ಪಾಕಿಸ್ತಾನ ಪ್ರಧಾನಮಂತ್ರಿ ಶೆಹಬಾಜ್ ಷರೀಫ್ (Pak PM Shehbaz Sharif) ಅವರು ಪ್ಯಾರಿಸ್ನಲ್ಲಿ ಮಹಿಳಾ ಅಧಿಕಾರಿಯ ಕೈಯಿಂದ ಛತ್ರಿ ಕಸಿದುಕೊಂಡು ಹೋಗಿ ಟ್ರೋಲ್ ಆಗಿದ್ದಾರೆ. ಶೆಹಬಾಜ್ ಷರೀಫ್ ಅವರು ಕಳೆದ ಎರಡು ದಿನಗಳಿಂದ ಪ್ಯಾರಿಸ್ ಪ್ರವಾಸದಲ್ಲಿ ಇದ್ದಾರೆ. ಗ್ಲೋಬಲ್ ಫೈನಾನ್ಸಿಂಗ್ ಒಪ್ಪಂದದ ಶೃಂಗಸಭೆ (Global Financing Pact Summit) ಗೋಸ್ಕರ ಷರೀಫ್ ಅಲ್ಲಿಗೆ ಹೋಗಿದ್ದಾರೆ. ಅಲ್ಲಿ ಅವರು ಸೌದಿ ದೊರೆ ಸಲ್ಮಾನ್ ಬಿನ್ ಅಬ್ದುಲಜೀಜ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಮತ್ತಿತರರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಆದರೆ ಅವರೀಗ ಇಂಟರ್ನೆಟ್ನಲ್ಲಿ ಟ್ರೆಂಡ್ ಆಗುತ್ತಿರುವುದು ‘ಛತ್ರಿ’ ವಿಷಯಕ್ಕೆ.
ಈ ಶೃಂಗಸಭೆ ನಡೆಯಲಿರುವ ಪಲೈಸ್ ಬ್ರಾಂಗ್ನಿಯಾರ್ಟ್ ಕಟ್ಟಡದ ಎದುರು ಶೆಹಬಾಜ್ ಷರೀಫ್ ಅವರು ತಮ್ಮ ಕಾರಿನಲ್ಲಿ ಬಂದು ಇಳಿಯುತ್ತಾರೆ.ಅದೇ ವೇಳೆ ಸಿಕ್ಕಾಪಟೆ ಮಳೆ ಬರುತ್ತಿರುತ್ತದೆ. ಹೀಗಾಗಿ ಷರೀಫ್ ಅವರು ಕಾರಿನಿಂದ ಇಳಿಯುತ್ತಿದ್ದಂತೆ ಅಲ್ಲೇ ಇದ್ದ ಮಹಿಳಾ ಸಿಬ್ಬಂದಿ (ಗಣ್ಯರ ಸ್ವಾಗತಕ್ಕೆ ನಿಯೋಜಿಸಲ್ಪಟ್ಟವರು) ಪಾಕ್ ಪ್ರಧಾನಿಗೆ ಛತ್ರಿ ಹಿಡಿಯುತ್ತಾರೆ. ಆದರೆ ಪಾಕ್ ಪ್ರಧಾನಿ ಆಕೆಯ ಕೈಯಿಂದ ಛತ್ರಿಯನ್ನು ಕಸಿದು, ತಾವೇ ಹಿಡಿದುಕೊಂಡು ಮುನ್ನಡೆಯುತ್ತಾರೆ. ಹೀಗೆ ಹೊರಟ ಪ್ರಧಾನಿಯ ಹಿಂದೆ, ಆ ಮಹಿಳಾ ಸಿಬ್ಬಂದಿ ಮಳೆಯಲ್ಲಿ ನೆನೆಯುತ್ತ ನಡೆಯುತ್ತಾರೆ.
ಇದನ್ನೂ ಓದಿ: World Cup 2023 : ಭಾರತಕ್ಕೆ ತಂಡ ಕಳುಹಿಸುವ ವಿಚಾರದಲ್ಲಿ ಪಾಕ್ ವಿದೇಶಾಂಗ ಸಚಿವಾಲಯದ ಕಿರಿಕ್!
ವಿಡಿಯೊ ಸಿಕ್ಕಾಪಟೆ ವೈರಲ್ ಆಗುತ್ತಿರುವ ಬೆನ್ನಲ್ಲೇ ನೆಟ್ಟಿಗರಿಂದ ಟೀಕೆಗೆ ಗುರಿಯಾಗಿದೆ. ಅದರಲ್ಲೂ ಪಾಕಿಸ್ತಾನಿಯರೇ ಜಾಸ್ತಿ ಕಮೆಂಟ್ ಮಾಡಿದ್ದಾರೆ. ತಮ್ಮ ಪ್ರಧಾನಿ ವರ್ತನೆಯನ್ನು ಖಂಡಿಸಿದ್ದಾರೆ. ಆ ಮಹಿಳೆಯನ್ನು ಮಳೆಯಲ್ಲಿ ನೆನೆಯಲು ಬಿಟ್ಟಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಕೆಲವರು ಟ್ವೀಟ್ ಮಾಡಿ, ಪ್ರಧಾನಿ ಮಹಿಳೆ ವಿಷಯದಲ್ಲಿ ಕಟುವಾಗಿ ವರ್ತಿಸಿದರು. ಇಡೀ ಪಾಕಿಸ್ತಾನಕ್ಕೇ ಮುಜುಗರ ತಂದಿಟ್ಟದ್ದಾರೆ ಎಂದೂ ಹೇಳಿದ್ದಾರೆ. ಶೆಹಬಾಜ್ ಷರೀಫ್ ಅವರು ಪಾಕಿಸ್ತಾನದ ಮಿಸ್ಟರ್ ಬೀನ್ ಎಂದು ಇನ್ನೂ ಕೆಲವರು ಫನ್ನಿಯಾಗಿ ಹೇಳಿದ್ದಾರೆ.
Prime Minister Muhammad Shehbaz Sharif arrived at Palais Brogniart to attend the Summit for a New Global Financial Pact in Paris, France. #PMatIntFinanceMoot pic.twitter.com/DyV8kvXXqr
— Prime Minister's Office (@PakPMO) June 22, 2023