ಇಸ್ಲಾಮಾಬಾದ್: ಪಾಕಿಸ್ತಾನದ ತಾಲಿಬಾನ್ (Pakistan Taliban) ಎಂದೇ ಕುಖ್ಯಾತವಾಗಿರುವ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್(ಟಿಟಿಪಿ), ಪಾಕಿಸ್ತಾನ ಸರ್ಕಾರದ ಜತೆಗಿನ ಕದನವಿರಾಮ ಮುಕ್ತಾಯಗೊಳಿಸಿದ್ದು, ದೇಶಾದ್ಯಂತ ದಾಳಿ ನಡೆಸುವ ಬೆದರಿಕೆಯನ್ನು ಹಾಕಿದೆ. ಈ ಉಗ್ರ ಸಂಘಟನೆಯು ಪಾಕಿಸ್ತಾನದ ಸರ್ಕಾರದ ಜತೆಗೆ ಜೂನ್ ತಿಂಗಳಲ್ಲಿ ಕದನವಿರಾಮ ಸಂಬಂಧ ಒಪ್ಪಂದ ಮಾಡಿಕೊಂಡಿತ್ತು. ಇದೀಗ, ಕದನವಿರಾಮ ಅಂತ್ಯವಾಗಿದೆ ಎಂದು ಘೋಷಿಸಿದೆ.
”ಪಾಕಿಸ್ತಾನದ ವಾಯುವ್ಯ ಪ್ರಾಂತ್ಯದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಲಕ್ಕಿ ಮರ್ವಾತ್ ಜಿಲ್ಲೆ ಸೇರಿದಂತೆ ದೇಶದ ವಿವಿಧೆಡೆ ಮುಜಾಹೀದಿನ್ ವಿರುದ್ಧ ಪಾಕಿಸ್ತಾನ ಸೇನಾ ಕಾರ್ಯಾಚರಣೆಗೆ ವೇಗ ನೀಡಲಾಗಿದೆ. ಹಾಗಾಗಿ, ಸರ್ಕಾರದ ಜತೆಗಿನ ಕದನ ವಿರಾಮ ಮುಕ್ತಾಯಗೊಳಿಸಲಾಗುವುದು,” ಎಂದು ಅಫಘಾನಿಸ್ತಾನ ತಾಲಿಬಾನ್ ಜತೆಗೆ ಸೈದ್ಧಾಂತಿಕ ಸಖ್ಯವನ್ನು ಹೊಂದಿರುವ ತೆಹ್ರೀಕ್ ಇ ತಾಲಿಬಾನ್ ಪಾಕಿಸ್ತಾನ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಪಾಕಿಸ್ತಾನ್ ತಾಲಿಬಾನ್ ಒಂದು ದಶಕಕ್ಕೂ ಹೆಚ್ಚು ಕಾಲ ಪಾಕಿಸ್ತಾನ ವಿರುದ್ಧ ಉಗ್ರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಕಠಿಣ ಇಸ್ಲಾಮಿಕ್ ಕಾನೂನನ್ನು ಹೇರುವುದು, ಸರ್ಕಾರವು ಬಂಧಿಸಿರುವ ಪ್ರಮುಖ ಉಗ್ರ ಸದಸ್ಯರನ್ನು ಬಿಡುಗಡೆ ಮಾಡುವುದು ಮತ್ತು ಪಾಕಿಸ್ತಾನದ ಬುಡಕಟ್ಟು ಪ್ರದೇಶಗಳನ್ನು ಖೈಬರ್ ಪಖ್ತುಂಕ್ವಾ ಪ್ರಾಂತ್ಯದೊಂದಿಗೆ ವಿಲೀನಗೊಳಿಸುವುದನ್ನು ಹಿಂತೆಗೆದುಕೊಳ್ಳುವಂತೆ ಈ ಉಗ್ರರ ಗುಂಪು ಒತ್ತಾಯಿಸುತ್ತಾ ಬಂದಿದೆ.
ಇದನ್ನೂ ಓದಿ | ಪಾಕಿಸ್ತಾನದಿಂದ ಬಂದ ಮತ್ತೊಂದು ಡ್ರೋನ್; ಫೈರಿಂಗ್ ಮಾಡಿ ಹೊಡೆದುರುಳಿಸಿದ ಗಡಿ ಭದ್ರತಾ ಪಡೆ ಸಿಬ್ಬಂದಿ