Site icon Vistara News

Imran Khan: ವಿಷದ ಇಂಜೆಕ್ಷನ್​ ಕೊಡಬಹುದೆಂಬ ಭಯದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್​; ಪಾಕಿಸ್ತಾನ ರಣರಂಗ

Pakistan Ex Prime Minister Imran Khan fears for his Life in Prison

#image_title

ಪಾಕಿಸ್ತಾನದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್​ (Imran Khan) ಬಂಧನ ದೊಡ್ಡಮಟ್ಟದ ಗೊಂದಲ -ಗಲಾಟೆ ಸೃಷ್ಟಿ ಮಾಡಿದೆ. ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಮುಖ್ಯಸ್ಥರಾಗಿರುವ ಇಮ್ರಾನ್ ಖಾನ್ ಬಂಧನಕ್ಕೆ (Imran Khan Arrest) ಆ ಪಕ್ಷದ ಕಾರ್ಯಕರ್ತರು ರೊಚ್ಚಿಗೆದ್ದಿದ್ದಾರೆ. ಇಂದು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಅದೆಷ್ಟೋ ವಾಹನಗಳು ಸುಟ್ಟು ಭಸ್ಮವಾಗಿವೆ. ಪ್ರತಿಭಟನಾಕಾರರು ಹಸಿಮರಗಳಿಗೂ ಬಿಡದೆ ಬೆಂಕಿ ಹಚ್ಚುತ್ತಿದ್ದಾರೆ. 25 ಪೊಲೀಸ್ ವಾಹನಗಳನ್ನು ಸುಟ್ಟು ಹಾಕಿದ್ದಾರೆ. ಸರ್ಕಾರಿ ಕಚೇರಿಗಳು, ಶಾಲೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. 14ಕ್ಕೂ ಹೆಚ್ಚು ಸರ್ಕಾರಿ ಕಟ್ಟಡಗಳನ್ನು ಲೂಟಿ ಮಾಡಿದ್ದಾರೆ. ಪ್ರತಿಭಟನಾಕಾರರ ದಾಳಿಗೆ 130ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಪಿಟಿಐ ಪಕ್ಷದ ಪ್ರಧಾನ ಕಾರ್ಯದರ್ಶಿ ಸೇರಿ 954 ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಾಕಿಸ್ತಾನ ಗುಪ್ತಚರ ಇಲಾಖೆ ಕಚೇರಿ ಐಎಸ್​ಐ ಇರುವ ಹಾದಿಬೀದಿಯಂತೂ ರಣರಂಗವೇ ಆಗಿಹೋಗಿದೆ.

ಮಾಜಿ ಪ್ರಧಾನಿ ಇಮ್ರಾನ್ ಖಾನ್​ ಅವರು ತೋಷಖಾನಾ ಭ್ರಷ್ಟಾಚಾರ ಕೇಸ್​, ದಂಗೆಗೆ ಕುಮ್ಮಕ್ಕು, ಕೊಲೆ ಯತ್ನ ಮತ್ತಿತರ ಕೇಸ್​​ನಲ್ಲಿ ಆರೋಪಿಯಾಗಿ, ಪೊಲೀಸರಿಗೆ ಬೇಕಾಗಿದ್ದರು. ಮಾರ್ಚ್​ ತಿಂಗಳಲ್ಲಿ ಒಮ್ಮೆ ಅವರ ಬಂಧನಕ್ಕೆ ಪೊಲೀಸರು ಪ್ರಯತ್ನ ಮಾಡಿದ್ದರು. ಆದರೆ ಇಮ್ರಾನ್ ಖಾನ್ ಬೆಂಬಲಿಗರು ಆಗಲೂ ಕೂಡ ದೊಡ್ಡಮಟ್ಟದ ಹಿಂಸಾಚಾರ, ಪ್ರತಿಭಟನೆ ನಡೆಸಿದ್ದರು. ಅವರನ್ನು ನಿಯಂತ್ರಿಸಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಪೊಲೀಸರು ಇಮ್ರಾನ್​​ರನ್ನು ಬಂಧಿಸದೆ ವಾಪಸ್ ತೆರಳಿದ್ದರು. ಇನ್ನು ಇಮ್ರಾನ್ ಖಾನ್​ ಅವರು ತಮ್ಮ ವಿರುದ್ಧದ ಎಫ್​ಐಆರ್​ಗಳನ್ನು ರದ್ದುಗೊಳಿಸುವಂತೆ ಇಸ್ಲಮಾಬಾದ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆಗಾಗಿ ಮಂಗಳವಾರ ನ್ಯಾಯಾಲಯಕ್ಕೆ ಹೋದಾಗಲೇ ಅವರನ್ನು ಬಂಧಿಸಲಾಗಿದೆ. ಇಮ್ರಾನ್ ಖಾನ್ ಬಂಧನದ ಹೊತ್ತಲ್ಲೂ ದೊಡ್ಡಮಟ್ಟದ ಹೈಡ್ರಾಮಾವೇ ನಡೆದಿದೆ.

ಇದನ್ನೂ ಓದಿ: Imran Khan: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅರೆಸ್ಟ್​; ಹೈಕೋರ್ಟ್​ ಆವರಣದಲ್ಲೇ ಬಂಧನ

ಜೀವ ಹೋಗುವ ಭಯದಲ್ಲಿ ಇಮ್ರಾನ್ ಖಾನ್​
ಬಂಧಿತ ಇಮ್ರಾನ್ ಖಾನ್​ರನ್ನು ವಿಚಾರಣೆ ನಡೆಸಲು ಅಲ್ಲಿನ ನ್ಯಾಶನಲ್​ ಅಕೌಂಟೆಬಿಲಿಟಿ ಬ್ಯೂರೋ (NAB)ದ ಮೂವರು ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಆದರೆ ಈ ಮಧ್ಯೆ ಇಮ್ರಾನ್​ಖಾನ್​ ಅವರು ತಮ್ಮ ಜೀವಕ್ಕೆ ಅಪಾಯವಿದೆ ಎಂದು ಹೇಳಿದ್ದಾರೆ. ‘ನನಗೆ ಕಳೆದ 24ಗಂಟೆಯಿಂದ ವಾಶ್​ರೂಮ್​ಗೆ ಹೋಗಲು ಬಿಟ್ಟಿಲ್ಲ. ವಿಷದಇಂಜೆಕ್ಷನ್​ ಕೊಟ್ಟು ಕೊಂದರೂ ಕೊಲ್ಲಬಹುದು’ ಎಂದು ಇಮ್ರಾನ್ ಖಾನ್ ಅವರು ಕೋರ್ಟ್​​ನಲ್ಲಿ ಹೇಳಿಕೊಂಡಿದ್ದಾರೆ.

Exit mobile version