Site icon Vistara News

Pakistan Stampede: ಪಾಕಿಸ್ತಾನದಲ್ಲಿ ಆಹಾರಕ್ಕೆ ಹಾಹಾಕಾರ; ರೇಷನ್​ ವಿತರಣೆ ವೇಳೆ ಕಾಲ್ತುಳಿತವಾಗಿ 11 ಜನರ ಸಾವು

Pakistan Stampede 11 Killed In Karachi

#image_title

ಪಾಕಿಸ್ತಾನದಲ್ಲಿ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಪಡಿತರಗಳನ್ನು, ಆಹಾರ ಪದಾರ್ಥಗಳನ್ನು ಪಡೆಯಲು ಜನರ ನೂಕುನುಗ್ಗಲು ಹೆಚ್ಚುತ್ತಿದೆ. ಇದು ಕಾಲ್ತುಳಿತಕ್ಕೂ ಕಾರಣವಾಗುತ್ತಿದೆ. ಕರಾಚಿಯ ಸೀಮೆನ್ಸ್ ಚೌರಂಗಿ ಎಂಬಲ್ಲಿನ ಕಾರ್ಖಾನೆಯೊಂದರಲ್ಲಿ ಶುಕ್ರವಾರ ಸ್ಥಳೀಯರಿಗಾಗಿ ರೇಷನ್​ (ಪಡಿತರ) ವಿತರಣೆ ಮಾಡಲಾಗುತ್ತಿತ್ತು. ಈ ವೇಳೆ ನೂಕುನುಗ್ಗಲು ಮಿತಿಮೀರಿ, ಕಾಲ್ತುಳಿತ (Pakistan Stampede) ಉಂಟಾಗಿ 11 ಮಂದಿ ಮೃತಪಟ್ಟಿದ್ದಾರೆ. ಹೀಗೆ ಸತ್ತವರಲ್ಲಿ ಐವರು ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ನಮ್ಮಲ್ಲಿ ಹಣವೇ ಇಲ್ಲವೆಂದು ಪಾಕಿಸ್ತಾನ ಸರ್ಕಾರ ಕೈಚೆಲ್ಲಿ ಕುಳಿತಿದೆ. ಶ್ರೀಮಂತರು ಹೇಗೋ ಜೀವನ ನಡೆಸುತ್ತಿದ್ದು, ಬಡಬಗ್ಗರು ಹೊಟ್ಟೆಗಿಲ್ಲದೆ ಪಡಿಪಾಟಲು ಪಡುತ್ತಿದ್ದಾರೆ. ಹೀಗಿರುವ ಶ್ರೀಮಂತ ವರ್ಗದ ಮುಸ್ಲಿಮರು ಅಲ್ಲಲ್ಲಿ ಝಕಾತ್ ನಡೆಸುತ್ತಿದ್ದಾರೆ. ಈ ಝಕಾತ್​ ಎಂಬುದನ್ನು ಇಸ್ಲಾಂನ ಬಹುಮುಖ್ಯ ಅಂಶ ಎಂದು ಪರಿಗಣಿಸಲಾಗುತ್ತದೆ. ಅಂದರೆ ದಾನ ಮಾಡುವುದು. ಇಸ್ಲಾಂನಲ್ಲಿರುವ ಶ್ರೀಮಂತರು, ಉಳ್ಳವರು ತಾವು ಗಳಿಸುವ ಆದಾಯವನ್ನು ಬಡಬಗ್ಗರಿಗೆ ನೀಡಬೇಕು. ಆಹಾರ ರೂಪದಲ್ಲಿಯಾದರೂ/ಹಣದ ರೂಪದಲ್ಲಿಯಾದರೂ ಅಥವಾ ಇನ್ಯಾವುದೇ ಸ್ವರೂಪದಲ್ಲಾದರೂ ಸರಿ ದಾನ ಮಾಡಬೇಕು. ಈ ಮೂಲಕ ಬಡವರ ಅವಶ್ಯಕತೆ ಪೂರೈಸಬೇಕು ಎಂಬುದೇ ಈ ಝಕಾತ್​. ಈಗ ಪಾಕಿಸ್ತಾನದಲ್ಲಿ ಶ್ರೀಮಂತ ವರ್ಗದ ಮಂದಿ ಹೀಗೆ ಝಕಾತ್ ಮೂಲಕ ಬಡವರ ಹೊಟ್ಟೆ ತುಂಬಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ ಅಲ್ಲಿ ಅವಘಡಗಳೇ ಸೃಷ್ಟಿಯಾಗುತ್ತಿವೆ.

