ನವ ದೆಹಲಿ: ಪಾಕಿಸ್ತಾನ ಭಾರತಕ್ಕೆ ಯಾವತ್ತಿದ್ದರೂ ಶತ್ರು ರಾಷ್ಟ್ರವೇ. ಭಾರತಕ್ಕೆ ಉಗ್ರರನ್ನು ಕಳುಹಿಸುವುದು, ಗಡಿಯಲ್ಲಿ ನಮ್ಮ ಯೋಧರೊಂದಿಗೆ ಕಿತ್ತಾಡುವ ಕೆಲಸವನ್ನು ಪಾಕಿಸ್ತಾನ ಆಗಾಗ ಮಾಡುತ್ತಿರುತ್ತದೆ. ಆದರೆ ಈಗಿನ ಮಾಹಿತಿ ಪ್ರಕಾರ ಪಾಕಿಸ್ತಾನದ ಶಿಕ್ಷಣ ವ್ಯವಸ್ಥೆಯನ್ನೂ ಭಾರತ ವಿರೋಧಿ ವ್ಯವಸ್ಥೆಯನ್ನಾಗಿ ಮಾಡಿಕೊಳ್ಳಲಾಗಿದೆ. ಅಲ್ಲಿನ ಮಕ್ಕಳಿಗೆ ಭಾರತವನ್ನು ಎಂದಿಗೂ ನಂಬಲಾಗದು ಎಂದು ಪಾಠ (Pakistan Books) ಹೇಳಿಕೊಡಲಾಗುತ್ತಿದೆ.
ನ್ಯೂಸ್ 18 ಮಾಧ್ಯಮ ಸಂಸ್ಥೆಯು ಪಾಕಿಸ್ತಾನದ ನ್ಯಾಷನಲ್ ಬುಕ್ ಫೌಂಡೇಶನ್ ಅವರು 8 ಮತ್ತು 9ನೇ ತರಗತಿ ಮಕ್ಕಳಿಗೆ ಬಿಡುಗಡೆ ಮಾಡಿರುವ ಪುಸ್ತಕದ ಪ್ರತಿಯನ್ನು ಪಡೆದುಕೊಂಡಿದ್ದು, ಅದರಲ್ಲಿನ ಕೆಲವು ಅಂಶಗಳನ್ನು ಹೆಕ್ಕಿ ತೆಗೆಯಲಾಗಿದೆ.
ಇದನ್ನೂ ಓದಿ: Hindu Doctor Killed In Pakistan: ಹೋಳಿ ಹಬ್ಬದ ದಿನವೇ ಪಾಕಿಸ್ತಾನದಲ್ಲಿ ಹಿಂದು ವೈದ್ಯನ ಹತ್ಯೆ
8ನೇ ತರಗತಿ ಪುಸ್ತಕದಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ಐಎನ್‌ಸಿ) ನಿರ್ಮಾಣದ ಕುರಿತಾಗಿ ಮಾಹಿತಿ ನೀಡಲಾಗಿದೆ. ಐಎನ್‌ಸಿ ಸಂಪೂರ್ಣ ಹಿಂದೂ ಪರವಾಗಿ ರೂಪುಗೊಂಡಿತು. ಅವರು ಮುಸ್ಲಿಂ ವಿರೋಧವಾಗಿ ಕೆಲಸಗಳನ್ನು ಮಾಡಲಾರಂಭಿಸಿದರು ಎಂದು ಪುಸ್ತಕದಲ್ಲಿ ಹೇಳಲಾಗಿದೆ.
ಪುಸ್ತಕದಲ್ಲಿ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರನ್ನು ಕೇವಲ ಒಬ್ಬ ಹಿಂದೂ ನಾಯಕ ಎಂದು ಹೇಳಲಾಗಿದೆ. ಅವರು ಮುಸ್ಲಿಮರ ಚಿಂತನೆಗಳನ್ನು ವಿರೋಧಿಸುತ್ತಿದ್ದರೂ ಎಂದೂ ಹೇಳಿದೆ. “ಗಾಂಧಿ ಮತ್ತು ಅವರ ಯುವ ಬೆಂಬಲಿಗರು ಕಾಂಗ್ರೆಸ್‌ನ ಉಸ್ತುವಾರಿಯನ್ನು ವಹಿಸಿಕೊಂಡರು. ಹಿಂದೂಗಳನ್ನು ಬಹುಸಂಖ್ಯಾತರೆಂದು ಹೇಳಿದರು. ಮುಸ್ಲಿಂ ಹಕ್ಕುಗಳನ್ನು ಕಡೆಗಣಿಸಿದರು. ಇದರಿಂದಾಗಿ ಮುಸ್ಲಿಮರ ಬಗ್ಗೆ ದ್ವೇಷ, ಅಸೂಯೆ ಮತ್ತು ಸಂಕುಚಿತ ಮನೋಭಾವನೆ ಸೃಷ್ಟಿಯಾಯಿತು” ಎಂದು ಪುಸ್ತಕದಲ್ಲಿದೆ.
