Site icon Vistara News

ವಿಮಾನದ ಎಮರ್ಜನ್ಸಿ ಎಕ್ಸಿಟ್ ಬಾಗಿಲು ತೆಗೆದು, ರೆಕ್ಕೆ ಮೇಲೆ ಓಡಾಡಿದ ವ್ಯಕ್ತಿ; ಮುಂದೇನಾಯ್ತು?

Flight

Passenger In Mexico Opens Emergency Exit, Walks On Plane's Wing

ಮೆಕ್ಸಿಕೋ ಸಿಟಿ: ವಿಮಾನಗಳಲ್ಲಿ ಸಹ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುವುದು, ಅವರ ಮೇಲೆ ಹಲ್ಲೆ ನಡೆಸುವುದು, ಸಿಬ್ಬಂದಿ ಜತೆ ಅನುಚಿತವಾಗಿ ವರ್ತಿಸುವುದು, ಕುಡಿದ ಮತ್ತಿನಲ್ಲಿ ಗಲಾಟೆ ನಡೆಸುವುದು ಸೇರಿ ಹಲವು ರೀತಿಯಲ್ಲಿ ಹುಚ್ಚಾಟ ನಡೆಸುವ ಪ್ರಕರಣಗಲೂ ಇತ್ತೀಚೆಗೆ ಹೆಚ್ಚಾಗುತ್ತಿವೆ. ಇದಕ್ಕೆ ತಾಜಾ ನಿದರ್ಶನ ಎಂಬಂತೆ, ಮೆಕ್ಸಿಕೋದಲ್ಲಿ (Mexico) ಪ್ರಯಾಣಿಕನೊಬ್ಬ ವಿಮಾನದ ತುರ್ತು ನಿರ್ಗಮನ ಬಾಗಿಲು (Emergency Exit) ತೆರೆದು, ವಿಮಾನದ ರೆಕ್ಕೆಯ ಮೇಲೆ ಓಡಾಡಿದ್ದಾನೆ. ಈತನ ವರ್ತನೆ ಕಂಡು ವಿಮಾನದ ಪ್ರಯಾಣಿಕರು ಹಾಗೂ ಸಿಬ್ಬಂದಿ ದಂಗಾಗಿದ್ದಾರೆ.

ಮೆಕ್ಸಿಕೋ ಸಿಟಿ ವಿಮಾನ ನಿಲ್ದಾಣದಿಂದ ಏರೋಮೆಕ್ಸಿಕೋ ವಿಮಾನವು ಜನವರಿ 25ರಂದು ಬೆಳಗ್ಗೆ 8.50ಕ್ಕೆ ಹಾರಾಟ ಆರಂಭಿಸಬೇಕಿತ್ತು. ಆದರೆ, ತಾಂತ್ರಿಕ ದೋಷದಿಂದಾಗಿ ವಿಮಾನವು ಮಧ್ಯಾಹ್ನ 2 ಗಂಟೆಯಾದರೂ ಹಾರಾಟ ಆರಂಭಿಸಿಲ್ಲ. ಇದರಿಂದ ಕುಪಿತಗೊಂಡ ಪ್ರಯಾಣಿಕ, ವಿಮಾನದಲ್ಲಿ ಕುಳಿತು ಕುಳಿತು ಸಾಕಾಗಿ, ತುರ್ತು ನಿರ್ಗಮನ ದ್ವಾರ ತೆಗೆದಿದ್ದಾನೆ. ಅಲ್ಲದೆ, ವಿಮಾನದ ರೆಕ್ಕೆಯ ಮೇಲೆ ಓಡಾಡಿದ್ದಾನೆ. ಪ್ರಯಾಣಿಕನ ವರ್ತನೆಯಿಂದ ವಿಮಾನದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು ಎಂದು ತಿಳಿದುಬಂದಿದೆ.

“ವಿಮಾನದ ಹಾರಾಟ ವಿಳಂಬವಾದ ಕಾರಣ ಪ್ರಯಾಣಿಕನು ಎಮರ್ಜನ್ಸಿ ಎಕ್ಸಿಟ್‌ ತೆಗೆದು, ರೆಕ್ಕೆಯ ಮೇಲೆ ಓಡಾಡಿದ್ದಾನೆ. ಬೇರೆ ವಿಮಾನದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರೂ ಹಾಗೆ ಮಾಡಿದ್ದಾನೆ. ಇದರಿಂದ ಯಾರಿಗೂ ತೊಂದರೆಯಾಗಿಲ್ಲ. ಬಳಿಕ ಪ್ರಯಾಣಿಕನನ್ನು ಪೊಲೀಸರ ವಶಕ್ಕೆ ನೀಡಲಾಗಿದೆ” ಎಂದು ವಿಮಾನದ ಸಿಬ್ಬಂದಿ ತಿಳಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ದೆಹಲಿಯಲ್ಲಿ ವಿಮಾನ ಹಾರಾಟ ವಿಳಂಬವಾಯಿತು ಎಂದು ಪ್ರಯಾಣಿಕನೊಬ್ಬ ವಿಮಾನದ ಪೈಲಟ್‌ ಮೇಲೆ ಹಲ್ಲೆ ನಡೆಸಿದ್ದ. ಇದಾದ ಬಳಿಕ ಆತನನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ: SpiceJet: ಟಿಕೆಟ್‌ ಇದ್ದರೂ ಮುಂಬೈನಿಂದ ಬೆಂಗಳೂರಿಗೆ ವಿಮಾನದ ಟಾಯ್ಲೆಟ್‌ನಲ್ಲೇ ಬಂದ ವ್ಯಕ್ತಿ; ಏಕೆ?

ಕೆಲ ತಿಂಗಲ ಹಿಂದಷ್ಟೇ ಹೈದರಾಬಾದ್‌ನಿಂದ ದೆಹಲಿಗೆ ಹೊರಟ್ಟಿದ್ದ ವಿಮಾನದಲ್ಲಿ 40 ವರ್ಷದ ವ್ಯಕ್ತಿಯೊಬ್ಬರು ಏಕಾಏಕಿ ಎಮರ್ಜನ್ಸಿ ಎಕ್ಸಿಟ್‌ ಡೋರ್‌ನ ಕವರ್‌ ತೆಗೆದಿದ್ದರು. ಜುಲೈ 8ರಂದು ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಸುದ್ದಿಯಾಗಿತ್ತು. ವಿಮಾನದ 18 A ಸೀಟ್‌ನಲ್ಲಿ ಕುಳಿತಿದ್ದ ಅವರು ಎಮರ್ಜನ್ಸಿ ಎಕ್ಸಿಟ್‌ ಡೋರ್‌ ಸಮೀಪವೇ ಇದ್ದರು. ಆಗ ಇಂತಹ ವರ್ತನೆ ತೋರಿದ ಕಾರಣ ಕೆಲ ಕಾಲ ಪ್ರಯಾಣಿಕರು ಆತಂಕಕ್ಕೀಡಾಗಿದ್ದರು. ಇದರಿಂದ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ವಿಮಾನದ ಸಿಬ್ಬಂದಿಯು ವ್ಯಕ್ತಿಯನ್ನು ಬೇರೊಂದು ಸೀಟಿನಲ್ಲಿ ಕೂರಿಸಿದ್ದಾರೆ. ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಲೇ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ವಶಕ್ಕೆ ನೀಡಲಾಗಿತ್ತು. ಆತನ ವಿರುದ್ಧ ಎಫ್‌ಐಆರ್‌ ಕೂಡ ದಾಖಲಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version