Site icon Vistara News

Pakistan: ಪಾಕಿಸ್ತಾನಕ್ಕೂ ಕಾಲಿಟ್ಟ ಯೋಗ; ಅಧಿಕೃತವಾಗಿ ತರಗತಿ ಆರಂಭ

Pakistan

ಇಸ್ಲಾಮಾಬಾದ್‌: ಪ್ರಧಾನಿ ನರೇಂದ್ರ ಮೋದಿ(Narendra Modi) ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ದೇಶ ವಿದೇಶಗಳಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ(International Yoga Day)ಯನ್ನು ಆಚರಿಸಲಾಗುತ್ತಿದೆ. ಭಾರತದ ಮೂಲವಿರುವ ಈ ಯೋಗ (Yoga) ಪರಂಪರೆ ಪ್ರಪಂಚದ ಮೂಲೆ ಮೂಲೆಗೂ ಪಸರಿಸಿ ಪ್ರತಿವರ್ಷ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಇದೀಗ ಭಾರತದ ಈ ಯೋಗ ಪರಂಪರೆ ನೆರೆಯ ರಾಷ್ಟ್ರ ಪಾಕಿಸ್ತಾನ(Pakistan)ಕ್ಕೂ ಕಾಲಿಟ್ಟಿದೆ. ಭಾರತೀಯ ಯೋಗ ಪದ್ಧತಿಗೆ ಮನಸೋತಿರುವ ಪಾಕಿಸ್ತಾನ ಅದನ್ನು ಅಧಿಕೃತವಾಗಿ ಅಳವಡಿಸಿಕೊಳ್ಳಲು ಮುಂದಾಗಿದೆ. ಹೀಗಾಗಿ ಅಲ್ಲಲ್ಲಿ ಉಚಿತ ಯೋಗ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ.

ಪಾಕಿಸ್ತಾನದ ಕ್ಯಾಪಿಟಲ್‌ ಡೆವಲಪ್‌ಮೆಂಟ್‌ ಪ್ರಾಧಿಕಾರ(CDA) ತನ್ನ ಫೇಸ್‌ಬುಕ್‌ ಪೇಜ್‌ನಲ್ಲಿ ಈ ಬಗ್ಗೆ ಪೋಸ್ಟ್‌ವೊಂದನ್ನು ಮಾಡಿದ್ದು, ಇಸ್ಲಾಮಾಬಾದ್‌ನ ಎಫ್-9 ಪಾರ್ಕ್‌ನಲ್ಲಿ ಉಚಿತ ಯೋಗ ತರಗತಿಗಳ ಜಾಹೀರಾತು ನೀಡಲಾಗಿದೆ. ಆರೋಗ್ಯ ಮತ್ತು ಕ್ಷೇಮಕ್ಕಾಗಿ ಅನೇಕರು ಈಗಾಗಲೇ ಈ ಉಚಿತ ಯೋಗ ತರಗತಿಗೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಸಿಡಿಎ ತಿಳಿಸಿದೆ. ಈಗಿರುವ ಮಾಹಿತಿಯ ಪ್ರಕಾರ, ಪಾಕಿಸ್ತಾನದಲ್ಲಿ ಅಧಿಕೃತವಾಗಿ ಯೋಗ ತರಬೇತಿ ನೀಡುವುದಿಲ್ಲ. ಹಾಗಾಗಿ CDA ಜಾಹೀರಾತು ಹೆಚ್ಚು ಗಮನ ಸೆಳೆದಿದೆ. ಅನೇಕ ಜನ ಯೋಗಾಭ್ಯಾಸ ಮಾಡುತ್ತಿರುವ ಫೊಟೋವೊಂದನ್ನು ಹಂಚಿಕೊಂಡಿರುವ CDA, ಅನೇಕರು ಈಗಾಗಲೇ ತರಗತಿಗಳೊಗೆ ಸೇರ್ಪಡೆಯಾಗಿದ್ದಾರೆ. ಆರೋಗ್ಯಕ್ಕಾಗಿ ಈ ನಡೆ ಎಂದು ಪೋಸ್ಟ್‌ ಮಾಡಿದ್ದಾರೆ.

