Site icon Vistara News

Sundar Pichai: ಇಸ್ಲಾಂ ಎಂದರೆ ಅಂಜುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದ ಸುಂದರ್‌ ಪಿಚೈ!

Sundar Pichai

ವಾಷಿಂಗ್ಟನ್‌: ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ಸಮರದಿಂದ (Israel Palestine War) 4 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಸಾವಿರಾರು ಜನ ಗಾಯಗೊಂಡಿದ್ದು, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಇನ್ನು ಲಕ್ಷಾಂತರ ಜನ ಮನೆ-ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಅಕ್ಟೋಬರ್‌ 7ರಂದು ಹಮಾಸ್‌ ಉಗ್ರರು ಇಸ್ರೇಲ್‌ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ ಇಸ್ರೇಲ್‌ ಕೂಡ ದಾಳಿ ನಡೆಸುತ್ತಿದೆ. ಇದರಿಂದಾಗಿ ಲಕ್ಷಾಂತರ ಜನ ಪರಿಣಾಮ ಎದುರಿಸುವಂತಾಗಿದೆ. ಇದರ ಬೆನ್ನಲ್ಲೇ, ಇಸ್ರೇಲ್‌ ಹಾಗೂ ಗಾಜಾದಲ್ಲಿ ದಾಳಿಯಿಂದ ಸಂಕಷ್ಟಕ್ಕೆ ಸಿಲುಕಿದವರಿಗಾಗಿ ಗೂಗಲ್‌ ಸಿಇಒ ಸುಂದರ್‌ ಪಿಚೈ (Sundar Pichai) ಅವರು 8 ದಶಲಕ್ಷ ಡಾಲರ್‌ (ಸುಮಾರು 66.68) ಕೋಟಿ ರೂ. ದೇಣಿಗೆ ನೀಡಿದ್ದಾರೆ. ಇದೇ ವೇಳೆ ಅವರು ಇಸ್ಲಾಮೋಫೋಬಿಯಾ (Islamophobia) ಜಾಸ್ತಿಯಾಗುತ್ತಿದೆ ಎಂದು ಕೂಡ ಹೇಳಿದ್ದಾರೆ.

ಇಸ್ರೇಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಗೂಗಲ್‌ನ 2 ಸಾವಿರ ಉದ್ಯೋಗಿಗಳಿಗೆ ಸುಂದರ್‌ ಪಿಚೈ ಇ-ಮೇಲ್‌ ಮಾಡಿದ್ದಾರೆ. ಇಸ್ರೇಲ್‌ ಹಾಗೂ ಪ್ಯಾಲೆಸ್ತೀನ್‌ ಸಮರ ಸೇರಿ ಹಲವು ವಿಷಯಗಳನ್ನು ಅವರು ಪ್ರಸ್ತಾಪಿಸಿದ್ದಾರೆ. “ಇಸ್ರೇಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ 2 ಸಾವಿರಕ್ಕೂ ಅಧಿಕ ಗೂಗಲ್‌ ಉದ್ಯೋಗಿಗಳು ಶೆಲ್ಟರ್‌ಗಳಲ್ಲಿ ಆಶ್ರಯ ಪಡೆದಿದ್ದಾರೆ. ಅವರು ಸುರಕ್ಷಿತವಾಗಿದ್ದರೂ ಭಯಭೀತರಾಗಿದ್ದಾರೆ. ಅವರು ಕುಟುಂಬಸ್ಥರು, ಮಕ್ಕಳನ್ನು ಮಿಸ್‌ ಮಾಡಿಕೊಳ್ಳುತ್ತಿದ್ದಾರೆ. ಟೆಲ್‌ ಅವಿವ್‌ನಲ್ಲಿ ರಕ್ಷಣೆ ಪಡೆಯುವ ಉದ್ಯೋಗಿಗಳಿಗೆ ವ್ಯವಸ್ಥೆ ಮಾಡಲಾಗಿದೆ” ಎಂದು ಅವರು ಇ-ಮೇಲ್‌ನಲ್ಲಿ ಪ್ರಸ್ತಾಪಿಸಿದ್ದಾರೆ.

