ಶಾಲೆಗೆ ಹೋಗೋಲ್ಲ ಎಂದು ರಚ್ಚೆ ಹಿಡಿದು, ಗಲಾಟೆ ಮಾಡುವ ಮಕ್ಕಳನ್ನು ಮತ್ತೆ ರಮಿಸಿ-ನಂಬಿಸಿ ಶಾಲೆಗೆ ಕಳಿಸುವ ಕಷ್ಟ ‘ಅಂಥ ಮಕ್ಕಳ’ ತಂದೆ-ತಾಯಿಗೇ ಗೊತ್ತು. ನೀನು ಹಠ ಮಾಡದೆ ಶಾಲೆಗೆ ಹೋದರೆ ನಿನಗೆ ಬೇಕಾಗಿದ್ದನ್ನು ಕೊಡಿಸುತ್ತೇವೆ. ನೀನಿಷ್ಟಪಟ್ಟಲ್ಲಿಗೆ ಕರೆದುಕೊಂಡು ಹೋಗುತ್ತೇವೆ, ನಿನಗೆ ಏನು ಬೇಕೋ, ಅದನ್ನೇ ತಿನ್ನಲು ಕೊಡುತ್ತೇವೆ ಎಂದು ರಮಿಸುವ ಸಾಲಿಗೆ ಒಂದಷ್ಟು ಪಾಲಕರು ಸೇರಿದರೆ, ಶಾಲೆಗೆ ಹೋಗೋಲ್ಲ ಎಂದು ಅಳುವ ಮಕ್ಕಳಿಗೆ ಬೈದು-ಹೊಡೆದು ಕಳಿಸುವ ವರ್ಗಕ್ಕೆ ಮತ್ತೊಂದಷ್ಟು ಪಾಲಕರು ಸೇರ್ಪಡೆಯಾಗುತ್ತಾರೆ. ಈಗ ಮಲೇಷ್ಯಾದ ಈ ಜೋಡಿ ಅವರ ಐದು ವರ್ಷದ ಮಗಳಿಗೆ ಶಾಲೆಗೆ ಹೋಗಲು ಸ್ಫೂರ್ತಿ ತುಂಬುವ ಸಲುವಾಗಿ ಐಷಾರಾಮಿ ಮರ್ಸಿಡಿಸ್ ಕಾರನ್ನು ಉಡುಗೊರೆಯನ್ನಾಗಿ ಕೊಟ್ಟಿದೆ.
ಉದ್ಯಮಿ ಫರ್ಹಾನಾ ಜಹ್ರಾ ಎಂಬ ಮಹಿಳೆ ಈ ಬಗ್ಗೆ ಹೇಳಿಕೊಂಡಿದ್ದಾರೆ. ನನ್ನ ಮಗಳು ಫಾತಿಮಾಗೆ ಐದು ವರ್ಷ. ಶಾಲೆಗೆ ಸೇರಿಸಲಾಗಿತ್ತು. ಆದರೆ ಜನವರಿ ತಿಂಗಳಲ್ಲಿ ಒಮ್ಮೆ ಅನಾರೋಗ್ಯಕ್ಕೆ ಒಳಗಾಗಿ ಸ್ವಲ್ಪ ದಿನ ಶಾಲೆ ರಜೆ ಆಯಿತು. ಆದರೆ ಚೇತರಿಸಿಕೊಂಡ ಮೇಲೆ ಮತ್ತೆ ಏನು ಮಾಡಿದರೂ ಶಾಲೆಗೆ ಕಳಿಸಲು ಸಾಧ್ಯವಾಗಲಿಲ್ಲ. ‘ನಾನು ತುಂಬ ಚಿಕ್ಕವಳು ಹಾಗಾಗಿ ಶಾಲೆಗೆ ಹೋಗೋದಿಲ್ಲ ಎಂದು ಒಂದೇ ಸಮನೆ ಹಠ ಮಾಡಿದಳು’ ‘ನೀನು ಶಾಲೆಗೆ ಹೋಗಬೇಕು ಎಂದರೆ ಮುಂಬರುವ ನಿನ್ನ ಬರ್ತ್ ಡೇಗೆ ಏನು ಉಡುಗೊರೆ ಕೊಡಬೇಕು ಎಂದು ಕೇಳಿದೆವು. ಅದಕ್ಕೆ ಉತ್ತರಿಸಿದ ಅವಳು ‘ಬಿಎಂಡಬ್ಲ್ಯೂ ಆಗಲೀ, ಮರ್ಸಿಡಿಸ್ ಜಿ ವ್ಯಾಗನ್ ಕಾರ್ ಆಗಲೀ ಗಿಫ್ಟ್ ಆಗಿ ಬೇಕು. ಅದನ್ನು ಕೊಟ್ಟರೆ ನಾನು ಖಂಡಿತ ಶಾಲೆಗೆ ಹೋಗುತ್ತೇನೆ’ ಎಂದಳು. ನಮಗೆ ಅವಳು ಶಾಲೆಗೆ ಹೋದರೆ ಸಾಕಿತ್ತು. ಹೀಗಾಗಿ ಅವಳಿಷ್ಟಪಟ್ಟ ಮರ್ಸಿಡಿಸ್ ಜಿ ವ್ಯಾಗನ್ ಕಾರನ್ನು ಖರೀದಿಸಿಕೊಟ್ಟಿದ್ದೇವೆ’ ಎಂದು ಫಾತಿಮಾ ಹೇಳಿದ್ದಾಳೆ.
ಇದನ್ನೂ ಓದಿ: Ukg student fail: ಯುಕೆಜಿ ಕ್ಲಾಸಿನ ಮಗುವನ್ನು ಫೇಲ್ ಮಾಡಿದ ಶಾಲೆ! ; ಆಡಳಿತ ಮಂಡಳಿ ವಿರುದ್ಧ ಎಲ್ಲೆಡೆ ಆಕ್ರೋಶ
ಕರೆಕ್ಟ್ ಆಗಿ ಫಾತಿಮಾಳ ಬರ್ತ್ ಡೇ ದಿನವೇ ಅವಳಿಗೆ ಕಾರು ನೀಡಲಾಗಿದೆ. ಆಕೆಯ ಹುಟ್ಟುಹಬ್ಬದ ಪಾರ್ಟಿ ದಿನವೇ ಕಾರು ಮನೆ ಬಾಗಿಲಿಗೆ ಬಂದು ನಿಂತಿತ್ತು. ಅವಳ ಕಣ್ಣಿಗೆ ಬಟ್ಟೆ ಕಟ್ಟಿ, ಕಾರಿನ ಎದುರು ನಿಲ್ಲಿಸಲಾಯಿತು. ಕಾರನ್ನು ನೋಡಿ, ಅವಳಿಗೆ ಆದ ಸಂತೋಷ ಅಷ್ಟಿಷ್ಟಲ್ಲ. ಕೂಡಲೇ ನಮಗೆ ಪ್ರಾಮಿಸ್ ಮಾಡಿದ್ದಾಳೆ. ನಾನು ತಪ್ಪದೆ ಶಾಲೆಗೆ ಹೋಗುತ್ತೇನೆ, ಚೆನ್ನಾಗಿ ಓದಿ ವೈದ್ಯೆಯಾಗುತ್ತೇನೆ ಎಂದು ಆಕೆ ಹೇಳಿದ್ದಾಳೆ. ಅಂತೆಯೇ ತಪ್ಪದೆ ಶಾಲೆಗೆ ಹೋಗುತ್ತಿದ್ದಾಳೆ ಎಂದು ಫರ್ಹಾನಾ ಜಹ್ರಾ ಹೇಳಿಕೊಂಡಿದ್ದಾರೆ.