ಮಾಡಲಾಗಿದ್ದು, ಇದುವರೆಗೆ 403 ಶವಗಳು ಪತ್ತೆಯಾಗಿವೆ. ಕಳೆದ ಸೋಮವಾರವಷ್ಟೇ (July 17) ಅರಣ್ಯದಲ್ಲಿ 12 ಶವಗಳು ಪತ್ತೆಯಾಗಿವೆ. ಇನ್ನೂ ಹಲವು ಶವಗಳು ಪತ್ತೆಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Church Priest Arrested: ಸರಸದ ವಿಡಿಯೊ ವೈರಲ್‌, ಬೆಂಗಳೂರಿನಲ್ಲಿ ಕ್ರೈಸ್ತ ಪಾದ್ರಿಯ ಬಂಧನ

ಪ್ರಕರಣವು ದೇಶಾದ್ಯಂತ ಸುದ್ದಿಯಾಗುತ್ತಲೇ ಪಾದ್ರಿ ಪೌಲ್‌ ಮ್ಯಾಕೆಂಜೀಯನ್ನು ಪೊಲೀಸರು ಬಂಧಿಸಿದ್ದಾರೆ. ಇಷ್ಟಾದರೂ, ನಾನು ಯಾವುದೇ ತಪ್ಪು ಮಾಡಿಲ್ಲ ಎಂಬುದಾಗಿ ಪಾದ್ರಿ ತಿಳಿಸಿದ್ದಾನೆ ಎಂದು ತಿಳಿದುಬಂದಿದೆ. ಕೀನ್ಯಾದಲ್ಲಿ 5 ಕೋಟಿ ಜನರಿದ್ದು, 4 ಸಾವಿರ ಚರ್ಚ್‌ಗಳನ್ನು ಸ್ಥಾಪಿಸಲಾಗಿದೆ. ಜನ ಯೇಸು ಕ್ರಿಸ್ತನನ್ನು ಆರಾಧಿಸುತ್ತಾರೆ. ಇದನ್ನೇ ಎನ್‌ಕ್ಯಾಶ್‌ ಮಾಡಿಕೊಂಡು ಪಾದ್ರಿಯು ಅವರ ಜೀವವನ್ನೇ ಬಲಿ ಪಡೆದಿದ್ದಾನೆ. ಪ್ರಕರಣವನ್ನು ಸರ್ಕಾರ ತನಿಖೆಗೆ ಆದೇಶಿಸಿದೆ.

Exit mobile version