Site icon Vistara News

Pakistan Floods | ಮಳೆ, ಪ್ರವಾಹಕ್ಕೆ 343 ಮಕ್ಕಳು ಸೇರಿ 937 ಬಲಿ, ನೆರವಿಗೆ ಅಂಗಲಾಚಿದ ಪಾಕಿಸ್ತಾನ

vistara column

ಇಸ್ಲಾಮಾಬಾದ್: ನಮ್ಮ ನೆರೆಯ ಚೀನಾದ ಅರ್ಧ ಭಾಗವು ಬಿಸಿಲಿನ ಬೇಗೆ ಬೇಯುತ್ತಿದ್ದರೆ, ಮತ್ತೊಂದೆಡೆ ಪಾಕಿಸ್ತಾನದ ಅರ್ಧ ಭಾಗವು ಮಳೆಗೆ ನಲುಗಿದೆ. ಪಾಕಿನಲ್ಲಿ ಎಡಬಿಡದೇ ಸುರಿಯುತ್ತಿರುವ ಮಳೆಯಿಂದ ಉಂಟಾಗಿರುವ ಪ್ರವಾಹ(Pakistan Floods)ಕ್ಕೆ ಬಲಿಯಾದವರ ಸಂಖ್ಯೆ 937ಕ್ಕೆ ಏರಿಕೆಯಾಗಿದೆ. ಮೃತಪಟ್ಟವರಲ್ಲಿ 343 ಮಕ್ಕಳೂ ಇದ್ದಾರೆ. ಜತೆಗೆ, 3 ಕೋಟಿ ಜನರು ನಿರಾಶ್ರಿತರಾಗಿದ್ದಾರೆ. ನೈಸರ್ಗಿಕ ವಿಕೋಪದಿಂದ ತತ್ತರಿಸಿರುವ ಪಾಕಿಸ್ತಾನದಲ್ಲಿ ಸರ್ಕಾರವು ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.

ಮಳೆ ಮತ್ತು ಪ್ರವಾಹದಿಂದಾಗಿ ಪಾಕಿಸ್ತಾನದಲ್ಲಿ ಮೂರು ಕೋಟಿ ಜನರು ನಿರಾಶ್ರಿತರಾಗಿದ್ದು, ಅವರಿಗೆ ಕುಡಿಯಲು ಶುದ್ಧವಾದ ನೀರು ದೊರೆಯುತ್ತಿಲ್ಲ. ನೈಮರ್ಲೀಕರಣದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಮೃತಪಟ್ಟವರ ಸಂಖ್ಯೆ ಹೆಚ್ಚಿದೆ. ಪಾಕಿಸ್ತಾನದ ರಾಷ್ಟ್ರೀಯ ಪ್ರಕೃತಿ ವಿಕೋಪ ನಿರ್ವಹಣಾ ಪ್ರಾಧಿಕಾರ(ಎನ್‌ಡಿಎಂಎ) ಅವರ ಪ್ರಕಾರ, ಈ ಪ್ರಾಂತ್ಯದಲ್ಲಿ 306 ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ.

ಮತ್ತೊಂದೆಡೆ ಬಲೂಚಿಸ್ತಾನದಲ್ಲೂ ಸಾಕಷ್ಟು ಜನರು ಸಾವಿಗೀಡಾಗಿದ್ದಾರೆ. ಈ ಪ್ರಾಂತ್ಯದಲ್ಲಿ 234 ಜನರು ಪ್ರಾಣ ತೆತ್ತಿದ್ದಾರೆ. ಇದೇ ವೇಳೆ, ಖೈಬರ್ ಪಾಕ್-ತುನ್-ಕ್ವಾ ಮತ್ತು ಪಂಜಾಬ್ ಪ್ರಾಂತ್ಯದಲ್ಲಿ ಕ್ರಮವಾಗಿ 185 ಮತ್ತು 165 ಜನರು ಪ್ರವಾಹಕ್ಕೆ ಬಲಿಯಾಗಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 37, ಗಿಲ್ಗಿಟ್-ಬಾಲ್ಟಿಸ್ತಾನ್‌ ಪ್ರದೇಶದಲ್ಲಿ 9 ಜನರು ಸಾವಿಗೀಡಾಗಿದ್ದಾರೆ. ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಒಬ್ಬರು ಮೃತರಾಗಿದ್ದಾರೆ.