1857ರ ಸ್ವಾತಂತ್ರ್ಯ ಯುದ್ಧ ಮತ್ತು 1867ರ ಹಿಂದಿ – ಉರ್ದು ಜಗಳದಿಂದಾಗಿ ಮುಸ್ಲಿಮರು ಹಿಂದೂಗಳಿಂದ ದೂರಾಗಲು ಆರಂಭಿಸಿದರು. ಹಿಂದೂಗಳು ಉರ್ದು ಬದಲಾಗಿ ಹಿಂದಿಯನ್ನು ಅಧಿಕೃತ ಭಾಷೆಯಾಗಿಸಬೇಕು ಎಂದು ಒತ್ತಾಯಿಸಲಾರಂಭಿಸಿದರು. ಎಲ್ಲೆಡೆ ಧಾರ್ಮಿಕ ಹಿಂಸಾಚಾರ ಆರಂಭವಾಯಿತು. ಹಿಂದೂ ಮತ್ತು ಮುಸ್ಲಿಂ ಒಂದಾಗಿರಬೇಕು ಎನ್ನುತ್ತಿದ್ದ ಸರ್ ಸೈಯದ್ ಅಹಮದ್ ಖಾನ್ ಅವರು ತಮ್ಮ ಆದರ್ಶ ತೊರೆದರು. ಹಿಂದೂ ಮತ್ತು ಮುಸ್ಲಿಂ ಒಟ್ಟಾಗಿರಲು ಸಾಧ್ಯವೇ ಇಲ್ಲ ಎಂದು ಹೇಳಿದರು. ಆ ಸಮಯದಲ್ಲಿ ಬ್ರಿಟಿಷರು ಭಾರತದಲ್ಲಿ ಹೊಸ ರಾಜಕೀಯ ನೀತಿ ತರುವ ನಿಟ್ಟಿನಲ್ಲಿ ತಮ್ಮದೇ ಆದ ಹೊಸ ಪಕ್ಷವನ್ನು ಆರಂಭಿಸಿದರು.
ಆದರೆ ಮುಸ್ಲಿಮರಿಗೆ ಹಿಂದೂಗಳನ್ನಾಗಲೀ ಅಥವಾ ಬ್ರಿಟಿಷರನ್ನಾಗಲೀ ಎಂದಿಗೂ ನಂಬಲಾಗದು ಎನ್ನುವುದು ತಿಳಿದಿತ್ತು. “ಬಂಗಾಳದ ವಿಭಜನೆಯನ್ನು 1911ರಲ್ಲಿ ರದ್ದುಗೊಳಿಸಲಾಯಿತು. ಅದು ಮುಸ್ಲಿಮರಿಗೆ ಹಿನ್ನಡೆಯಾಯಿತು. ಅದರಿಂದ ಮುಸ್ಲಿಮರು ಪಾಠ ಕಲಿತರು. ಮುಸ್ಲಿಮರು ತಮ್ಮ ಹಕ್ಕುಗಳ ರಕ್ಷಣೆಗಾಗಿ ಹಿಂದೂಗಳನ್ನು ಅಥವಾ ಬ್ರಿಟಿಷರನ್ನು ನಂಬಲು ಸಾಧ್ಯವಿಲ್ಲ ಎಂದು ಅರಿತುಕೊಂಡರು. ಕಾಂಗ್ರೆಸ್ ರಾಷ್ಟ್ರೀಯ ಪಕ್ಷವೆಂದು ಹೇಳಿಕೊಂಡಿತು, ಆದರೆ ವಿಭಜನೆಯ ಪ್ರಶ್ನೆಯಲ್ಲಿ ಅದು ಮತೀಯ ಹಿಂದೂ ಸಂಘಟನೆಯಂತೆ ವರ್ತಿಸಿತು” ಎಂದು ಪುಸ್ತಕದಲ್ಲಿ ಹೇಳಲಾಗಿದೆ.
