Site icon Vistara News

Rahat Fateh Ali Khan: ದುಬೈನಲ್ಲಿ ಪಾಕಿಸ್ತಾನದ ಗಾಯಕನ ಬಂಧನ; ಎಸಗಿದ ಕೃತ್ಯವೇನು?

Rahat Fateh Ali Khan

Pakistan Singer Rahat Fateh Ali Khan Arrested In Dubai In Defamation Case

ದುಬೈ: ಪಾಕಿಸ್ತಾನದ ಖ್ಯಾತ ಗಾಯಕ ರಾಹತ್‌ ಫತೇಹ್‌ ಅಲಿ ಖಾನ್ (Rahat Fateh Ali Khan) ಅವರನ್ನು ದುಬೈನಲ್ಲಿ ಬಂಧಿಸಲಾಗಿದೆ. ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ದುಬೈನಲ್ಲಿ ಇವರನ್ನು ಬಂಧಿಸಲಾಗಿದೆ. ರಾಹತ್‌ ಫತೇಹ್‌ ಅಲಿ ಖಾನ್‌ ಅವರ ಮಾಜಿ ಮ್ಯಾನೇಜರ್‌ ಸಲ್ಮಾನ್‌ ಅಹ್ಮದ್‌ (Salman Ahmed) ಅವರು ನೀಡಿದ ಮಾನಹಾನಿ ದೂರಿನ (Defamation Case) ಮೇರೆಗೆ ಗಾಯಕನನ್ನು ಬಂಧಿಸಲಾಗಿದೆ ಎಂದು ಪಾಕಿಸ್ತಾನದ ಜಿಯೋ ನ್ಯೂಸ್‌ ವರದಿ ಮಾಡಿದೆ. ಆದರೆ, ಬಂಧನದ ಸುದ್ದಿಯನ್ನು ರಾಹತ್‌ ಫತೇಹ್‌ ಅಲಿ ಖಾನ್‌ ನಿರಾಕರಿಸಿದ್ದಾರೆ.

“ಸಲ್ಮಾನ್‌ ಅಹ್ಮದ್‌ ಅವರು ದುಬೈ ಅಧಿಕಾರಿಗಳಿಗೆ ಗಾಯಕನ ವಿರುದ್ಧ ದೂರು ನೀಡಿದ್ದಾರೆ. ಮಾನಹಾನಿ ಕೇಸ್‌ ದಾಖಲಿಸಿದ್ದರು. ಬಂಧನದ ಬಳಿಕ ಗಾಯಕನನ್ನು ಬುರ್ಜ್‌ ದುಬೈ ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ” ಎಂಬ ವರದಿಗಳು ಕೇಳಿಬಂದಿದ್ದವು. ಇದು ಜಾಗತಿಕ ಮಟ್ಟದಲ್ಲಿ ಖ್ಯಾತ ಗಾಯಕನಿಗೆ ಆದ ಅವಮಾನ ಎಂದೆಲ್ಲ ಹೇಳಲಾಗಿತ್ತು.

ರಾಹತ್‌ ಫತೇಹ್‌ ಅಲಿ ಖಾನ್‌ ಹೇಳುವುದೇನು?

ಬಂಧನದ ವರದಿಗಳು ಹರಿದಾಡುತ್ತಲೇ ರಾಹತ್‌ ಫತೇಹ್‌ ಅಲಿ ಖಾನ್ ಅವರು ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಪೋಸ್ಟ್‌ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. “ನಾನು ದುಬೈಗೆ ನನ್ನ ಹಾಡುಗಳನ್ನು ರೆಕಾರ್ಡ್‌ ಮಾಡಲು ಬಂದಿದ್ದೇನೆ. ಹಾಡುಗಳ ಕುರಿತು ನನ್ನ ಕೆಲಸ ಅದ್ಭುತವಾಗಿ ಸಾಗುತ್ತಿದೆ. ಇಲ್ಲಿ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ. ಯಾರೂ ವದಂತಿಗಳಿಗೆ ಕಿವಿ ಕೊಡಬೇಡಿ” ಎಂಬುದಾಗಿ ಅಭಿಮಾನಿಗಳಿಗೆ ರಾಹತ್‌ ಫತೇಹ್‌ ಅಲಿ ಖಾನ್‌ ಅವರು ವಿಡಿಯೊ ಮೂಲಕ ಮನವಿ ಮಾಡಿದ್ದಾರೆ.

“ನನ್ನ ಅಭಿಮಾನಿಗಳು ಯಾವುದೇ ಕಾರಣಕ್ಕೂ ವದಂತಿಗಳಿಗೆ ಕಿವಿ ಕೊಡಬಾರದು. ಕೆಲವೇ ದಿನಗಳಲ್ಲಿ ಜಗತ್ತಿನಾದ್ಯಂತ ಸೂಪರ್‌ ಹಿಟ್‌ ಆಗಲಿರುವ ಹಾಡಿಗಾಗಿ ಇಲ್ಲಿಗೆ ಬಂದಿದ್ದೇನೆ. ಯಾರೂ ಸುಳ್ಳು ಸುದ್ದಿಗಳನ್ನು ನಂಬಬಾರದು. ಹಾಗೆಯೇ, ನನ್ನ ವೈರಿಗಳು ಹರಡುವ ಇಂತಹ ಸುದ್ದಿಗಳನ್ನು ನಂಬಿ ನಿಮ್ಮ ಸಮಯವನ್ನು ಕೂಡ ಹಾಳು ಮಾಡಿಕೊಳ್ಳದಿರಿ. ನೀವೇ ನನ್ನ ಶಕ್ತಿ. ನನ್ನ ಕೇಳುಗರು ಹಾಗೂ ಅಭಿಮಾನಿಗಳೇ ನನ್ನ ಸಾಮರ್ಥ್ಯ. ಲವ್‌ ಯು ಆಲ್”‌ ಎಂದು ಪಾಕ್‌ ಗಾಯಕ ಹೇಳಿದ್ದಾರೆ.

ಇದನ್ನೂ ಓದಿ: Khalistani Terrorist: ಖಲಿಸ್ತಾನಿ ಭಯೋತ್ಪಾದಕ ಲಾಂಡಾನ ಪ್ರಮುಖ ಸಹಾಯಕ ಬಲ್ಜೀತ್ ಸಿಂಗ್ ಬಂಧನ

Exit mobile version