ದಾಖಲೆಯ ಮಳೆ
ಪಾಕಿಸ್ತಾನದಲ್ಲಿ ದಾಖಲೆಯ ಮಳೆಯಾಗಿದೆ. ಆಗಸ್ಟ್‌ ತಿಂಗಳಲ್ಲಿ ಈವರೆಗೆ 166.8 ಮಿಲಿ ಮೀಟರ್ ಮಳೆಯಾಗಿದೆ. ಅಂದರೆ, ಮಳೆಯಲ್ಲಿ ಶೇ.241ರಷ್ಟು ಏರಿಕೆಯಾಗಿದೆ. ಸಾಮಾನ್ಯವಾಗಿ ವಾಡಿಕೆಯಂತೆ 48 ಮಿ.ಮೀಟರ್ ಮಳೆಯಾಗುತ್ತಿತ್ತು. ಸಿಂಧ್ ಮತ್ತು ಬಲೋಚಿಸ್ತಾನ ಪ್ರದೇಶದಲ್ಲಿ ಕ್ರಮವಾಗಿ ಶೇ.784 ಮತ್ತು ಶೇ.496 ಮಳೆ ಹೆಚ್ಚಳವಾಗಿದೆ. ದಕ್ಷಿಣ ಪಾಕಿಸ್ತಾನವು ಸಂಪೂರ್ಣವಾಗಿ ಮಳೆಯಲ್ಲಿ ನೆನೆಯುತ್ತಿದೆ. ಈ ಭಾಗದ 23 ಜಿಲ್ಲೆಗಳಲ್ಲಿ ದಿಢೀರ್ ಪ್ರವಾಹ ಸೃಷ್ಟಿಯಾಗಿದೆ. ಸಿಂಧ್ ಪ್ರಾಂತ್ಯವನ್ನು ನೈಸರ್ಗಿಕ ವಿಕೋಪ ಪೀಡಿತ ರಾಜ್ಯವೆಂದ ಘೋಷಿಸಲಾಗಿದೆ. ಪ್ರವಾಹ ಪರಿಹಾರ ಕಾರ್ಯಾಚರಣೆಗೆ ವಾರ್ ರೂಂ ಕೂಡ ಸ್ಥಾಪಿಸಲಾಗಿದೆ.

ನೆರವಿಗೆ ಮನವಿ
ಪ್ರವಾಹದಿಂದ (Pakistan Floods) ತತ್ತರಿಸಿರುವ ಪಾಕಿಸ್ತಾನಕ್ಕೆ ನೆರವಿನ ಅಗತ್ಯವಿದೆ. ಬಲೂಚಿಸ್ತಾನವು ಒಂದು ಲಕ್ಷ ಟೆಂಟ್ ನೀಡುವಂತೆ ಮನವಿ ಮಾಡಿಕೊಂಡಿದೆ. ಪಾಕ್ ಸರ್ಕಾರವು ಈ ನಿಟ್ಟಿನಲ್ಲಿ ಕಾರ್ಯಗತವಾಗಿದೆ. ಮತ್ತೊಂದೆಡೆ, ಪಾಕಿಸ್ತಾನದ ವಾರ್ತಾ ಸಚಿವ ಔರಂಗಜೇಬ್ ಅವರು, ವಿದೇಶಗಳಲ್ಲಿ ನೆಲೆಸಿರುವ ಪಾಕಿಸ್ತಾನಿಗಳು ನೆರವು ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಪ್ರವಾಹಪೀಡಿತ ಪ್ರದೇಶಗಳ ನೆರವಿಗೆ ತಕ್ಷಣಕ್ಕೆ 72.36 ಶತಕೋಟಿ ಪಾಕಿಸ್ತಾನ ರೂಪಾಯಿ ಅಗತ್ಯವಿದೆ.

ಇದನ್ನೂ ಓದಿ | ಕಮರಿದ ಪೌರತ್ವದ ಕನಸು: ಪಾಕಿಸ್ತಾನಕ್ಕೆ ಮರಳಿದ 1500ಕ್ಕೂ ಅಧಿಕ ಹಿಂದುಗಳು

Exit mobile version