ಇಸ್ಲಾಮಾಬಾದ್: ಪಾಕಿಸ್ತಾನವು ಆರ್ಥಿಕ ಅರಾಜಕತೆಯತ್ತ ಸಾಗುತ್ತಿದೆ. ಶ್ರೀಲಂಕಾಗೆ ಬಂದ ಸ್ಥಿತಿಯೇ ಪಾಕಿಸ್ತಾನಕ್ಕೂ ಬಂದೊದಗುವ ದಿನಗಳು ದೂರ ಇಲ್ಲ ಎನ್ನಲಾಗುತ್ತಿದೆ. ಉಗ್ರ ಪೋಷಣೆ, ಅಸಮರ್ಥ ನಾಯಕತ್ವದಿಂದ ವಿತ್ತೀಯ ಬಿಕ್ಕಟ್ಟಿಗೆ ಸಿಲುಕಿರುವ ನೆರೆ ರಾಷ್ಟ್ರದಲ್ಲಿ ದಿನೇದಿನೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ, ಪಾಕಿಸ್ತಾನ ಸರ್ಕಾರವು ಒಂದೇ ದಿನ ಲೀಟರ್ ಪೆಟ್ರೋಲ್ (Pakistan Petrol Price) ಹಾಗೂ ಡೀಸೆಲ್ ಬೆಲೆಯನ್ನು 35 ರೂ. (ಪಾಕಿಸ್ತಾನದ ರೂಪಾಯಿ) ಏರಿಕೆ ಮಾಡಿದೆ. ಇದು ಜನರ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇದನ್ನೂ ಓದಿ: Pakistan: ಕಾಶ್ಮೀರ ಮರೆತು, ಭಾರತದ ಜತೆ ಸ್ನೇಹ ಸಂಪಾದಿಸಿ ಎಂದ ಸೌದಿ ಅರೆಬಿಯಾ; ಪಾಕಿಸ್ತಾನಕ್ಕೆ ಮುಖಭಂಗ
ಈಗಾಗಲೇ ದಿನಬಳಕೆ ವಸ್ತುಗಳ ಬೆಲೆಯೇರಿಕೆಯಿಂದ ಕಂಗೆಟ್ಟಿರುವ ಪಾಕಿಸ್ತಾನದ ನಾಗರಿಕರು ಈಗ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನೂ ಏರಿಕೆ ಮಾಡಿದ ಕಾರಣ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜನವರಿ 29ರ ಬೆಳಗ್ಗೆ 11 ಗಂಟೆಯಿಂದಲೇ ನೂತನ ದರ ಅನ್ವಯವಾಗಿದೆ. ಇದರಿಂದ ಪೆಟ್ರೋಲ್ ಬೆಲೆ ಲೀಟರ್‌ಗೆ 249.80 ರೂ. ಹಾಗೂ ಡೀಸೆಲ್ ಬೆಲೆ 262.80 ರೂ. ಆಗಿದೆ.
ಇದೇ ಕನಿಷ್ಠ ಏರಿಕೆ ಎಂದ ಸಚಿವ
ಏಕಾಏಕಿ ಇಂಧನ ಬೆಲೆಯೇರಿಕೆ ಕುರಿತು ಜನ ಆಕ್ರೋಶ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಬೆಲೆಯೇರಿಕೆ ಕುರಿತು ಪಾಕಿಸ್ತಾನ ಹಣಕಾಸು ಸಚಿವ ಇಶಾಕ್ ದರ್ ಪ್ರತಿಕ್ರಿಯಿಸಿದ್ದು, “ಇದೇ ಕನಿಷ್ಠ ಏರಿಕೆ” ಎಂದಿದ್ದಾರೆ. “ಕಚ್ಚಾತೈಲದ ಬೆಲೆಯು ಲೀಟರ್‌ಗೆ 18 ರೂ. ಏರಿಕೆಯಾಗಿದೆ. ಹಾಗಾಗಿ, ಸರ್ಕಾರ ಬೆಲೆಯೇರಿಕೆ ಮಾಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ, ಪಾಕಿಸ್ತಾನದ ರೂಪಾಯಿ ಮೌಲ್ಯ ಕುಸಿತವನ್ನು ಗಮನಿಸಿದರೆ, ಇದೇ ಕನಿಷ್ಠ ಬೆಲೆಯೇರಿಕೆ” ಎಂದು ಸ್ಪಷ್ಟನೆ ನೀಡಿದ್ದಾರೆ.