ಈ ಕಾರ್ಖಾನೆಯಲ್ಲಿ ಶುಕ್ರವಾರ ರೇಷನ್​ ನೀಡಲಾಗುತ್ತಿತ್ತು. ಅದಕ್ಕಾಗಿ ಸಾವಿರಾರು ಜನರು ಅಲ್ಲಿ ಸೇರಿದ್ದರು. ಕಾಲ್ತುಳಿತವಾಗಿ ಅವ್ಯವಸ್ಥೆ ಸೃಷ್ಟಿಯಾಯಿತು. ಆದರೆ ಹೀಗೆ ಕಾಲ್ತುಳಿತವಾಗಿದೆ ಎಂದು ಹೇಳಿದರೆ ರಕ್ಷಣಾ ತಂಡಗಳು ಬೇಗ ಬರುವುದಿಲ್ಲ ಎಂಬ ಕಾರಣಕ್ಕೆ ಸುಳ್ಳು ಕಾರಣ ನೀಡಿ ಅವರನ್ನು ಕರೆಸಲಾಗಿದೆ. ಫ್ಯಾಕ್ಟರಿಯಲ್ಲಿ ಪೆಟ್ರೋಲ್​ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ರಕ್ಷಣಾ ತಂಡಕ್ಕೆ ಫೋನ್ ಮಾಡಲಾಗಿತ್ತು. ಆದರೆ ಅವರು ಬರುವಷ್ಟರಲ್ಲಿ ಇಲ್ಲಿ ಆಗಿದ್ದು ಕಾಲ್ತುಳಿತವಾಗಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಅವರು ಮೃತದೇಹಗಳನ್ನು ಹೊರಗೆ ಸಾಗಿಸಿದರು. ಗಾಯಗೊಂಡವರನ್ನೆಲ್ಲ ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಹೀಗೆ ಕಾರ್ಖಾನೆಯಲ್ಲಿ ಯಾವುದೇ ರಕ್ಷಣಾ ಕ್ರಮಗಳಲ್ಲಿದೆ ಝಕಾತ್​ ಏರ್ಪಡಿಸಿದ್ದಕ್ಕೆ ಮತ್ತು ಸುಳ್ಳು ಕಾರಣ ನೀಡಿದ್ದಕ್ಕೆ ಆ ಫ್ಯಾಕ್ಟರಿಯ ಮ್ಯಾನೇಜರ್​ ಸೇರಿ ಒಟ್ಟು ಏಳುಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಎಂದು ವರದಿಯಾಗಿದೆ.

ಇದನ್ನೂ ಓದಿ: Pakistan Economic Crisis : ಪಾಕಿಸ್ತಾನದಲ್ಲಿ ಹಣದುಬ್ಬರ 47% ಕ್ಕೆ ಜಿಗಿತ, ಮಿಲಿಟರಿ ವೆಚ್ಚ ಕಡಿತಕ್ಕೆ ಐಎಂಎಫ್‌ ಒತ್ತಾಯ

ಪಾಕಿಸ್ತಾನದಲ್ಲಿ ಹೀಗೆ ಆಹಾರ ವಿತರಣೆ ವೇಳೆ ಅವಘಡ ಆಗುತ್ತಿರುವುದು ಇದೇ ಮೊದಲಲ್ಲ. ವಾರದ ಹಿಂದೆ ಪಂಜಾಬ್​ ಪ್ರಾಂತ್ಯದಲ್ಲಿ ಸರ್ಕಾರದ ವತಿಯಿಂದಲೇ ಗೋಧಿ ವಿತರಣೆ ಮಾಡುತ್ತಿದ್ದಾಗಲೂ ಕಾಲ್ತುಳಿತವಾಗಿ ನಾಲ್ಕು ಮಂದಿ ಮೃತಪಟ್ಟಿದ್ದರು. ಪಾಕಿಸ್ತಾನದಲ್ಲಿ ಆಹಾರಕ್ಕಾಗಿ ಎಷ್ಟರಮಟ್ಟಿಗೆ ಹಾಹಾಕಾರ ಎದ್ದಿದೆ ಎಂಬುದಕ್ಕೆ ಈ ನೂಕುನುಗ್ಗಲು-ಕಾಲ್ತುಳಿತಗಳೇ ಸಾಕ್ಷಿಯಾಗಿದೆ. ವಿದೇಶಿ ಸಾಲವನ್ನು ನೆಚ್ಚಿಕೊಂಡಿದ್ದಲ್ಲದೆ, ಭಯೋತ್ಪಾದಕ ಕೃತ್ಯಕ್ಕೇ ಬಹುಪಾಲು ಹಣ ಮೀಸಲಿಟ್ಟ ಪಾಕಿಸ್ತಾನಕ್ಕೀಗ ಭೀಕರ ಪರಿಸ್ಥಿತಿ ಬಂದೊದಗಿದೆ.

Exit mobile version