Site icon Vistara News

Landslide: ಪಪುವಾ ನ್ಯೂಗಿನಿಯಾದಲ್ಲಿ ಯಮರೂಪಿ ಭೂಕುಸಿತಕ್ಕೆ 670 ಜನ ಬಲಿ; ಊರಿಗೂರೇ ಮಸಣ!

Landslide

Over 670 people feared dead in Papua New Guinea landslide, says UN agency

ಪೋರ್ಟ್‌ ಮೋರ್‌ಸ್ಬಿ: ಪಪುವಾ ನ್ಯೂಗಿನಿಯಾದಲ್ಲಿ (Papua New Guinea) ಕಂಡು ಕೇಳರಿಯದ ಭೂಕುಸಿತ (Landslide) ಸಂಭವಿಸಿದ್ದು, ಸಾವಿನ ಸಂಖ್ಯೆ 670ಕ್ಕೆ ಏರಿಕೆಯಾಗಿದೆ. ಸಾವಿರಾರು ಜನ ಗಾಯಗೊಂಡಿದ್ದು, ನೂರಾರು ಜನ ಭೂಮಿ ಅವಶೇಷಗಳ ಅಡಿಯಲ್ಲಿ ಹುದುಗಿಹೋಗಿವೆ. ಸಾವಿರಾರು ಜನರನ್ನು ಸ್ಥಳಾಂತರ ಮಾಡಲಾಗಿದೆ. ಸಾವಿನ ಸಂಖ್ಯೆ 670ಕ್ಕೆ ಏರಿಕೆಯಾಗಿದೆ ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ. ಪಪುವಾ ನ್ಯೂಗಿನಿಯಾದಲ್ಲಿ ಇತ್ತೀಚಿನ ದಶಕಗಳಲ್ಲಿ ಸಂಭವಿಸಿದ ಭೀಕರ ದುರಂತ ಇದಾಗಿದೆ ಎಂದು ಹೇಳಲಾಗುತ್ತಿದೆ.

ಎಂಗಾ ಪ್ರಾಂತ್ಯದ ಯಂಬಾಳಿ ಗ್ರಾಮದ ಸುತ್ತಮುತ್ತ ಭಾರಿ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದೆ. ಭಾರಿ ಪ್ರಮಾಣದ ಮಳೆಯಿಂದಾಗಿ ಭೂಕುಸಿತ ಸಂಭವಿಸಿದೆ. “ಸಾವಿನ ಸಂಖ್ಯೆ 670ಕ್ಕೆ ಏರಿಕೆಯಾಗಿದೆ. 150 ಮನೆಗಳು ಭೂಮಿಯಲ್ಲಿ ಹುದುಗಿಹೋಗಿವೆ. ಮಳೆಯ ನೀರು ಇನ್ನೂ ಹರಿಯುತ್ತಿರುವ ಕಾರಣ ಜನರ ರಕ್ಷಣೆಯು ಕಷ್ಟವಾಗುತ್ತಿದೆ. ಸಾವಿರಾರು ಜನರನ್ನು ಈಗಾಗಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಇನ್ನೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ವಿಶ್ವಸಂಸ್ಥೆಯು ಮಾಹಿತಿ ನೀಡಿದೆ.

ಶುಕ್ರವಾರದಿಂದಲೂ ಸಾಲು ಸಾಲು ಭೂಕುಸಿತ ಸಂಭವಿಸಿವೆ. ಶುಕ್ರವಾರವೇ 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಇದಾದ ಬಳಿಕ ಸಾವಿನ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಸಂಬಂಧಿಕರನ್ನು ಕಳೆದುಕೊಂಡವರ ದುಃಖವು ಮುಗಿಲುಮುಟ್ಟಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಮೃತರ ಸಂಬಂಧಿಕರು ಶವಗಳನ್ನು ಹೊರತೆಗೆಯಲು ಭೂಮಿ ಅಗೆಯುತ್ತಿದ್ದಾರೆ. ಇದರಿಂದಾಗಿ ಜನರನ್ನು ನಿಯಂತ್ರಿಸುವುದು ಕೂಡ ಸಿಬ್ಬಂದಿಗೆ ಕಷ್ಟವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಅವಶೇಷಗಳ ಅಡಿಯಲ್ಲಿ ಯಾರಾದರೂ ಬದುಕಿದ್ದಾರೇನೋ ಎಂಬ ವಿಶ್ವಾಸದಿಂದ ಭೂಮಿಯನ್ನು ಅಗೆಯಲಾಗುತ್ತಿದೆ. ಅವಶೇಷಗಳನ್ನು ತೆರವುಗೊಳಿಸಲಾಗುತ್ತಿದೆ. ಜನರು ಕೂಡ ಇದಕ್ಕೆ ಸಾಥ್‌ ನೀಡುತ್ತಿದ್ದಾರೆ. ಆದರೆ, ಗಾಯಾಳುಗಳ ಬದಲು ಶವಗಳನ್ನೇ ಹೊರ ತೆಗೆಯುವಂತಾಗಿದೆ. ಗ್ರಾಮದಲ್ಲಿ ಹಾಗೂ ಸುತ್ತಮುತ್ತಲಿನಲ್ಲಿ 4 ಸಾವಿರ ಜನ ವಾಸವಿದ್ದರು. ದಿಢೀರನೆ ಭೂಕುಸಿತ ಉಂಟಾದ ಕಾರಣ ಇಡೀ ಗ್ರಾಮವೇ ನರಕಸದೃಶವಾಗಿದೆ ಎಂಬುದಾಗಿ ಮಾಧ್ಯಮಗಳ ವರದಿಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ: LandSlide: ಫಿಲಿಪ್ಪೀನ್ಸ್‌ನ ಚಿನ್ನದ ಗಣಿಯಲ್ಲಿ ಭೂಕುಸಿತ, 54 ಮಂದಿ ಸಮಾಧಿ

Exit mobile version