ಇಸ್ಲಾಮಾಬಾದ್: ತೋಷಾಖಾನಾ (ಖಜಾನೆ) ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರಿಗೆ ಮೂರು ವರ್ಷ ಜೈಲೇ ಗತಿಯಾಗಿದೆ. ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಇಸ್ಲಾಮಾಬಾದ್ ನ್ಯಾಯಾಲಯವು ಇಮ್ರಾನ್ ಖಾನ್ ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಕೋರ್ಟ್ ಆದೇಶದ ಬೆನ್ನಲ್ಲೇ ಲಾಹೋರ್‌ನಲ್ಲಿರುವ ಅವರ ನಿವಾಸದಲ್ಲಿ ಮಾಜಿ ಪ್ರಧಾನಿಯನ್ನು ಬಂಧಿಸಲಾಗಿದೆ.
ಇಮ್ರಾನ್ ಖಾನ್ ವಿರುದ್ಧ ದಾಖಲಾದ ಭ್ರಷ್ಟಾಚಾರ ಪ್ರಕರಣದ ವಿಚಾರಣೆ ನಡೆಸಿದ ಇಸ್ಲಾಮಾಬಾದ್ ನ್ಯಾಯಾಲಯವು, ಇಮ್ರಾನ್ ಖಾನ್ ಅವರನ್ನು ದೋಷಿ ಎಂದು ತೀರ್ಪು ನೀಡಿತು. ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸುವ ಜತೆಗೆ 1 ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದೆ. ಹಾಗೊಂದು ವೇಳೆ ಇಮ್ರಾನ್ ಖಾನ್ ಅವರು ದಂಡ ಪಾವತಿಸಲು ಸಾಧ್ಯವಾಗದಿದ್ದರೆ ಆರು ತಿಂಗಳು ಹೆಚ್ಚುವರಿಯಾಗಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಕೋರ್ಟ್ ತಿಳಿಸಿದೆ. ಅಷ್ಟೇ ಅಲ್ಲ, ಐದು ವರ್ಷ ಅವರನ್ನು ರಾಜಕೀಯದಿಂದ ಅನರ್ಹಗೊಳಿಸಲಾಗಿದೆ.
ಪಿಟಿಐ ಖಂಡನೆ
ಇಮ್ರಾನ್ ಖಾನ್ ಬಂಧನದ ಹಿನ್ನೆಲೆಯಲ್ಲಿ ಪಾಕಿಸ್ತಾನ-ತೆಹ್ರೀಕ್-ಎ-ಇನ್ಸಾಫ್ (PTI) ಪಕ್ಷವು ಖಂಡನೆ ವ್ಯಕ್ತಪಡಿಸಿದೆ. “ಇಮ್ರಾನ್ ಖಾನ್ ಅವರ ವಿರುದ್ಧ ಪಿತೂರಿ ಮಾಡಲಾಗಿದೆ. ಕಾನೂನಿನ ಕಣ್ಣಿಗೆ ಮಂಕುಬೂದಿ ಎರಚಿ ಮಾಜಿ ಪ್ರಧಾನಿಯನ್ನು ಬಂಧಿಸಿರುವುದು ಸರಿಯಲ್ಲ” ಎಂದು ಪಿಟಿಐ ಪ್ರಕಟಣೆ ಹೊರಡಿಸಿದೆ. ಇಮ್ರಾನ್ ಖಾನ್ ಅವರು ಪಿಟಿಐ ಮುಖ್ಯಸ್ಥರಾಗಿದ್ದಾರೆ.
ಇದನ್ನೂ ಓದಿ: Reham Khan Marriage | ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ 2ನೇ ಪತ್ನಿ ಆಗಿದ್ದ ರೆಹಮ್ ಖಾನ್‌ಗೆ 3ನೇ ಮದುವೆ
ಏನಿದು ಪ್ರಕರಣ?
ಇಮ್ರಾನ್ ಖಾನ್ ಅವರು ಪ್ರಧಾನಿಯಾಗಿದ್ದಾಗ ಪಾಕಿಸ್ತಾನದ ತೋಷಾಖಾನಾ (ಖಜಾನೆ)ಗೆ ಸೇರಬೇಕಾದ ಉಡುಗೊರೆಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಿದ ಪ್ರಕರಣ ಎದುರಿಸುತ್ತಿದ್ದಾರೆ. ಅವರ ವಿರುದ್ಧ ಕೋರ್ಟ್ ಜಾಮೀನು ರಹಿತ ಅರೆಸ್ಟ್ ವಾರಂಟ್ ಹೊರಡಿಸಿತ್ತು. ತೋಷಾಖಾನಾ ಎಂಬುದು ಇಲಾಖೆಯಾಗಿದ್ದು, ಪ್ರಧಾನಿ ಸೇರಿ ರಾಜಕಾರಣಿಗಳಿಗೆ ನೀಡುವ ಉಡುಗೊರೆಗಳನ್ನು ಖಜಾನೆಯಲ್ಲಿ ಸಂಗ್ರಹಿಸಿಡಲಾಗುತ್ತದೆ. ಹಾಗೆಯೇ, ಪಾಕಿಸ್ತಾನದ 30 ಸಾವಿರ ರೂ.ವರೆಗಿನ ಮೌಲ್ಯದ ಉಡುಗೊರೆಗಳನ್ನು ಪ್ರಧಾನಿಯೇ ಇಟ್ಟುಕೊಳ್ಳಬಹುದಾಗಿದೆ. ಆದರೆ, ಇಮ್ರಾನ್ ಖಾನ್ ಅವರು ದುಬಾರಿ ಉಡುಗೊರೆಗಳನ್ನು ಮಾರಾಟ ಮಾಡಿದ ಆರೋಪ ಹೊತ್ತಿದ್ದಾರೆ. ಅಷ್ಟೇ ಅಲ್ಲ, ಇಮ್ರಾನ್ ಖಾನ್ ವಿರುದ್ಧ ಪಾಕಿಸ್ತಾನದಾದ್ಯಂತ 37 ಪ್ರಕರಣಗಳು ದಾಖಲಾಗಿವೆ. ಇವುಗಳ ತನಿಖೆಯೂ ನಡೆಯುತ್ತಿದೆ.