Site icon Vistara News

New Year Celebration: ಪಾಕಿಸ್ತಾನದಲ್ಲಿ ಹೊಸ ವರ್ಷಾಚರಣೆ ಸಂಪೂರ್ಣ ಬ್ಯಾನ್‌, ಕಾರಣ ಗೊತ್ತೆ?

pakistan PM Anwaarul Haq Kakar

ಇಸ್ಲಾಮಾಬಾದ್: ದೇಶದಲ್ಲಿ ಹೊಸ ವರ್ಷಾಚರಣೆಯನ್ನು ಸಂಪೂರ್ಣ ನಿಷೇಧಿಸುವುದಾಗಿ ಪಾಕಿಸ್ತಾನದ ನಿಯೋಜಿತ ಪ್ರಧಾನಿ (Pakistan caretaker PM) ಅನ್ವಾರುಲ್ ಹಕ್ ಕಾಕರ್ (Anwaarul Haq Kakar) ಅವರು ಗುರುವಾರ ಘೋಷಿಸಿದ್ದಾರೆ. ʼದಾಳಿಗೀಡಾಗಿರುವ ಗಾಜಾದಲ್ಲಿರುವ ಜನರೊಂದಿಗೆ ಒಗ್ಗಟ್ಟು ವ್ಯಕ್ತಪಡಿಸಲುʼ ಹೀಗೆ ಮಾಡುತ್ತಿರುವುದಾಗಿ ಹೇಳಿದ್ದಾರೆ.

ರಾಷ್ಟ್ರವನ್ನು ಉದ್ದೇಶಿಸಿ ಅವರು ಮಾಡಿದ ಸಂಕ್ಷಿಪ್ತ ಭಾಷಣದಲ್ಲಿ, ಪ್ಯಾಲೆಸ್ತೀನಿ ಪ್ರಜೆಗಳೊಂದಿಗೆ ಒಗ್ಗಟ್ಟನ್ನು ತೋರಿಸಲು, ಹೊಸ ವರ್ಷದಲ್ಲಿ ಸಮಚಿತ್ತತೆ ಮತ್ತು ನಮ್ರತೆಯನ್ನು ಪ್ರದರ್ಶಿಸಲು ಒತ್ತಾಯಿಸಿದರು. “ಪ್ಯಾಲೆಸ್ತೀನ್‌ನಲ್ಲಿನ ಗಂಭೀರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮತ್ತು ನಮ್ಮ ಪ್ಯಾಲೆಸ್ತೀನ್ ಸಹೋದರ ಸಹೋದರಿಯರೊಂದಿಗೆ ಒಗ್ಗಟ್ಟು ಪ್ರದರ್ಶಿಸಲು, ಹೊಸ ವರ್ಷಕ್ಕೆ ಯಾವುದೇ ರೀತಿಯ ಕಾರ್ಯಕ್ರಮಗಳನ್ನು ನಡೆಸದಂತೆ ಸರ್ಕಾರವು ಕಟ್ಟುನಿಟ್ಟಾದ ನಿಷೇಧವನ್ನು ವಿಧಿಸುತ್ತಿದೆ” ಎಂದು ಅವರು ಹೇಳಿದರು.

“ಗಾಜಾದ ಮೇಲೆ ಇಸ್ರೇಲ್‌ ಪಡೆಗಳು ನಡೆಸುತ್ತಿರುವ ದಾಳಿಯಲ್ಲಿ ಹಿಂಸಾಚಾರ ಮತ್ತು ಅನ್ಯಾಯದ ಎಲ್ಲಾ ಮಿತಿಗಳನ್ನು ದಾಟಿವೆ. ಇದುವರೆಗೂ ಸುಮಾರು 9,000 ಮಕ್ಕಳು ಸೇರಿ 21,000ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಕೊಲ್ಲಲ್ಪಟ್ಟಿದ್ದಾರೆ. ಇಡೀ ಪಾಕಿಸ್ತಾನಿ ದೇಶ ಮತ್ತು ಮುಸ್ಲಿಂ ಜಗತ್ತು ಗಾಜಾ ಮತ್ತು ಪಶ್ಚಿಮ ದಂಡೆಯಲ್ಲಿ ಮುಗ್ಧ ಮಕ್ಕಳ ಹತ್ಯಾಕಾಂಡ ಮತ್ತು ನಿರಾಯುಧ ಪ್ಯಾಲೆಸ್ಟೀನಿಯನ್ನರ ನರಮೇಧದ ಬಗ್ಗೆ ಸಂಪೂರ್ಣ ದುಃಖದಲ್ಲಿದೆ” ಎಂದು ಅವರು ಆಕ್ರೋಶಿಸಿದ್ದಾರೆ.