ಗಾಜಾ ಮೇಲೆ ದಾಳಿ ಖಂಡಿಸಿ ಜೋರ್ಡಾನ್‌ನಲ್ಲಿ ಪ್ರತಿಭಟನೆ

“ಇಸ್ರೇಲ್‌ ಹಾಗೂ ಗಾಜಾದಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವು ನೀಡುತ್ತಿರುವವರಿಗೆ ಗೂಗಲ್‌ನಿಂದ 8 ದಶಲಕ್ಷ ಡಾಲರ್‌ ದೇಣಿಗೆ ನೀಡಲಾಗುತ್ತಿದೆ. ಸಂಕಷ್ಟಕ್ಕೆ ಸಿಲುಕಿದವರು, ಮೃತರ ದುಃಖದಲ್ಲಿ ಗೂಗಲ್‌ ನಾಯಕರು ಕೂಡ ಪಾಲುದಾರರಾಗಿದ್ದಾರೆ. ಆದರೆ. ಪ್ಯಾಲೆಸ್ತೀನ್‌, ಅರಬ್‌ ಹಾಗೂ ಗೂಗಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಇಸ್ಲಾಮೋಫೋಬಿಯಾ (ಇಸ್ಲಾಂ ಕಂಡರೆ ಭಯ ಅಥವಾ ಪೂರ್ವಗ್ರಹಪೀಡಿತ ಮನೋಭಾವ) ಹೆಚ್ಚಾಗುವ ಕುರಿತು ಕಾಳಜಿ ವ್ಯಕ್ತಪಡಿಸುತ್ತಿದ್ದಾರೆ. ಅವರಿಗೆ ಇದರಿಂದ ತೊಂದರೆಯಾಗುತ್ತಿದೆ. ಇದರ ನೋವನ್ನು ವಿವರಿಸಲು ಯಾವ ಪದಗಳೂ ಇಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Israel Palestine War: ನಮ್ಮ ಕೈ ಟ್ರಿಗರ್ ಮೇಲಿದೆ! ಇಸ್ರೇಲ್‌ಗೆ ನೇರ ಎಚ್ಚರಿಕೆ ನೀಡಿದ ಇರಾನ್

ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ದಾಳಿ-ಪ್ರತಿದಾಳಿ ಕುರಿತು ಜಗತ್ತು ಆತಂಕ ವ್ಯಕ್ತಪಡಿಸಿದರೂ ದಾಳಿಯ ತೀವ್ರತೆ ಕಡಿಮೆಯಾಗಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಗಾಜಾ ನಗರದ ಸರ್ಕಾರಿ ಆಸ್ಪತ್ರೆ ಮೇಲೆ ರಾತ್ರೋರಾತ್ರಿ ನಡೆದ ವಾಯುದಾಳಿಯಲ್ಲಿ ಮಹಿಳೆಯರು, ಮಕ್ಕಳು, ಹಿರಿಯರು ಸೇರಿ 500 ಜನ ಮೃತಪಟ್ಟಿದ್ದಾರೆ. ಹಾಗೆಯೇ, ಆಸ್ಪತ್ರೆಯಲ್ಲಿದ್ದ ನೂರಾರು ಜನ ಗಾಯಗೊಂಡಿದ್ದಾರೆ. ಇಡೀ ಆಸ್ಪತ್ರೆ ಈಗ ಮಸಣದಂತಾಗಿದ್ದು, ಗಾಯಗೊಂಡವರು, ಸಂಬಂಧಿಕರನ್ನು ಕಳೆದುಕೊಂಡವರ ಆಕ್ರಂದನ ಮುಗಿಲುಮುಟ್ಟಿದೆ ಎಂದು ತಿಳಿದುಬಂದಿದೆ.

Exit mobile version