Site icon Vistara News

Mahmoud Abbas: ಪ್ಯಾಲೆಸ್ತೀನ್‌ ಅಧ್ಯಕ್ಷ ಮಹಮೂದ್‌ ಅಬ್ಬಾಸ್‌ ಹತ್ಯೆಗೆ ಯತ್ನ; ನಿಲ್ಲದ ಉಗ್ರರ ಉಪಟಳ

Mahmoud Abbas

Palestinian President Mahmoud Abbas' convoy attacked in West Bank: Report Says

ಗಾಜಾ ಸಿಟಿ: ಉಗ್ರರ ಉಪಟಳದಿಂದಾಗಿ ಪ್ಯಾಲೆಸ್ತೀನ್‌ನ ಗಾಜಾ ನಗರವೀಗ ಇಸ್ರೇಲ್‌ ಹಿಡಿತಕ್ಕೆ ಸಿಲುಕಿದೆ. ಗಾಜಾ ನಗರದಲ್ಲಿ ಬೀಡುಬಿಟ್ಟಿರುವ ಉಗ್ರರು ಮೊದಲು ಇಸ್ರೇಲ್‌ ಮೇಲೆ ದಾಳಿ (Israel Palestine War) ನಡೆಸಿದ ಪರಿಣಾಮವಾಗಿ ಇಸ್ರೇಲ್‌ ಪ್ರತಿದಾಳಿ ನಡೆಸುತ್ತಿದೆ. ಇಸ್ರೇಲ್‌ ದಾಳಿಗೆ ಗಾಜಾ ನಗರದಲ್ಲಿರುವ 10 ಸಾವಿರ ಜನ ಬಲಿಯಾಗಿದ್ದಾರೆ. ಇನ್ನೂ ಸಾವಿರಾರು ಜನ ಗಾಯಗೊಂಡಿದ್ದಾರೆ. ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಇಷ್ಟಾದರೂ ಪ್ಯಾಲೆಸ್ತೀನ್‌ನಲ್ಲಿ ಉಗ್ರರ ಉಪಟಳ ನಿಲ್ಲುತ್ತಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಪ್ಯಾಲೆಸ್ತೀನ್‌ ಅಧ್ಯಕ್ಷ ಮಹಮೂದ್‌ ಅಬ್ಬಾಸ್‌ (Mahmoud Abbas) ಅವರ ಹತ್ಯೆಗೆ ಉಗ್ರರು ಯತ್ನಿಸಿದ್ದಾರೆ.

ಮಹಮೂದ್‌ ಅಬ್ಬಾಸ್‌ ಹತ್ಯೆಗೈಯಲು ಉಗ್ರರು ಮಂಗಳವಾರ (ನವೆಂಬರ್‌ 7) ದಾಳಿ ನಡೆಸಿದ್ದು, ಅವರ ಬೆಂಗಾವಲು ಪಡೆಯಲ್ಲಿದ್ದ ಒಬ್ಬ ಬಾಡಿಗಾರ್ಡ್‌ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲ, ದಾಳಿಯ ಹೊಣೆಯನ್ನು “ಸನ್ಸ್‌ ಆಫ್‌ ಅಬು ಜಂದಾಲ್‌” (Sons of Abu Jandal) ಉಗ್ರ ಸಂಘಟನೆಯು ಹೊತ್ತುಕೊಂಡಿದೆ. ಇದು ಈಗ ಪ್ಯಾಲೆಸ್ತೀನ್‌ನಲ್ಲಿ ಮತ್ತಷ್ಟು ಆತಂಕದ ವಾತಾವರಣ ನಿರ್ಮಾಣವಾಗಲು ಕಾರಣವಾಗಿದೆ.

ದಾಳಿಗೆ ಕಾರಣವೇನು?

