ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಮಂಗಳವಾರ ತೀವ್ರ ಭೂಕಂಪ (Pakistan Earthquake) ಉಂಟಾಗಿದ್ದು, ಎರಡೂ ದೇಶಗಳಿಂದ ಸೇರಿ ಸುಮಾರು 11 ಜನರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಅಫ್ಘಾನಿಸ್ತಾನದ ಜರ್ಮ್ ಎಂಬಲ್ಲಿ, ಭೂ ಮೇಲ್ಮೈನಿಂದ ಸುಮಾರು 180 ಕಿಮೀ ಆಳದಲ್ಲಿ ಭೂಮಿ ನಡುಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6.6ರಷ್ಟು ದಾಖಲಾಗಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ಹೇಳಿದೆ. ಹಾಗೇ, ಭೂಕಂಪನದ ಕೇಂದ್ರವಾದ ಜರ್ಮ್ನಿಂದ 40 ಕಿಮೀ ದೂರದಲ್ಲಿರುವ ಅಫ್ಘಾನಿಸ್ತಾನದ ಹಿಂದು ಕುಶ್ ಪ್ರಾಂತ್ಯದಲ್ಲಿ ಭೂಕಂಪ ತೀವ್ರವಾಗಿ ಪರಿಣಾಮ ಬೀರಿದ್ದರೆ, ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಹಾನಿಯಾಗಿದೆ.
ಭೂಕಂಪನವಾಗುತ್ತಿದ್ದಂತೆ ಜನರೆಲ್ಲ ಗಾಬರಿಯಾಗಿದ್ದರು. ಕೆಲವು ಸಣ್ಣಪುಟ್ಟ ಮನೆಗಳು, ಕಟ್ಟಡಗಳು ಉರುಳಿಬಿದ್ದಿದ್ದಾಗಿ ವರದಿಯಾಗಿದೆ. ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಸೇರಿ 11 ಮಂದಿ ಮೃತಪಟ್ಟಿದ್ದಾಗಿ ವರದಿಯಾಗಿದ್ದು, ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ 100 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಅಫ್ಘಾನಿಸ್ತಾನದಲ್ಲಿ ಭೂಕಂಪನವಾದ ಸ್ಥಳ ತಜಿಕಿಸ್ಥಾನಕ್ಕೂ ಗಡಿ ಪ್ರದೇಶವಾಗಿದ್ದು ಅಲ್ಲಿಯೂ ಗುಡ್ಡಪ್ರದೇಶದಲ್ಲಿ ಭೂಕುಸಿತ ಉಂಟಾಗಿದೆ. ಹಾಗೇ, ಪಾಕಿಸ್ತಾನ ಇಸ್ಲಮಾಬಾದ್ನಲ್ಲಿನ ಕೆಲವು ಅಪಾರ್ಟ್ಮೆಂಟ್ಗಳು ಬಿಟ್ಟಿದ್ದಾಗಿ ವರದಿಯಾಗಿದೆ. ಭೂಕಂಪದ ಬಗ್ಗೆ ಪಾಕಿಸ್ತಾನ ಪ್ರಧಾನಮಂತ್ರಿ ಶಹಬಾಜ್ ಷರೀಫ್ ಪ್ರತಿಕ್ರಿಯೆ ನೀಡಿ, ‘ಯಾವುದೇ ರೀತಿಯ ಪರಿಸ್ಥಿತಿ ನಿಭಾಯಿಸಲು ಸಿದ್ಧರಿದ್ದೇವೆ. ವಿಪತ್ತು ನಿರ್ವಹಣಾ ಅಧಿಕಾರಿಗಳು ಅಲರ್ಟ್ ಆಗಿರುವಂತೆ ಹೇಳಿದ್ದೇವೆ’ ಎಂದಿದ್ದಾರೆ.
ಇದನ್ನೂ ಓದಿ: Earthquake: ದೆಹಲಿ, ಉತ್ತರ ಪ್ರದೇಶ, ಕಾಶ್ಮೀರ ಸೇರಿ ಹಲವೆಡೆ ಪ್ರಬಲ ಭೂಕಂಪ, ಆತಂಕದಲ್ಲಿ ಮನೆ ಬಿಟ್ಟು ಓಡಿದ ಜನ