ಇಸ್ಲಾಮಾಬಾದ್: ಇತಿಹಾಸದಲ್ಲೇ ಮೊದಲ ಬಾರಿಗೆ ಪಾಕಿಸ್ತಾನದಲ್ಲಿ ಹಿಂದೂ ಮಹಿಳೆಯೊಬ್ಬರು (hindu woman) ಸಾರ್ವತ್ರಿಕ ಚುನಾವಣೆಗೆ (Pakistan Election) ಸ್ಪರ್ಧಿಸುತ್ತಿದ್ದಾರೆ.
ಸವೀರಾ ಪ್ರಕಾಶ್ ಎಂಬವರು ಖೈಬರ್ ಪಖ್ತುಂಖ್ವಾದ ಬುನೆರ್ ಜಿಲ್ಲೆಯಲ್ಲಿ ಸಾಮಾನ್ಯ ಸ್ಥಾನಕ್ಕೆ ಸ್ಪರ್ಧೆಗೆ ನಾಮಪತ್ರ ಸಲ್ಲಿಸಿದ್ದಾರೆ. ಪಾಕಿಸ್ತಾನದ 16ನೇ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರನ್ನು ಆಯ್ಕೆ ಮಾಡಲು 2024ರ ಫೆಬ್ರವರಿ 8ರಂದು ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ.
ಹಿಂದೂ ಧರ್ಮೀಯರಾದ ಸವೀರಾ ಪ್ರಕಾಶ್, ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಟಿಕೆಟ್‌ನಲ್ಲಿ ಚುನಾವಣೆಗೆ ಸ್ಪರ್ಧಿಸುವ ಆಶಾವಾದ ಹೊಂದಿದ್ದಾರೆ. ಅವರ ತಂದೆ ಓಂಪ್ರಕಾಶ್ 35 ವರ್ಷಗಳಿಂದ ಪಿಪಿಪಿಯ ಸದಸ್ಯರು ಹಾಗೂ ಇತ್ತೀಚೆಗೆ ನಿವೃತ್ತರಾದ ವೈದ್ಯ.
2022ರಲ್ಲಿ ಅಬೋಟಾಬಾದ್ ಇಂಟರ್ನ್ಯಾಷನಲ್ ಮೆಡಿಕಲ್ ಕಾಲೇಜಿನ ಪದವೀಧರರಾದ ಪ್ರಕಾಶ್ ಅವರು ಬುನೆರ್‌ನಲ್ಲಿ PPP ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಮುದಾಯದ ಕಲ್ಯಾಣಕ್ಕಾಗಿ ತನ್ನ ಬದ್ಧತೆಯನ್ನು ವ್ಯಕ್ತಪಡಿಸಿರುವ ಅವರು, ಮಹಿಳೆಯರ ಸುಧಾರಣೆಗಾಗಿ ಕೆಲಸ ಮಾಡುವ, ಅವರಿಗಾಗಿ ಸುರಕ್ಷಿತ ವಾತಾವರಣವನ್ನು ಖಾತ್ರಿಪಡಿಸುವ ಮತ್ತು ಅವರ ಹಕ್ಕುಗಳನ್ನು ಪ್ರತಿಪಾದಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.
ಅವರು ಅಭಿವೃದ್ಧಿ ವಲಯದಲ್ಲಿ ಮಹಿಳೆಯರ ಮೇಲಿರುವ ಐತಿಹಾಸಿಕ ನಿರ್ಲಕ್ಷ್ಯದತ್ತ ಗಮನ ಸೆಳೆದಿದ್ದಾರೆ. ಚುನಾಯಿತರಾದರೆ ಈ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದ್ದಾರೆ. ಪಾಕಿಸ್ತಾನದ ಪತ್ರಿಕೆ ʼಡಾನ್ʼಗೆ ನೀಡಿದ ಸಂದರ್ಶನದಲ್ಲಿ ಪ್ರಕಾಶ್ ಅವರು ತಮ್ಮ ತಂದೆಯ ಹೆಜ್ಜೆಗಳನ್ನು ಅನುಸರಿಸುವ ಬಗ್ಗೆ ಮಾತನಾಡಿದ್ದಾರೆ. ಈ ಪ್ರದೇಶದ ಹಿಂದುಳಿದವರಿಗಾಗಿ ಅವರು ಕೆಲಸ ಮಾಡುತ್ತಿದ್ದಾರೆ. ಡಿಸೆಂಬರ್ 23ರಂದು ತಮ್ಮ ನಾಮಪತ್ರವನ್ನು ಸಲ್ಲಿಸಿರುವ ಅವರು PPPಯ ಹಿರಿಯ ನಾಯಕತ್ವವು ಅವರ ಉಮೇದುವಾರಿಕೆಯನ್ನು ಅನುಮೋದಿಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಸವೀರಾ ಪ್ರಕಾಶ್ ವೈದ್ಯಕೀಯ ಹಿನ್ನೆಲೆ ಹೊಂದಿದ್ದು, “ಮಾನವೀಯತೆಗೆ ಸೇವೆ ಸಲ್ಲಿಸುವ ತಂದೆಯ ಬದ್ಧತೆ ನನ್ನ ರಕ್ತದಲ್ಲಿದೆ” ಎಂದಿದ್ದಾರೆ.
ಪಾಕಿಸ್ತಾನದ ಚುನಾವಣಾ ಆಯೋಗದ (ECP) ಇತ್ತೀಚಿನ ತಿದ್ದುಪಡಿಯ ಪ್ರಕಾರ ಸಾಮಾನ್ಯ ಸ್ಥಾನಗಳಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಶೇಕಡಾ ಐದರಷ್ಟು ಮೀಸಲು ಕಡ್ಡಾಯಗೊಳಿಸಿದೆ. ಬುನೆರ್ ಪಾಕಿಸ್ತಾನದೊಂದಿಗೆ ವಿಲೀನಗೊಂಡು 55 ವರ್ಷಗಳ ನಂತರ ಈ ಪ್ರದೇಶದಲ್ಲಿ ಚುನಾವಣೆಗೆ ಸ್ಪರ್ಧಿಸಲು ಮಹಿಳೆಯೊಬ್ಬರು ಮುಂದಾಗಿದ್ದಾರೆ.
ಇದನ್ನೂ ಓದಿ: Pakistan Cricket : ಭಾರತದ ಕ್ರಿಕೆಟ್ ಮಾದರಿಯನ್ನು ನಕಲು ಮಾಡಲು ಮುಂದಾದ ಪಾಕಿಸ್ತಾನ