ಗಾಜಾ ನಗರದ ಮೇಲೆ ಇಸ್ರೇಲ್‌ ಮಾಡುತ್ತಿರುವ ದಾಳಿಗೆ ಪ್ಯಾಲೆಸ್ತೀನ್‌ ಪ್ರತಿರೋಧ ಒಡ್ಡಬೇಕು. ಪ್ರತಿ ದಾಳಿ ಮಾಡಲು ಪೂರ್ಣ ಪ್ರಮಾಣದ ಸಹಕಾರ ನೀಡಬೇಕು ಎಂದು ಸನ್ಸ್‌ ಆಫ್‌ ಅಬು ಜಂದಾಲ್‌ ಉಗ್ರ ಸಂಘಟನೆಯು ಮಹಮೂದ್‌ ಅಬ್ಬಾಸ್‌ ಅವರಿಗೆ ಗಡುವು ನೀಡಿತ್ತು. ಆದರೆ, ಪ್ರತಿದಾಳಿ ಕುರಿತು ಮಹಮೂದ್‌ ಅಬ್ಬಾಸ್‌ ಅವರು ಯಾವುದೇ ತೀರ್ಮಾನ ಪ್ರಕಟಿಸದ ಕಾರಣ ಉಗ್ರರು ಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Israel Palestine War: ಗಾಜಾ ನಗರದ ‘ಹೃದಯ’ ಪ್ರವೇಶಿಸಿದ ಇಸ್ರೇಲ್‌; ಮಸಣದಂತಾದ ಸಿಟಿ!

“ಗಾಜಾ ನಗರದಲ್ಲಿರುವ ಹಮಾಸ್‌ ಉಗ್ರರನ್ನು ನಿರ್ನಾಮ ಮಾಡುವ ಉತ್ಸಾಹದಲ್ಲಿ ಇಸ್ರೇಲ್‌ ಸೇನೆಯು ಮಹತ್ವದ ಮುನ್ನಡೆ ಸಾಧಿಸಿದೆ. ಇಸ್ರೇಲ್‌ ಯೋಧರೀಗ ಗಾಜಾ ನಗರದ ಹೃದಯ ಭಾಗ ತಲುಪಿದ್ದಾರೆ. ಗುರಿ ಸಾಧಿಸಿಯೇ ಇಸ್ರೇಲ್‌ ಯೋಧರು ಅಲ್ಲಿಂದ ವಾಪಸಾಗಲಿದ್ದಾರೆ” ಎಂದು ಇಸ್ರೇಲ್‌ ರಕ್ಷಣಾ ಸಚಿವ ಯೋಯಾವ್‌ ಗಲಾಂಟ್‌ ತಿಳಿಸಿದ್ದಾರೆ. ಮತ್ತೊಂದೆಡೆ, ಅಮೆರಿಕದ ಎಚ್ಚರಿಕೆ ಮಧ್ಯೆಯೂ ದಾಳಿ ಮುಂದುವರಿಸಲು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹೇಳಿದ್ದಾರೆ. “ಹಮಾಸ್‌ ಉಗ್ರರಿಗೆ ಬೆಂಬಲ ನೀಡುತ್ತಿರುವ ಹೆಜ್ಬೊಲ್ಲಾ ಉಗ್ರರನ್ನೂ ನಾವು ಸುಮ್ಮನೆ ಬಿಡಲ್ಲ” ಎಂದಿದ್ದಾರೆ.

ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಸಮರದಲ್ಲಿ ಮೃತಪಟ್ಟವರ ಸಂಖ್ಯೆ 11 ಸಾವಿರ ದಾಟಿದೆ. ಅದರಲ್ಲೂ, ಹಮಾಸ್‌ ಉಗ್ರರ ತಾಣವಾದ ಗಾಜಾ ನಗರದ ಮೇಲೆ ಇಸ್ರೇಲ್‌ ನಿರಂತರವಾಗಿ ದಾಳಿ ನಡೆಸುತ್ತಿದ್ದು, ನಗರದಲ್ಲಿ ಇದುವರೆಗೆ 10 ಸಾವಿರಕ್ಕೂ ಜನ ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯವೇ ಮಾಹಿತಿ ನೀಡಿದೆ. ಇನ್ನೂ 3 ಸಾವಿರಕ್ಕೂ ಅಧಿಕ ಜನ ಕಟ್ಟಡದ ಅವಶೇಷಗಳಲ್ಲಿ ಸಿಲುಕಿದ್ದು, ಅವರ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂಬುದಾಗಿ ಮಾಹಿತಿ ನೀಡಿದೆ. ಇನ್ನು ಹಮಾಸ್‌ ಉಗ್ರರ ದಾಳಿಗೆ ಇಸ್ರೇಲ್‌ನಲ್ಲಿ 1,400 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version