ಭೂಕಂಪ ಪೀಡಿತ ಟರ್ಕಿಗೆ ವಿಶ್ವದ ಹಲವು ದೇಶಗಳು ಸಹಾಯಹಸ್ತ ಚಾಚಿವೆ. ಆಹಾರ, ವೈದ್ಯಕೀಯ ನೆರವು ಸೇರಿ ಹಲವು ಅಗತ್ಯ ವಸ್ತುಗಳನ್ನು ಟರ್ಕಿಗೆ ಕಳಿಸಲಾಗುತ್ತಿದೆ. ಭಾರತವಂತೂ ಅಲ್ಲಿಗೆ ಅಗತ್ಯ ಪರಿಹಾರ ಸಾಮಗ್ರಿಗಳನ್ನು ಕಳಿಸುವ ಜತೆ, ರಕ್ಷಣಾ ಕಾರ್ಯಾಚರಣೆ ಸೇನಾ ಸಿಬ್ಬಂದಿಯನ್ನೂ ಕಳಿಸಿತ್ತು. ಈ ಮಧ್ಯೆ ಪಾಕಿಸ್ತಾನ ಕೂಡ C-130 ವಿಮಾನವನ್ನು ಕಳಿಸಿ, ಅದರ ತುಂಬ ಪರಿಹಾರ ಸಾಮಗ್ರಿಗಳನ್ನು ಕಳಿಸಿತ್ತು. ಜತೆಗೆ, ಪಾಕ್ನಿಂದಲೂ ರಕ್ಷಣಾ ಸಿಬ್ಬಂದಿಯ ತಂಡವೊಂದು ಟರ್ಕಿಗೆ ತೆರಳಿತ್ತು.
ಆದರೆ, ಟರ್ಕಿಗೆ ಪಾಕಿಸ್ತಾನ ಕಳಿಸಿದ್ದ ಪರಿಹಾರ ಸಾಮಗ್ರಿಗಳ ಬಗ್ಗೆ ಪಾಕ್ನ ಪತ್ರಕರ್ತ ಶಾಹೀದ್ ಮಸೂದ್ ಅವರು ಹೊಸ ವಿಷಯವೊಂದನ್ನು ಹೇಳಿದ್ದಾರೆ. 2022ರಲ್ಲಿ ಪಾಕಿಸ್ತಾನದಲ್ಲಿ ಭೀಕರ ಪ್ರವಾಹ ಉಂಟಾದ ಸಂದರ್ಭದಲ್ಲಿ ಟರ್ಕಿ ಕಳಿಸಿದ್ದ ಪರಿಹಾರ ಸಾಮಗ್ರಿಗಳನ್ನೇ ಈಗ ಪಾಕಿಸ್ತಾನ ಟರ್ಕಿಗೆ ವಾಪಸ್ ಕಳಿಸಿದೆ. ಸಾಮಗ್ರಿಗಳ ಬಾಕ್ಸ್ಗಳನ್ನು ಮಾತ್ರ ಬದಲಿಸಿದೆ. ಅದರ ಮೇಲೆ ‘ಭೂಕಂಪ ಪೀಡಿತ ಟರ್ಕಿಗೆ, ಪಾಕಿಸ್ತಾನ ಕಳಿಸುತ್ತಿರುವ ನೆರವು’ ಎಂದು ಬರೆದಿದೆ. ಆದರೆ ಒಳಗಿನ ಸಾಮಗ್ರಿಗಳು ಯಾವವೂ ಪಾಕಿಸ್ತಾನದ್ದಲ್ಲ. ಟರ್ಕಿಯಿಂದ ಪಡೆದಿದ್ದನ್ನೇ, ಆ ದೇಶಕ್ಕೆ ವಾಪಸ್ ಕೊಡಲಾಗಿದೆ ಎಂದು ಪತ್ರಕರ್ತ ಹೇಳಿದ್ದಾರೆ.
ಇದನ್ನೂ ಓದಿ: ಟರ್ಕಿಗೆ ರಕ್ಷಣಾ ಕಾರ್ಯಾಚರಣೆಗೆ ತೆರಳಿದ್ದ ಭಾರತೀಯ ಸೇನೆ ಸೈನಿಕನಿಗೆ ಸಿಕ್ತು ಗುಡ್ನ್ಯೂಸ್; ಫೋಟೋ ನೋಡಿ ಯೋಧ ಭಾವುಕ
ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಅವರು ಗುರುವಾರ ಮತ್ತು ಶುಕ್ರವಾರ ಟರ್ಕಿ ಪ್ರವಾಸ ಹಮ್ಮಿಕೊಂಡಿದ್ದರು. ಟರ್ಕಿ ಸಹೋದರ-ಸಹೋದರಿಯ ನೋವಿನಲ್ಲಿ ನಾವು ಇದ್ದೇವೆ. ಅವರಿಗೆ ನೆರವು ಒದಗಿಸಲು ನಾವು ಸಿದ್ಧ’ ಎಂದು ಹೇಳಿದ್ದರು. ಆದರೆ ಅದೇ ಸಮಯದಲ್ಲಿ ಈ ಪರಿಹಾರ ಸಾಮಗ್ರಿ ವಿಷಯ ದೊಡ್ಡದಾಗಿ ಪಾಕಿಸ್ತಾನಕ್ಕೆ ಮುಜುಗರ ತಂದೊಡ್ಡಿದೆ. ಪಾಕಿಸ್ತಾನದಲ್ಲಿ 2022ರ ಜೂನ್ ತಿಂಗಳಲ್ಲಿ ದೊಡ್ಡಮಟ್ಟದಲ್ಲಿ ಪ್ರವಾಹ ಉಂಟಾಗಿತ್ತು, ಸಾವಿರಕ್ಕೂ ಅಧಿಕ ಜನರ ಸಾವಾಗಿತ್ತು. ಆಗಲೂ ಕೂಡ ವಿವಿಧ ದೇಶಗಳು ಅಲ್ಲಿಗೆ ನೆರವು ಕಳಿಸಿದ್ದವು.