ಬೆಲೆಗಳು ಮೇಲೇರಿದಾಗ ಸಾಮಾನ್ಯ ಮನುಷ್ಯರ ಬದುಕು ಕೆಳಗೆ ಬೀಳುತ್ತದೆ ಎಂದಷ್ಟೇ ಈವರೆಗೆ ಭಾವಿಸಲಾಗಿತ್ತು. ಆದರೀಗ ಮನುಷ್ಯರನ್ನು ಮಾತ್ರವಲ್ಲ, ಪ್ರಾಣಿಗಳನ್ನೂ ಈ ಬಿಸಿ ತಟ್ಟುತ್ತಿರುವ ಸುದ್ದಿ ಜಪಾನ್‌ನಿಂದ ಬರುತ್ತಿದೆ. ಅಲ್ಲಿನ ಹಕೋನೆ-ಎನ್ ಮತ್ಸ್ಯಾಗಾರದಲ್ಲಿರುವ ಪೆಂಗ್ವಿನ್ ಮತ್ತು ನೀರುನಾಯಿಗಳು ತಮಗೆ ಕೊಟ್ಟ ಆಹಾರದ ಗುಣಮಟ್ಟ ಸಾಲದು ಎಂದು ತಿರಸ್ಕರಿಸುತ್ತಿವೆಯಂತೆ!
ಜಪಾನ್‌ನಲ್ಲಿ ಹಣದುಬ್ಬರ ದಾಖಲೆಯ ಮಟ್ಟ ತಲುಪಿದೆ. ಬೆಲೆಗಳೆಲ್ಲ ಊರ್ಧ್ವಮುಖಿಯಾಗಿರುವ ಹಿನ್ನೆಲೆಯಲ್ಲಿ, ಈ ಅಕ್ವೇರಿಯಂನ ಅಧಿಕಾರಿಗಳು ಇಲ್ಲಿನ ಜಲಚರಗಳಿಗೆ ಮೃಷ್ಟಾನ್ನದ ಬದಲು ‘ಗಂಜಿಯೂಟ’ ಕೊಡುವುದು ಅನಿವಾರ್ಯ ಎಂದು ನಿರ್ಧರಿಸಿದರು. ಅಂದರೆ, ದುಬಾರಿ ಮೀನುಗಳ ಬದಲು ಸಾದಾ ಮೀನೂಟ ನೀಡಲು ಮುಂದಾದರು. ಆದರೆ ಇವುಗಳಿಗೆ ಮಾತ್ರ ಈ ಊಟ ಪಥ್ಯವಾಗಿಲ್ಲ. ಅಗ್ಗದ ಬೆಲೆಯ ಮುಗ್ಗಿದ ಮೀನನ್ನು ನೀಡುತ್ತಿದ್ದಾರೆಂದು ಪೆಂಗ್ವಿನ್ ಮತ್ತು ನೀರುನಾಯಿಗಳು ಬಾಯಿಗೆ ಹಾಕಿದ ಆಹಾರ ಉಗಿಯುತ್ತಿವೆಯಂತೆ! ಕೆಲವು ಪ್ರಾಣಿಗಳು ಈ ಅಗ್ಗದ ಮೀನುಗಳನ್ನು ಮೂಸಿಯೂ ನೋಡುತ್ತಿಲ್ಲ. ಮತ್ತೊಂದು ಹೆಜ್ಜೆ ಮುಂದೆಯೇ ಇರುವ ಪೆಂಗ್ವಿನ್‌ಗಳಂತೂ ಈ ಮೀನೂಟದತ್ತ ತಿರುಗಿಯೂ ನೋಡುತ್ತಿಲ್ಲ. ಮತ್ಸ್ಯಾಲಯದ ಅಧಿಕಾರಿಗಳು ಈಗ ಫಜೀತಿಗೆ ಸಿಲುಕಿದ್ದಾರೆ.