ಯೋಗದ ಮೂಲ ಭಾರತವಾಗಿರುವುದರಿಂದ ಪಾಕಿಸ್ತಾನದಲ್ಲಿ ಅನೇಕ ಸಂಸ್ಥೆಗಳು ಯೋಗಾಭ್ಯಾಸಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ. ಅದಾಗ್ಯೂ ಕೆಲವು ಜನರು ತಮ್ಮ ಮನೆಯಲ್ಲೇ ಯೋಗ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದಾರೆ. ಇದೀಗ ಬಹಿರಂಗವಾಗಿ ಯೋಗ ತರಗತಿಗಳು ಆರಂಭವಾಗಿರುವುದನ್ನು ಅನೇಕರು ಸ್ವಾಗತಿಸಿದ್ದಾರೆ. ಅದೂ ಅಲ್ಲದೇ ತರಗತಿಗೆ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು CDA ಕ್ರಮವನ್ನು ಖಂಡಿಸಿದ್ದಾರೆ.

ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಕರಡು ಪ್ರಸ್ತಾವನೆಯನ್ನು 2014 ಡಿಸೆಂಬರ್‌ನಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ, ಭಾರತದ ಖಾಯಂ ಪ್ರತಿನಿಧಿಯಾಗಿರುವ ಅಶೋಕ್‌ ಕುಮಾರ್ ಮಂಡಿಸಿದ್ದರು. ವಿಶ್ವಸಂಸ್ಥೆಗೆ ಇದು ಐತಿಹಾಸಿಕ ಕ್ಷಣವಾಗಿದ್ದು, ಅದರ ಸದಸ್ಯ ರಾಷ್ಟ್ರಗಳು ಅಭೂತಪೂರ್ವ ಬೆಂಬಲ ಸೂಚಿಸಿದ್ದರು. ವಿಶ್ವ ಸಂಸ್ಥೆಯ 193 ರಾಷ್ಟ್ರಗಳ ಪೈಕಿ 177 ದೇಶಗಳು ಅನುಮೋದನೆಯನ್ನು ನೀಡಿದ್ದವು.

ಇದನ್ನೂ ಓದಿ:Prajwal Revanna Case: ವಿದೇಶದಿಂದ ಮಧ್ಯಾಹ್ನ 3 ಗಂಟೆಗೆ ಪ್ರಜ್ವಲ್‌ ರೇವಣ್ಣ ಆಗಮನ? ಬಂದ ಕೂಡಲೇ ಅರೆಸ್ಟ್!

2015 ಜೂನ್ 21ರಂದು ಚೊಚ್ಚಲ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಆಯುಶ್ ಸಚಿವಾಲಯದ ನೇತೃತ್ವದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ರಾಜಪಥದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಹಾಗೂ 84 ರಾಷ್ಟ್ರಗಳ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, 21 ಯೋಗ ಆಸನಗಳನ್ನು ಅಭ್ಯಾಸಿಸಲಾಯಿತು. ಯೋಗವು 6,000 ವರ್ಷಕ್ಕೂ ಹಳೆಯದಾದ ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ. ಪ್ರತಿವರ್ಷ ಯೊಗದ ದಿನಾಚರಣೆಯು ಯೋಗ, ಧ್ಯಾನ, ಸಭೆಗಳು ಚರ್ಚೆಗಳು, ಸಾಂಸ್ಕೃತಿಕ ಪ್ರದರ್ಶನಗಳು ಇತ್ಯಾದಿಗಳನ್ನು ಅಭ್ಯಸಿಸುವುದರ ಮೂಲಕ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಯೋಗ ದಿನವನ್ನು ಆಚರಿಸಲಾಗುತ್ತದೆ.

Exit mobile version