9ನೇ ತರಗತಿಯ ಪುಸ್ತಕದಲ್ಲಿರುವ ಅಧ್ಯಾಯದಲ್ಲಿ “ಕಾಂಗ್ರೆಸ್ ಕೆಟ್ಟದಾಗಿ ಆಡಳಿತ ನಡೆಸಿತು. ಈ ಅವಧಿಯು ರಾಜಕೀಯ ಭ್ರಷ್ಟಾಚಾರ ನಡೆಯಿತು. ಸರ್ಕಾರದ ಮೇಲೆ ಪಕ್ಷದ ಉನ್ನತ ಹಸ್ತಕ್ಷೇಪ ಹೆಚ್ಚಿತ್ತು. ವಿದ್ಯಾ ಮಂದಿರ ಮತ್ತು ಗಾಂಧೀಜಿಯವರ ವಾರ್ಧಾದಂತಹ ಯೋಜನೆಗಳನ್ನು ಗಾಂಧಿ ಅವರೊಂದಿಗೆ ಸೇರಿಕೊಂಡು ಸರ್ಕಾರ ರಚಿಸಿತು. ಆದರೆ ಅದು ಮುಸ್ಲಿಮರಿಗೆ ಸ್ವೀಕಾರಾರ್ಹವಾಗಿರಲಿಲ್ಲ. ಕಾಂಗ್ರೆಸ್ ಸರ್ಕಾರವು ಉರ್ದುವನ್ನು ಹಿಂದಿಗೆ ಬದಲಿಸಲು ಕ್ರಮ ಕೈಗೊಂಡಿತು. ಅಧಿಕೃತ ಗೀತೆಯಾಗಿ ‘ವಂದೇ ಮಾತರಂ’ ಅನ್ನು ಪರಿಚಯಿಸಲು ಪ್ರಯತ್ನಿಸಿತು. ಈ ಹಾಡು ಮುಸ್ಲಿಂ ವಿರೋಧಿ ಹಿನ್ನೆಲೆಯನ್ನು ಹೊಂದಿತ್ತು ಹಾಗಾಗಿ ಮುಸ್ಲಿಮರಲ್ಲಿ ದ್ವೇಷವನ್ನು ಕೆರಳಿಸಿತು” ಎಂದೂ ಬರೆಯಲಾಗಿದೆ.
ಭಾರತ ಮತ್ತು ಪಾಕಿಸ್ತಾನದ ವಿಭಜನೆ ಬಗ್ಗೆಯೂ ಪುಸ್ತಕದಲ್ಲಿ ಹೇಳಲಾಗಿದೆ. “ಪಾಕಿಸ್ತಾನದ ಭೂಪ್ರದೇಶವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಪಶ್ಚಿಮ ಪಾಕಿಸ್ತಾನ ಮತ್ತು ಪೂರ್ವ ಪಾಕಿಸ್ತಾನ. ಅಕಾಲಿಕ ಮತ್ತು ಕೆಟ್ಟದಾಗಿ ಯೋಜಿತ ವಿಭಜನೆಯಿಂದಾಗಿ ಮತ್ತು ಸಿಖ್ಖರಿಂದ ದೊಡ್ಡ ಪ್ರಮಾಣದ ಮುಸ್ಲಿಮರ ಹತ್ಯಾಕಾಂಡದಿಂದಾಗಿ, ಪೂರ್ವ ಪಂಜಾಬ್‌ನ ಮುಸ್ಲಿಮರು ತಮ್ಮ ಮನೆಗಳನ್ನು ತೊರೆದು ಹೆಚ್ಚಿನ ಸಂಖ್ಯೆಯಲ್ಲಿ ಪಾಕಿಸ್ತಾನಕ್ಕೆ ವಲಸೆ ಹೋಗಬೇಕಾಯಿತು” ಎಂದು ಅದು ಹೇಳುತ್ತದೆ.
“ಕಾಲುವೆ ನೀರಿನ ಸಮಸ್ಯೆ” ಎಂಬ ಶೀರ್ಷಿಕೆಯಡಿಯಲ್ಲಿ ಪಾಕಿಸ್ತಾನದ ನೀರಿನ ಸಮಸ್ಯೆಗೆ ಭಾರತವೇ ಕಾರಣ ಎಂದು ವಿವರಿಸಲಾಗಿದೆ. “1948ರ ಏಪ್ರಿಲ್‌ನಲ್ಲಿ ಲಾಹೋರ್‌ನ ಸುತ್ತಮುತ್ತಲಿನ ವಿಶಾಲ ಪ್ರದೇಶಗಳ ನೀರಿನ ಸರಬರಾಜನ್ನು ಕಡಿತಗೊಳಿಸುವ ಮೂಲಕ ಭಾರತವು ತನ್ನ ನಕಾರಾತ್ಮಕ ಸಾಮರ್ಥ್ಯವನ್ನು ಪ್ರದರ್ಶಿಸಿತು. ನಮ್ಮಲ್ಲಿ ಸಾವಿರಾರು ಎಕರೆಯಲ್ಲಿ ಬೆಳೆದ ಬೆಳೆಗಳು ನಾಶವಾಯಿತು” ಎಂದು ಹೇಳಲಾಗಿದೆ.