ಇದನ್ನೂ ಓದಿ| Shinzo Shooting: ಜಪಾನ್‌ಗೆ ಅಬೆನಾಮಿಕ್ಸ್ ಕೊಟ್ಟ ಶಿಂಜೊ, ʻಅಬ್ಬಾʼ ಎನಿಸುವ 10 ವಿಶೇಷ ಸಂಗತಿಗಳು
ʻದುಬಾರಿಯ ಮೀನುಗಳ ಬದಲಿಗೆ ಅಗ್ಗದ ಮೀನುಗಳನ್ನು ನೀಡಲು ನಿರ್ಧರಿಸಲಾಗಿತ್ತು. ಬಾಯಿಗೆ ಹಾಕಿದ ಮೀನುಗಳನ್ನು ಅವು ಉಗಿಯುತ್ತಿವೆ. ರುಚಿ ಹಿಡಿಸುತ್ತಿಲ್ಲ ಎಂಬಂತೆ ವರ್ತಿಸುತ್ತಿವೆʼ ಎಂದು ಮತ್ಸ್ಯಾಗಾರದ ಮುಖ್ಯಸ್ಥ ಹಿರೊಕಿ ಶಿಮಮೊಟೊ ಹೇಳಿದ್ದಾರೆ. ಎರಡು ತಿಂಗಳ ಹಿಂದೆಯೇ ಈ ಕ್ರಮವನ್ನು ಮತ್ಸ್ಯಾಲಯದಲ್ಲಿ ಆರಂಭಿಸಲಾಗಿತ್ತು. ಆದರೆ ಇತ್ತೀಚೆಗೆ ಅವುಗಳ ಊಟದ ಬಹುಪಾಲು ಅಗ್ಗದ ಮೀನುಗಳೇ ತುಂಬಿರುತ್ತವೆ. ʻಇದನ್ನು ತಿನ್ನಲು ನಿರಾಕರಿಸುವ ಪ್ರಾಣಿಗಳಿಗೆ, ಅವುಗಳು ತಿನ್ನುವ ಆಹಾರವನ್ನೇ ನೀಡುತ್ತಿದ್ದೇವೆʼ ಎಂದು ಶಿಮಮೊಟೊ ತಿಳಿಸಿದ್ದಾರೆ.
ಈ ಕುರಿತಾಗಿ ಹಂಚಿಕೊಳ್ಳಲಾದ ಟ್ವೀಟ್‌ಗಳಿಗೆ ನೆಟ್ಟಿಗರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಈ ಅವಸ್ಥೆಗೆ ಬೇಸರ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ವ್ಯಂಗ್ಯವಾಡಿದ್ದಾರೆ. ʻಈ ಪ್ರಾಣಿಗಳನ್ನು ಪ್ರಕೃತಿಯ ಮಡಿಲಿಗೆ ಮರಳಿಸಿಬಿಟ್ಟರೆ ಅವು ಬದುಕುವುದಿಲ್ಲ, ಸರಿ. ನಿಸರ್ಗದ ಅಪಾಯಗಳ ಬಗ್ಗೆಯಾಗಲೀ, ಆಹಾರ ಹೊಂಚುವ ಬಗ್ಗೆಯಾಗಲೀ ಅವಕ್ಕೆ ಗೊತ್ತಿಲ್ಲ. ಹಾಗೆಂದು ಅವಕ್ಕೆ ತಿನ್ನಲಾಗದ ಆಹಾರ ಕೊಡುತ್ತಿದ್ದರೆ, ಕೆಲವು ವಾರಗಳಲ್ಲಿ ಅವು ತಾನಾಗಿಯೇ ಸಾಯುತ್ತವೆʼ ಎಂದು ಪ್ರಾಣಿಪ್ರಿಯರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ| ಜಪಾನ್‌ನಲ್ಲಿ ವರ್ಷಕ್ಕೊಂದು Gun ವಿತರಣೆಯಾದರೆ ದೊಡ್ಡ ವಿಷಯ! ಹೀಗಿರುವಾಗ…