ಪಾಕಿಸ್ತಾನವು ಪ್ಯಾಲೆಸ್ತೀನ್‌ಗೆ ಎರಡು ಸಹಾಯ ಪ್ಯಾಕೇಜ್‌ಗಳನ್ನು ರವಾನಿಸಿದೆ. ಪ್ಯಾಲೆಸ್ತೀನ್‌ಗೆ ಸಮಯೋಚಿತ ನೆರವು ನೀಡಲು ಮತ್ತು ಗಾಜಾದಲ್ಲಿರುವ ಗಾಯಾಳುಗಳನ್ನು ಸ್ಥಳಾಂತರಿಸಲು ಪಾಕಿಸ್ತಾನವು ಜೋರ್ಡಾನ್ ಮತ್ತು ಈಜಿಪ್ಟ್‌ನೊಂದಿಗೆ ಮಾತುಕತೆಯಲ್ಲಿ ತೊಡಗಿದೆ ಎಂದು ಅವರು ಹೇಳಿದರು. ಪಾಕಿಸ್ತಾನವು ವಿವಿಧ ಜಾಗತಿಕ ವೇದಿಕೆಗಳಲ್ಲಿ ಪ್ಯಾಲೇಸ್ಟಿನಿಯನ್ ಜನರ ದುಃಸ್ಥಿತಿಯನ್ನು ಎತ್ತಿ ತೋರಿಸಲು ಪ್ರಯತ್ನಿಸಿದೆ. ಇಸ್ರೇಲಿ ರಕ್ತಪಾತವನ್ನು ತಡೆಯಲು ಭವಿಷ್ಯದಲ್ಲಿಯೂ ಇದನ್ನು ಮುಂದುವರಿಸುತ್ತದೆ ಎಂದು ಕಾಕರ್ ಹೇಳಿದರು.

ಪಾಕಿಸ್ತಾನದಲ್ಲಿ ಹೊಸ ವರ್ಷದ ಆಚರಣೆಗಳು ಸಾಂಪ್ರದಾಯಿಕವಾಗಿ ಅದ್ಧೂರಿಯಾಗಿ ನಡೆಯುವುದಿಲ್ಲ. ಇಲ್ಲಿ ಇಸ್ಲಾಮಿಕ್ ಮತೀಯವಾದಿ ಗುಂಪುಗಳು ಈ ವರ್ಷಾಚರಣೆಗೆ ವಿರೋಧವಾಗಿದ್ದು ಯಾವುದೇ ಬಗೆಯ ಹಾಡು ಕುಣಿತ ಇತ್ಯಾದಿಗಳನ್ನು ಬಲಪ್ರಯೋಗದ ಮೂಲಕ ನಿಲ್ಲಿಸುತ್ತಾರೆ. ಜೊತೆಗೆ ಪಾಕಿಸ್ತಾನ ಹಣದುಬ್ಬರ ಹಾಗೂ ಅಂತಾರಾಷ್ಟ್ರೀಯ ಸಾಲದ ಹೊರೆಯಿಂದ ತತ್ತರಿಸುತ್ತಿದ್ದು, ಯಾವುದೇ ಬಗೆಯ ಸಂಭ್ರಮಾಚರಣೆ ಸಾಧ್ಯವಿಲ್ಲದಂತೆ ಪಾಕಿಸ್ತಾನ ಸರ್ಕಾರ ಕೂಡ ದಿವಾಳಿಯಂಚಿನಲ್ಲಿದೆ.

ಇದನ್ನೂ ಓದಿ: New Year Celebration: ಹೊಸ ವರ್ಷಾಚರಣೆ: ಬಾರ್‌, ಪಬ್‌ಗಳಿಗೆ ಬಿಗಿ ರೂಲ್‌; ಹೀಗೆಲ್ಲಾ ಆದರೆ ಲೈಸೆನ್ಸ್‌ ಕ್ಯಾನ್ಸಲ್!

Exit mobile version