ನವ ದೆಹಲಿ: ಉಜ್ಬೇಕಿಸ್ತಾನದ ಸಮರಕಂಡದಲ್ಲಿ ಆಯೋಜಿಸಲಾಗಿರುವ ಶಾಂಘೈ ಸಹಕಾರ ಶೃಂಗ(SCO Summit)ದಲ್ಲಿ ಪಾಕಿಸ್ತಾನವೂ ಪಾಲ್ಗೊಂಡಿದೆ. ಆದರೆ, ಈ ರಾಷ್ಟ್ರದ ನಾಯಕರು ಹಲವು ಮುಜುಗರ ಸಂಗತಿಗಳನ್ನು ಎದುರಿಸುವಂತಾಯಿತು. ಶುಕ್ರವಾರ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ನಡುವೆ ಮಾತುಕತೆ ನಿಗದಿಯಾಗಿತ್ತು. ಈ ವೇಳೆ, ಪಾಕಿಸ್ತಾನ ಪ್ರಧಾನಿ ತೀವ್ರ ಮುಜುಗರ ಸನ್ನಿವೇಶವನ್ನು ಎದುರಿಸಬೇಕಾಯಿತು. ಈ ಘಟನೆಗೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ.
ಮಾತುಕತೆ ವೇಳೆ ಪುಟಿನ್ ಮತ್ತು ಷರೀಫ್ ಇಬ್ಬರೂ ಹೆಡ್‌ಫೋನ್ ಕಿವಿಗೆ ಸಿಕ್ಕಿಸಿಕೊಳ್ಳಬೇಕಿತ್ತು. ವ್ಲಾದಿಮಿರ್ ಪುಟನ್ ಅವರಿಗೇನೂ ಸಮಸ್ಯೆಯಾಗಲಿಲ್ಲ. ಆದರೆ, ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರು ಎಷ್ಟೇ ಪ್ರಯತ್ನ ಪಟ್ಟರೂ ಹೆಡ್ ಫೋನ್ ಅನ್ನು ಅವರು ಕಿವಿಗೆ ಸಿಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆಗ ಅವರು ಸಮ್ ಬಡಿ ಹೆಲ್ಪ್ ಮಿ ಎನ್ನುತ್ತಾರೆ. ಕೂಡಲೇ ವ್ಯಕ್ತಿಯೊಬ್ಬ ಬಂದು ಅವರ ಕಿವಿಗೆ ಹೆಡ್‌ಫೋನ್ ತುರುಕಿಸುತ್ತಾರೆ. ಇನ್ನೇನೂ ಪುಟಿನ್ ಅವರೊಂದಿಗೆ ಮಾತನಾಡಬೇಕು ಎನ್ನುವಷ್ಟರಲ್ಲಿ ಹೆಡ್ ಫೋನ್ ಮತ್ತೆ ಕಿವಿಯಿಂದ ಬೀಳುತ್ತದೆ. ಷರೀಫ್ ಅವರ ಫಜೀತಿಯನ್ನು ಕಂಡು ಪುಟಿನ್ ಕೂಡ ನಗಲಾರಂಭಿಸುತ್ತಾರೆ.
ಈ ವಿಡಿಯೋವನ್ನು ಟ್ವೀಟ್ ಮಾಡಿರುವ ಇಮ್ರಾನ್ ಖಾನ್ ನೇತೃತ್ವದ ಪ್ರತಿಪಕ್ಷವು, ಪಾಕಿಸ್ತಾನಕ್ಕೆ ಪ್ರಧಾನಿ ಮುಜುಗರ ತಂದಿದ್ದಾರೆಂದು ಬರೆದುಕೊಂಡಿದೆ. ಮತ್ತೊಂದು ಫೋಟೊ ಕೂಡ ವೈರಲ್ ಆಗಿದ್ದು, ಅದರಲ್ಲಿ ಪಾಕಿಸ್ತಾನದ ನಿಯೋಗವು ಯಾವುದನ್ನು ನೋಟ್ ಮಾಡಿಕೊಳ್ಳದೇ ಹಾಗೆಯೇ ಕೂತಿರುವುದು ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.
ಇದನ್ನೂ ಓದಿ | ಪಾಕಿಸ್ತಾನಕ್ಕೆ ಎಫ್-16 ಪೂರೈಕೆಗೆ ಅಮೆರಿಕ ಒಪ್ಪಿದ ಬೆನ್ನಲ್ಲೇ, ವ್ಯಾಪಾರ ಮಾತುಕತೆ ಸ್ಥಗಿತಗೊಳಿಸಿದ ಭಾರತ