ಪಾಕಿಸ್ತಾನ ಮಾಜಿ ಪ್ರಧಾನಿ, ಮಾಜಿ ಕ್ರಿಕೆಟರ್ ಇಮ್ರಾನ್ ಖಾನ್ (Imran Khan) ಅವರನ್ನು ಇಸ್ಲಮಾಬಾದ್ನ ಹೈಕೋರ್ಟ್ ಆವರಣದಲ್ಲಿಯೇ ಬಂಧಿಸಿದ್ದಾಗಿ (Imran Khan Arrested) ಪಾಕ್ನ ಮಾಧ್ಯಮಗಳು ವರದಿ ಮಾಡಿವೆ. ತೋಷಖಾನಾ ಭ್ರಷ್ಟಾಚಾರ ಕೇಸ್ನಲ್ಲಿ ಇಮ್ರಾನ್ ಖಾನ್ ಅವರು ಸಿಲುಕಿದ್ದಾರೆ. ಅಂದರೆ ಇವರು ಪಾಕಿಸ್ತಾನದಲ್ಲಿ ಪ್ರಧಾನಮಂತ್ರಿಯಾಗಿದ್ದಾಗ ಗಣ್ಯರಿಂದ ಪಡೆದಿದ್ದ ಉಡುಗೊರೆಯನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಮಾರ್ಚ್ ತಿಂಗಳಲ್ಲಿ ಇಮ್ರಾನ್ ಖಾನ್ರನ್ನು ಬಂಧಿಸಲು ಅವರ ಮನೆ ಬಳಿಯೇ ಪೊಲೀಸರು ಆಗಮಿಸಿದ್ದರು. ಆದರೆ ಅವರ ಬೆಂಬಲಿಗರು, ತೆಹ್ರೀಕ್ ಇ ಇನ್ಸಾಫ್ ಪಾರ್ಟಿಯ ಕಾರ್ಯಕರ್ತರು ದೊಡ್ಡಮಟ್ಟದ ಪ್ರತಿಭಟನೆ-ಹಿಂಸಾಚಾರ ನಡೆಸಿದ್ದರು. ಕೊನೆಗೂ ಅವರ ಬಂಧನ ಸಾಧ್ಯವಾಗದೆ ಪೊಲೀಸರು ವಾಪಸ್ ಹೋಗಿದ್ದರು.
ಇಮ್ರಾನ್ ಖಾನ್ ಅವರು ಭ್ರಷ್ಟಾಚಾರ, ದಂಗೆಗೆ ಕುಮ್ಮಕ್ಕು, ಕೊಲೆ ಯತ್ನ ಸೇರಿ ವಿವಿಧ ಕೇಸ್ನಲ್ಲಿ ತಮ್ಮ ವಿರುದ್ಧ ದಾಖಲಾದ ಹಲವು ಎಫ್ಐಆರ್ಗಳನ್ನು ರದ್ದುಗೊಳಿಸಬೇಕು ಎಂಬ ಬಗ್ಗೆ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಈ ಬಗ್ಗೆ ಇಸ್ಲಮಾಬಾದ್ ಹೈಕೋರ್ಟ್ನಲ್ಲಿ ಅವರು ಅರ್ಜಿಯನ್ನು ಸಲ್ಲಿಸಿದ್ದರು. ಅದರಲ್ಲಿ ದಂಗೆಗೆ ಕುಮ್ಮಕ್ಕು ಮತ್ತು ಕೊಲೆಯತ್ನಕ್ಕೆ ಸಂಬಂಧಪಟ್ಟ ಅರ್ಜಿಯ ವಿಚಾರಣೆಗಾಗಿ ಇಂದು ಇಸ್ಲಮಾಬಾದ್ ಹೈಕೋರ್ಟ್ಗೆ ಅವರು ಆಗಮಿಸಿದ್ದರು. ಆದರೆ ಅಲ್ಲಿಯೇ ಪಾಕಿಸ್ತಾನದ ರೇಂಜರ್ಸ್ ಅವರನ್ನು ಬಂಧಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ತಿಳಿಸಿದ ತೆಹ್ರೀಕ್ ಇ ಇನ್ಸಾಫ್ ಪಾರ್ಟಿ ನಾಯಕ ಫಾವದ್ ಚೌಧರಿ ಅವರು ‘ಇಂದು ಇಮ್ರಾನ್ ಖಾನ್ ವಿಚಾರಣೆಗೆ ಹೋದ ಸಂದರ್ಭದಲ್ಲಿ ಅಲ್ಲಿ ಇಡೀ ನ್ಯಾಯಾಲಯವನ್ನು ರೇಂಜರ್ಸ್ ಸುತ್ತುವರಿದಿದ್ದರು. ಇಮ್ರಾನ್ ಖಾನ್ ಕಾರು ತಲುಪುತ್ತಿದ್ದಂತೆ ಅವರನ್ನು ಸುತ್ತುಗಟ್ಟಿದ್ದರು’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Imran Khan: ಇಮ್ರಾನ್ ಖಾನ್‌ಗೆ ತಾತ್ಕಾಲಿಕ ರಿಲೀಫ್, ಗುರುವಾರದವರೆಗೆ ಬಂಧನಕ್ಕೆ ತಡೆ
2018ರಿಂದ 2022ರವರೆಗೆ ಪಾಕಿಸ್ತಾನದ ಪ್ರಧಾನಿಯಾಗಿದ್ದ ಇಮ್ರಾನ್ ಖಾನ್ ಅವರು, 2022ರ ಏಪ್ರಿಲ್ನಲ್ಲಿ ಹುದ್ದೆ ಕಳೆದುಕೊಂಡಿದ್ದಾರೆ. ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಯಾಗಿದ್ದೇ ಹುದ್ದೆ ಬಿಟ್ಟು ಇಳಿಯಲು ಕಾರಣವಾಯಿತು. ತಾನು ಅಧಿಕಾರದಲ್ಲಿ ಇದ್ದಾಗ ರಷ್ಯಾ, ಚೀನಾ, ಅಫ್ಘಾನಿಸ್ತಾನಕ್ಕೆ ಸಂಬಂಧಪಟ್ಟಂತೆ ಸ್ವತಂತ್ರ ವಿದೇಶಾಂಗ ನೀತಿಯನ್ನು ಅನ್ವಯ ಮಾಡಿಕೊಂಡಿದ್ದೆ. ಇದರಿಂದ ಅಮೆರಿಕ ಅತ್ಯಂತ ಕ್ರೋಧಗೊಂಡಿತ್ತು. ನಾನು ಪ್ರಧಾನಿ ಹುದ್ದೆ ಕಳೆದುಕೊಳ್ಳಲು ಯುಎಸ್ ಪ್ರೇರಿತ ಪಿತೂರಿಯೇ ಕಾರಣ ಎಂದು ಅವರು ಆರೋಪಿಸಿದ್ದರು.