Site icon Vistara News

Amrit Mahotsav | ತಾಯ್ನಾಡನ್ನು ತೆಗಳಿ ಭಾರತವನ್ನು ಹೊಗಳಿದ ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್!

PM Imran Khan

ಇಸ್ಲಾಮಾಬಾದ್:‌ ಭಾರತ (Amrit Mahotsav) ಹಾಗೂ ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿವೆ. ಉಭಯ ದೇಶಗಳಲ್ಲೂ ಬ್ರಿಟಿಷರಿಂದ ಮುಕ್ತಿ ಪಡೆದು, ಮುಂದೆ ಸಾಗುತ್ತಿರುವ ಸಾರ್ಥಕ್ಯವಿದೆ. ಇಂತಹ ಸಂಭ್ರಮದ ಹೊತ್ತಿನಲ್ಲಿಯೇ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ (Imran Khan) ಅವರು ತಮ್ಮ ದೇಶದ ನೀತಿಯನ್ನು ತೆಗಳಿ ಮಾತ್ರ ಭಾರತದ ವಿದೇಶಾಂಗ ನೀತಿಯನ್ನು ಕೊಂಡಾಡಿದ್ದಾರೆ. ಅಲ್ಲದೆ, ತಮ್ಮ ಪಕ್ಷ ಪಾಕಿಸ್ತಾನ ತೆಹ್ರೀಕ್-ಎ-ಇನ್ಸಾಫ್‌ (ಪಿಟಿಐ) ಬೃಹತ್‌ ಸಮಾವೇಶದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಅವರು ಭಾಷಣದ ವಿಡಿಯೊ ಪ್ಲೇ ಮಾಡಿದ್ದಾರೆ.

“ಭಾರತ ಹಾಗೂ ಪಾಕಿಸ್ತಾನವು ಏಕಕಾಲಕ್ಕೆ ಸ್ವಾತಂತ್ರ್ಯ ಗಳಿಸಿವೆ. ಆದರೆ, ಭಾರತದ ವಿದೇಶಾಂಗ ನೀತಿಯು ಬಲಿಷ್ಠವಾಗಿದೆ. ಅವರು ಯಾವ ಕಠಿಣ ನಿರ್ಧಾರ ಬೇಕಾದರೂ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಪಾಕಿಸ್ತಾನ ಮಾತ್ರ ಇಂತಹ ಸಾಮರ್ಥ್ಯ ಗಳಿಸಿಕೊಳ್ಳುವಲ್ಲಿ ಹಿಂದುಳಿದಿದೆ” ಎಂದು ಹೇಳಿದ್ದಾರೆ.

“ಭಾರತ ಮನಸ್ಸು ಮಾಡಿದರೆ ಬೇರೆ ದೇಶಗಳ ಮರ್ಜಿಯನ್ನು ಲೆಕ್ಕಿಸದೆ ರಷ್ಯಾದಿಂದ ಕಡಿಮೆ ಬೆಲೆಗೆ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಬಹುದು. ಅಷ್ಟು ಮಾತ್ರವಲ್ಲ, ಇಂತಹ ನಿರ್ಧಾರ ತೆಗೆದುಕೊಂಡೂ ಅಮೆರಿಕ ಜತೆ ಉತ್ತಮ ಬಾಂಧವ್ಯ ಮುಂದುವರಿಸಬಹುದು. ನಾವು ಮಾತ್ರ ಇಂತಹ ಬಲಿಷ್ಠ ವಿದೇಶಾಂಗ ನೀತಿಯನ್ನು ಹೊಂದಿಲ್ಲ,ʼʼ ಎಂದಿದ್ದಾರೆ. ಇದಲ್ಲದೆ, “ರಷ್ಯಾದಿಂದ ಭಾರತವು ಕಚ್ಚಾ ತೈಲ ಆಮದು ಮಾಡಿಕೊಳ್ಳಬಾರದು ಎಂಬುದಾಗಿ ಅಮೆರಿಕ ಹೇಳಿದಾಗ ಎಸ್.ಜೈಶಂಕರ್‌ ಹೇಗೆ ಪ್ರತಿಕ್ರಿಯಿಸಿದರು ಎಂಬುದನ್ನು ನೋಡಿ” ಎಂದು ಹೇಳುತ್ತ ಜೈಶಂಕರ್‌ ಭಾಷಣದ ವಿಡಿಯೊ ಪ್ಲೇ ಮಾಡಿದ್ದಾರೆ.

ಕೆಲವು ತಿಂಗಳ ಹಿಂದೆ ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಆರಂಭಿಸಿದಾಗ ಜಗತ್ತಿನ ಬಹುತೇಕ ರಾಷ್ಟ್ರಗಳು ರಷ್ಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದವು. ಇದೇ ವೇಳೆ ಭಾರತವು ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳಲು ಮುಂದಾದಾಗ ಅಮೆರಿಕ ಸೇರಿ ವಿವಿಧ ರಾಷ್ಟ್ರಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಇದನ್ನು ಲೆಕ್ಕಿಸದ ಕೇಂದ್ರ ಸರಕಾರವು ಕಚ್ಚಾ ತೈಲ ಆಮದು ಮಾಡಿಕೊಂಡಿತ್ತು. ಇದರ ಕುರಿತು ಈಗಾಗಲೇ ಕೆಲವು ಬಾರಿ ಇಮ್ರಾನ್‌ ಖಾನ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | ಪಾಕ್‌ನಲ್ಲಿ ಇಮ್ರಾನ್‌ ಖಾನ್‌ ಬಲಪ್ರದರ್ಶನ; ಸರ್ಕಾರಕ್ಕೆ 6 ದಿನಗಳ ಗಡುವು

Exit mobile version