ಇಸ್ಲಾಮಾಬಾದ್: ಅಸಮರ್ಥ ನಾಯಕತ್ವ, ಉಗ್ರರ ಪೋಷಣೆ, ಭ್ರಷ್ಟ ರಾಜಕಾರಣಿಗಳು ಸೇರಿ ಹಲವು ಕಾರಣಗಳಿಂದಾಗಿ ಪಾಕಿಸ್ತಾನದ ಆರ್ಥಿಕತೆ (Pakistan Economy) ಪಾತಾಳ ಕಂಡಿದೆ. ಹಾಗಾಗಿ, ಹಣಕಾಸು ನೆರವು ನೀಡಿ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (IMF) ಸೇರಿ ಹಲವು ಸಂಸ್ಥೆಗಳ ಎದುರು ಭಿಕ್ಷಾಪಾತ್ರೆ ಹಿಡಿದು ನಿಂತಿದೆ. ಹೀಗೆ, ಆರ್ಥಿಕತೆ ಕುಸಿತದಿಂದ ಕಂಗೆಟ್ಟಿರುವ ಪಾಕಿಸ್ತಾನದ ರೂಪಾಯಿಯು ಡಾಲರ್ ಎದುರು 262 ರೂಪಾಯಿಗೆ ಕುಸಿದಿದೆ. ಇದು ಕಳೆದ ಎರಡು ದಶಕದಲ್ಲೇ ರೂಪಾಯಿ ಮೌಲ್ಯವು ಕನಿಷ್ಠ ಮಟ್ಟಕ್ಕೆ ಕುಸಿದಂತಾಗಿದೆ.
ಶುಕ್ರವಾರದ ಅಂತ್ಯಕ್ಕೆ ಪಾಕಿಸ್ತಾನದ ರೂಪಾಯಿಯು ಮುಕ್ತ ಮಾರುಕಟ್ಟೆಯಲ್ಲಿ 265 ರೂ.ಗೆ ಹಾಗೂ ಇಂಟರ್‌ಬ್ಯಾಂಕ್‌ನಲ್ಲಿ 266 ರೂ.ಗೆ ಕುಸಿದಿದೆ. ಒಂದೇ ದಿನ ರೂಪಾಯಿ ಮೌಲ್ಯವು 7.17 ರೂ. ಕುಸಿದಿದೆ. ಕೇವಲ ಎರಡು ದಿನದಲ್ಲಿ 34 ರೂಪಾಯಿ ಅಪಮೌಲ್ಯವಾಗಿದೆ. ಇದು 1999ರ ಬಳಿಕ ಉಂಟಾದ ಭಾರಿ ಅಪಮೌಲ್ಯ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ | Richest Hindus of Pakistan : ಇವರು ಪಾಕಿಸ್ತಾನದ ಶ್ರೀಮಂತ ಹಿಂದೂಗಳು! ಎಷ್ಟಿದೆ ಆಸ್ತಿ?
ಪಾಕಿಸ್ತಾನದ ವಿದೇಶಿ ವಿನಿಮಯ ಬರಿದಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಸರ್ಕಾರದ ಬಳಿ ಹಣವಿಲ್ಲ. ಇದಕ್ಕಾಗಿ, ಜಾಗತಿಕ ಸಂಸ್ಥೆಗಳ ಮೊರೆ ಹೋಗಿದೆ. ವಿದ್ಯುತ್ ಕೊರತೆ, ರೂಪಾಯಿ ಅಪಮೌಲ್ಯ, ಬೆಲೆಯೇರಿಕೆ ಸೇರಿ ಹತ್ತಾರು ಸಮಸ್ಯೆಗಳು ಪಾಕಿಸ್ತಾನವನ್ನು ಜರ್ಜರಿತವಾಗಿವೆ.